ಬೂತಯ್ಯನ ಯಾನ ಮತ್ತು ಟೈಟಾನಿಕ್

ಬೂತಯ್ಯನ ಯಾನ ಮತ್ತು ಟೈಟಾನಿಕ್
Updated on: 

ಈ ಚಿತ್ರದ ನಿರ್ಮಾಪಕರಿಬ್ಬರು ಈಗಿಲ್ಲ. ಇದರ ನಿರ್ದೇಶಕ ಸಿದ್ದಲಿಂಗಯ್ಯ ಮುಪ್ಪಿನ ನೆರಳಿನಲ್ಲಿ ಆ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಪ್ರಮುಖ ಪಾತ್ರಧಾರಿಗಳಾದ ಎಂ.ಪಿ. ಶಂಕರ್, ಲೋಕೇಶ್, ವಿಷ್ಣುವರ್ಧನ್, ದಿನೇಶ್, ಧೀರೇಂದ್ರ ಗೋಪಾಲ್ ಹೀಗೆ ಬಹುತೇಕರು ನಮ್ಮಿಂದ ದೂರವಾಗಿದ್ದಾರೆ. ಆದರೆ, ಇವರ ಅಭಿನಯದ ಆ ಸಿನಿಮಾ ಮಾತ್ರ ಮರೆಯಾಗಿಲ್ಲ. ಈಗಲೂ ನೆನಪಾಗುವ, ಮತ್ತೆ ನೋಡುವ ಕಾತರ ಹುಟ್ಟಿಸುವ, 'ಹಳೇ ಚಿತ್ರ, ಹೊಸ ನೋಟ- ಓದು' ಎನ್ನುವ ಆ ಚಿತ್ರವೇ 'ಬೂತಯ್ಯನ ಮಗ ಅಯ್ಯು'. ಅರವತ್ತು, ಎಪ್ಪತ್ತು, ಎಂಭತ್ತರ ದಶಕಕ್ಕೆ ಮರಳಿದರೆ ಅಲ್ಲಿ ಇಂಥ ಹತ್ತಾರು ಕಲಾಕೃತಿಗಳು ಮಾತನಾಡುತ್ತವೆ.
ಜಾಗತಿಕ ಸಿನಿಮಾಗಳಂತೆ ನಮ್ಮ ಚಂದನವನದ ಚಿತ್ರಗಳ ಕುರಿತು ಹೇಳುವಾಗ ಕೆಲವನ್ನು ಬಿಟ್ಟು ನಮ್ಮೂರಿನ ಟಾಕೀಸ್‌ನೊಳಗೆ ಪ್ರವೇಶ ನಿಷಿದ್ಧ. ಮಾಸ್, ಕ್ಲಾಸ್, ಆರ್ಟ್ ಎಂಬ ವಿಭಾಗಗಳನ್ನು ಮಾಡಿಕೊಂಡಿದ್ದರಿಂದಲೋ ಏನೋ, ನಿಜವಾಗಲೂ ನಮ್ಮತನವನ್ನು ಪ್ರದರ್ಶಿಸಿದ ಚಿತ್ರಗಳ ಪ್ರಭಾವ ಮತ್ತು ಅವುಗಳ ಅಂತರಂಗವನ್ನು ಬದಿಗಿಡುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಇವು ಎಂದೂ ಕಾಲನ ಕರೆಯಲ್ಲಿ ಮುಳುಗಿ ಹೋದ ಚಿತ್ರಗಳಲ್ಲ. ಪ್ರಸ್ತುತ ಸ್ಥಿತಿಗಳಿಗೆ ಎದುರಾಗಿ ನಿಲ್ಲುತ್ತಲೇ ಮತ್ತೆ ಮತ್ತೆ ನೋಡುಗರ ಪ್ರಜ್ಞೆಯನ್ನು ಮುಟ್ಟುತ್ತಿವೆ. ಹಾಗೆ ಎಚ್ಚರಿಸುವ ಚಿತ್ರ 'ಬೂತಯ್ಯನ ಮಗ ಅಯ್ಯು'. ಚಿತ್ರದ ಪ್ರತಿ ಪಾತ್ರವನ್ನು ಸೋಗಸಾಗಿ ಇಲ್ಲಿ ಸಂಯೋಜಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಿದ್ದಲಿಂಗಯ್ಯರ ಆಗಮನ 'ಆ ದ್ಯಾವ್ರು ತಂದ ಆಸ್ತಿ'. ಪುಟ್ಟಣ್ಣ ಕಣಗಾಲರ ಕಾಲದ ಪ್ರತಿಭಾವಂತ ನಿರ್ದೇಶಕರಲ್ಲಿ ಸಿದ್ದಲಿಂಗಯ್ಯ ಪ್ರಮುಖರು. ಜನಪ್ರಿಯ ನಟರಿಲ್ಲದೆ ಕಥೆಗಳ ಮೂಲಕ ಪುಟ್ಟಣ್ಣ ಪ್ರೇಕ್ಷಕರಿಗೆ ಶಾಕ್ ಕೊಟ್ಟರೆ, ಸಿದ್ದಲಿಂಗಯ್ಯ ಜನಪ್ರಿಯ ನಾಯಕನಟರನ್ನೇ ಇಟ್ಟುಕೊಂಡು ಮಾಡುತ್ತಿದ್ದ ಕಥೆಗಳಲ್ಲಿ ಪ್ರೇಕ್ಷಕ ವರ್ಗವನ್ನು ಲೀನವಾಗಿಸುತ್ತಿದ್ದರು. ಒಬ್ಬರು ಸ್ಟಾರ್ ನಟರಿಗಿಂತ ಕಥೆ ಮುಖ್ಯ ಎಂದರೆ, ಮತ್ತೊಬ್ಬರು ಸ್ಟಾರ್ ನಟರಿದ್ದರೂ ನಿರ್ದೇಶಕನಿಗೆ ತನ್ನದೇ ಆದ ತಾಕತ್ತಿದ್ದರೇ ಪ್ರತಿಭೆ ಸಾಬೀತು ಮಾಡಬಹುದು ಎನ್ನುತ್ತಿದ್ದರು. ಈ ವ್ಯತ್ಯಾಸಗಳ ನಡುವೆಯೂ ಪುಟ್ಟಣ್ಣ ಕಣಗಾಲರಿಗಿಂತ ಸಿದ್ದಲಿಂಗಯ್ಯ ಯಾವುದರಲ್ಲೂ ಕಡಿಮೆ ಇಲ್ಲ ಎನ್ನುತ್ತದೆ ಸಿನಿಮಾ ಚರಿತ್ರೆ. 25 ವರ್ಷಗಳ ತಮ್ಮ ಸಿನಿ ಪಯಣದಲ್ಲಿ 20 ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ದಲಿಂಗಯ್ಯ, ಕೌಟುಂಬಿಕತೆ, ಹಾಸ್ಯ, ದುರಂತ, ಒಳಿತು- ಕೆಡಕು, ಹಳ್ಳಿ ಪರಿಸರ ಇವುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡವರು. ಆದರೆ, ಗ್ರಾಮೀಣ ಬದುಕಿನಷ್ಟು ಪ್ರಭಾವಿಯಾಗಿ ಮತ್ತೊಂದು ವಸ್ತು ಅವರ ಚಿತ್ರಗಳನ್ನು ಆವರಿಸಿಕೊಳ್ಳಲಿಲ್ಲ. ಬಡತನದ ನೆರಳಿನಿಂದ ತಪ್ಪಿಸಿಕೊಳ್ಳಲು ನಗರಕ್ಕೆ ಬಂದು, ನವಜ್ಯೋತಿ ಸ್ಟುಡಿಯೋದಲ್ಲಿ ಕಾರ್ಮಿಕನಾಗಿ ಸೇರಿ ಅಲ್ಲಿಂದ ಮದ್ರಾಸಿಗೆ ಹೋದ ಸಿದ್ದಲಿಂಗಯ್ಯ, ಬಿ.ವಿ. ವಿಠಲಾಚಾರ್ಯರ ಬಳಿ ಸಹಾಯಕರಾಗಿ ಸೇರಿಕೊಂಡರು. 1970ರಲ್ಲಿ ಬಂದ 'ಮೇಯರ್ ಮುತ್ತಣ್ಣ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಮುಂದೆ ಡಾ. ರಾಜ್‌ಕುಮಾರ್ ಅಭಿನಯದ 'ಬಾಳು ಬೆಳಗಿತು' ಚಿತ್ರದಿಂದ ಆರಂಭವಾದ ಇವರ ಯಶಸ್ಸಿನ ಪಯಣ 'ನಮ್ಮ ಸಂಸಾರ', 'ತಾಯಿ ದೇವರು', 'ನ್ಯಾಯವೇ ದೇವರು' ಚಿತ್ರಗಳವರೆಗೂ ಸಾಗಿತು.
ಸಿದ್ದಲಿಂಗಯ್ಯನವರ ಬಹುತೇಕ ಚಿತ್ರಗಳು ಗ್ರಾಮಗಳ ಪುನರ್ ನಿರ್ಮಾಣದ ಕನಸುಗಳಂತೆ ಕಾಣುತ್ತವೆ. ಒಂದು ಹಂತದಲ್ಲಿ ತಮಿಳಿನ ಭಾರತೀರಾಜನ ಹಾಗೆ ಹಳ್ಳಿ ಪರಿಸರವನ್ನು ಕನ್ನಡದ ತೆರೆ ಮೇಲೆ ತೆರೆದಿಟ್ಟರು. ಅಭೂತಪೂರ್ವ ಯಶಸ್ಸು ಕಂಡ 'ಬಂಗಾರದ ಮನುಷ್ಯ'ನನ್ನು ಮಾತ್ರವಲ್ಲ, ಬಂಗಾರದಂಥ ಪ್ರೇಕ್ಷಕ ವರ್ಗವನ್ನೂ ಕಟ್ಟಿದ ವ್ಯಕ್ತಿ. ಹಲವು ಚಿತ್ರಗಳ ನಡುವೆ ಸಿದ್ದಲಿಂಗಯ್ಯರ ವೃತ್ತಿ ಬದುಕನ್ನು ಪರಕಾಷ್ಠೆಗೆ ತೆಗೆದುಕೊಂಡು ಹೋಗಿದ್ದು 'ಬೂತಯ್ಯನ ಮಗ ಅಯ್ಯು'. ಕಥೆ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರದ್ದು. 46 ಪುಟಗಳ ದೀರ್ಘ ಕಥೆಗೆ ದೃಶ್ಯ ರೂಪ ಕೊಡಲಾಗಿದೆ. ಇಂಗ್ಲಿಷಿನ 'ಟೈಟಾನಿಕ್‌' ಚಿತ್ರದಲ್ಲಿ ಮುಳುಗುವ ಹಡಗಿನ ದೃಶ್ಯ ನೋಡಿ ರೋಮಾಂಚನಗೊಂಡ ಪ್ರೇಕ್ಷಕವರ್ಗ ಮತ್ತೊಮ್ಮೆ 'ಬೂತಯ್ಯನ ಮಗ ಅಯ್ಯು' ನೋಡಿದರೆ 'ಅರೇ, ನಮ್ಮವರೇ ಆಗಲೇ ಟೈಟಾನಿಕ್ ತೋರಿಸಿದ್ದಾರಲ್ಲ?' ಎಂದು ಉದ್ಗರಿಸುತ್ತೇವೆ. ಅದಕ್ಕೆ ಕಾರಣ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಪ್ರವಾಹದ ಅಬ್ಬರ. ರೌದ್ರಾವತಾರ ತಾಳುವ ನೀರಿನ ನಡುವೆ ಮುಳುಗುತ್ತಿರುವ ಮನೆ, ಅದರ ಮೇಲೆ ಅಮ್ಮ, ಮಕ್ಕಳು... ಪದಗಳಲ್ಲಿ ಹೇಳುವಷ್ಟು ಸುಲಭವಲ್ಲದ ಈ ದೃಶ್ಯ ಯಾವ ಟೈಟಾನಿಕ್‌ಗೂ ಕಡಿಮೆ ಅಲ್ಲ. ಡಿ.ವಿ. ರಾಜಾರಾಂ ಕ್ಯಾಮೆರಾದ ಕಣ್ಣು ಎಷ್ಟು ಪ್ರಭಾವಿಯಾಗಿತ್ತು ಎಂಬುದಕ್ಕೆ ಇದು ಸಾಕ್ಷಿ.
ಜಿಪುಣ ಬೂತಯ್ಯ, ಒಳ್ಳೆಯ ಮನಸ್ಸಿನ ದೇವಯ್ಯ, ದ್ವೇಷ ಮತ್ತು ಒಳ್ಳೆಯತನದ ಅಯ್ಯು, ಸ್ವಾಭಿಮಾನಿ ಗುಳ್ಳ, ಎರಡು ಕುಟುಂಬಗಳ ನಡುವಿ ಸಂಘರ್ಷದಿಂದ ಛಿದ್ರವಾಗುತ್ತಿರುವ ಹಳ್ಳಿಯನ್ನು ಸರಿದಾರಿಗೆ ತರುವ ಕ್ಷೀಣ ದನಿಯ ಹೆಣ್ಣು ಪಾತ್ರಗಳು, ಹಳ್ಳಿಗರನ್ನು ಬೀದಿಗೆ ನಿಲ್ಲಿಸುವ ಕರಿ ಕೋಟಿನ ಕಾನೂನು ಪಂಡಿತರು, ಪ್ರೀತಿ  ಪ್ರೇಮ, ಕೇಳಲು ಇಷ್ಟವಾಗುವ ಎರಡು ಹಾಡು, ವಿಷಾದ ಗೀತೆ, ಒಂದಿಷ್ಟು ತಮಾಷೆ, ಕಿತ್ತು ತಿನ್ನುವ ಬಡತನವನ್ನು ಶಪಿಸುವ ಊರ ಮಂದಿ... ಹೀಗೆ ಹಳ್ಳಿಯ ಎಲ್ಲ ದಾರಿಗಳಲ್ಲೂ ಪಯಣಿಸುವ 'ಬೂತಯ್ಯ'ನ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಗರ ಮಾಫಿಯಾದ ಅಬ್ಬರಕ್ಕೆ ಬೆಳ್ಳಿತೆರೆಯಿಂದ ಮರೆಯಾಗುತ್ತಿರುವ ಗ್ರಾಮೀಣ ಕಥೆಗಳನ್ನು ನೆನಪು ಮಾಡುತ್ತದೆ. 'ನಮ್ಮ ಬದುಕಿಗಿಂತ ದೊಡ್ಡ ಸಿನಿಮಾ ಮತ್ತೊಂದಿಲ್ಲ' ಎನ್ನುವಂತೆ ನಮ್ಮ ಹಳ್ಳಿಗಳ ಬದುಕನ್ನೇ ನಿರ್ದೇಶಕರು ಇಲ್ಲಿ ನಿರೂಪಿಸಿದ್ದಾರೆ. ಲೋಕೇಶ್‌ರಿಗೆ ರಾಜ್ಯಪ್ರಶಸ್ತಿ ಮಾತ್ರವಲ್ಲ, 'ನಾಗರಹಾವು' ಚಿತ್ರದ ನಂತರ ವಿಷ್ಣುವರ್ಧನ್‌ರಿಗೆ ಮರು ಹುಟ್ಟು ನೀಡಿದ ಚಿತ್ರವಿದು. ಉಪ್ಪಿನ ಕಾಯಿ ಕದಿಯುವ ಅಂಕಲ್ ಲೋಕನಾಥ್, ದುರಳ ಬುದ್ಧಿಯ ಧೀರೇಂದ್ರ ಗೋಪಾಲ್ ಯಾರ ಅಭಿನಯದ ಬಗ್ಗೆಯೂ ಇಲ್ಲಿ ಮಾತನಾಡುವಂತಿಲ್ಲ. ಹಡಗಿನ ಜೊತೆಗೆ ನೂರಾರು ಮಂದಿಯನ್ನು ತಿಂದು ತೇಗಿದ ಇಂಗ್ಲಿಷಿನ 'ಟೈಟಾನಿಕ್‌' ಅನ್ನು ನಾವು ಮರೆಯಬಹುದು. ಆದರೆ ಯಾರನ್ನೂ ನುಂಗದ ಕನ್ನಡದ ತೆಪ್ಪ, ನೀರಿನ ರೌದ್ರಾವತಾರವನ್ನು ಮರೆಯಲುಂಟೆ? ಇಲ್ಲಿನ ಹಳ್ಳಿ ಹಾಗೂ ಅಲ್ಲಿನ ಪರಿಸರ ನಮ್ಮೂರನ್ನು ನೆನಪಿಸುವುದಿಲ್ಲವೇ? ಒಮ್ಮೆ ಈ ಚಿತ್ರವನ್ನು ನೋಡಿ. ಇದರ ನಿರ್ಮಾಪಕರಾದ ಎನ್. ವೀರಾಸ್ವಾಮಿ ಹಾಗೂ ಚಂದುಲಾಲ್ ಜೈನ್‌ರ ಆತ್ಮಗಳು ಸಂಭ್ರಮಿಸುತ್ತವೆ.

- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com