ಸಾಪ್ತಾಹಿಕಪ್ರಭ

ಮನದಲ್ಲರಳಿದ ರಂಗೋಲಿ

ಮನದಲ್ಲರಳಿದ ರಂಗೋಲಿ
Published On :

ಪ್ರತಿ ದಿನವೂ ಅದೇ ಮುದ್ದಾದ ಎಳೆ, ಅದೇ ಸುಂದರ ಗೆರೆ, ಅದಕ್ಕೊಪ್ಪುವ ಬಣ್ಣ-ಬರೆ, ಮಧ್ಯದಲ್ಲಿ ಇಣುಕುವ ಚುಕ್ಕಿಗಳು. ಆಗಷ್ಟೇ ಕಣ್ಣುಬಿಟ್ಟ ಸೂರ್ಯನ ಹೊಂಗಿರಣದೊಂದಿಗೆ ಸರಸಕ್ಕೆ ಬಿದ್ದಂತೆ ಆ ಮನೆಯೆದುರಿನ ರಂಗೋಲಿ ನವಿರಾಗಿ ಕಂಗೊಳಿಸುತ್ತಿದ್ದರೆ ನನಗೆ ಅದನ್ನು ಹರವಿಟ್ಟ ಸುಂದರಿಯದೇ ನೆನಪು. ಜತೆಗೊಂದು ಅಚ್ಚರಿ, ಒಂದು ದಿನ ಕಂಡದ್ದು ಮರುದಿನವಿಲ್ಲ. ಒಂದರಂತೆ ಇನ್ನೊಂದಿಲ್ಲ. ಒಂದೊಂದು ದಿನವೂ ಒಂದೊಂದು ವಿನ್ಯಾಸ, ವಿಶೇಷ. ಒಮ್ಮೆ ಬಳ್ಳಿ ಹರಿದಾಡಿದ್ದರೆ, ಇನ್ನೊಮ್ಮೆ ಹೂವರಳಿ ನಿಲ್ಲುತ್ತಿತ್ತು. ಮತ್ತೊಮ್ಮೆ ಬಿಡಿಸಲಾರದ ಕಗ್ಗಂಟಿನಂತೆ ಒಂದರೊಳಗೆ ಒಂದು ಹೆಣೆದ ಸರ್ಪಗಳ ಹೆಡೆ. ಕೌತುಕಕ್ಕೆ ಕೊನೆಯಿಲ್ಲದ ಚಿತ್ತಾರಗಳವು. ಸ್ವಸ್ತಿಕ, ಪದ್ಮ, ಪಲ್ಲವಿ, ರಂಜಬಟ್ಟಲು, ಶಂಖ-ಚಕ್ರಗಳ ದಾಂಗುಡಿ, ತುಳಸಿಯ ಪಾವಿತ್ರ್ಯ, ಎಳೆಗಳ ವೈಚಿತ್ರ್ಯ, ದೀಪಗಳ ಸಾಲು, ಕೃಷ್ಣ-ಗಣಪರಿಗೂ ಅದರಲ್ಲಿ ಪಾಲು...ಮುಗಿಯದ ಎಳೆಗಳ ಸವಾಲು. ಮೂರರಿಂದ ಆರಕ್ಕೇರುವ, ಹದಿನಾರರಿಂದ ಹದಕ್ಕೆ ತರುವ ಚುಕ್ಕಿಗಳ ಸಾಮ್ರಾಜ್ಯ. ಎಲ್ಲಿಂದ ಆರಂಭವಾಗಿ ಎಲ್ಲಿಗೆ ಕೊನೆಗೊಂಡಿದೆ ಎಂಬುದನ್ನೇ ಅರಿಯಲಾರದ, ಬಿಡಿಸಿದಷ್ಟೂ ಸುತ್ತಿಕೊಳ್ಳುವ, ನೋಡಿದಷ್ಟೂ ಸೆಳೆದುಕೊಳ್ಳುವ ಆ ರಂಗೋಲಿ ಮಾತ್ರ ನನ್ನನ್ನು ತನ್ನ ಸೌಂದರ್ಯದಲ್ಲಿ ಕಟ್ಟಿಹಾಕಿಬಿಟ್ಟಿತ್ತು. ಒಂದೇ ಒಂದು ಗೆರೆಯೂ ಸಹ ಓರೆಯಿಲ್ಲ, ಒಂದೆಡೆಯೂ ಕೋರೆಯಿಲ್ಲ. ಸ್ಕೇಲ್, ತ್ರಿಜ್ಯ, ಕೈವಾರಗಳನ್ನು ಇಟ್ಟುಕೊಂಡೇ ಮೂಡಿಸಿದಂತೆ. ಅದೆಷ್ಟು ಮೃದುವಾಗಿ ಮೂಡಿಬರುತ್ತಿದ್ದವೆಂದರೆ ಒಮ್ಮೆ ನೋಡಿದವರು ಮತ್ತೆ ಕಣ್ಣು ಕೀಲಿಸುವುದನ್ನೇ ಮರೆತುಬಿಡಬೇಕು.

ನನಗಾಗುತ್ತಿದ್ದುದೂ ಅದೇ. ಆ ಬೆಳ್ಳಂಬೆಳಗ್ಗೆ, ಅದು ಸುರಿಯುವ ಮಳೆಯಿರಲಿ, ಕೊರೆಯುವ ಚಳಿಯಿರಲಿ, ಬಸಿಯುವ ಬೆವರ ದಿನಗಳಿರಲಿ ಹೊತ್ತು ಮೂಡುವ ಮೊದಲೇ ಸೈಕಲ್ ತುಳಿದುಕೊಂಡು ಬೆಂಗಳೂರಿನ ಬಸ್‌ಗೆ ಬರುವ ಪೇಪರ್ ಬಂಡಲ್‌ಗೆ ಕಾಯುವುದು ತಪ್ಪುತ್ತಿರಲಿಲ್ಲ. ಐದಕ್ಕೆಲ್ಲಾ ಬಂದು ಬೀಳುತ್ತಿದ್ದ ಬಂಡಲ್‌ಗಳನ್ನು ಬೇರ್ಪಡಿಸಿಕೊಂಡು, ಪುರವಣಿಗಳನ್ನು ಆತುರಾತುರವಾಗಿ ಒಂದರೊಳಗೊಂದು ತುರುಕಿ ಮತ್ತೆ ಸೈಕಲ್ ಏರಿದರೆ, ಮಠದ ಬೀದಿ ದಾಟಿ, ಗಾಂಧಿ ರಸ್ತೆಯಲ್ಲಿ ಹಾದು, ಕೊಂಕಣಿಗರ ಬೇಣ, ಕುಂಬಾರರ ಓಣಿ, ಮಾರಿಗುಡಿ ರಸ್ತೆ, ಶಿವಪ್ಪನಾಯಕ ಸರ್ಕಲ್, ಅಗ್ರಹಾರ ಹೀಗೆ ಎಲ್ಲಿಂದೆಲ್ಲಿಗೋ ಓಡಾಡಿ ಕೊನೆಯಲ್ಲಿ ಬರುತ್ತಿದ್ದುದು ಆ ಮನೆಯಿರುವ ಐಬಿ ರಸ್ತೆಗೆ. ಅಲ್ಲಿಯವರೆಗೆ ಏನಿಲ್ಲವೆಂದರೂ ಹತ್ತಿಪ್ಪತ್ತು ಮನೆಗಳಿಗೆ ಪೇಪರ್ ಎಸೆದಿರುತ್ತಿದ್ದೆ. ಯಾವ ಮನೆಯ ಎದುರೂ ಮೂರರಿಂದ ಐದು ಸೆಕೆಂಡ್‌ಗಿಂತ ಹೆಚ್ಚು ನಿಲ್ಲದ ನನ್ನನ್ನು ಆ ಮನೆಯ ಮುಂದಿನ ರಂಗೋಲಿ ಮಾತ್ರ ಹಿಡಿದು ನಿಲ್ಲಿಸಿಬಿಡುತ್ತಿತ್ತು.

ಇಂಥ ಎಳೆಗಳೊಡತಿಯನ್ನು ಒಮ್ಮೆಯಾದರೂ ಕಣ್ಣಾರೆ ನೋಡಿಬಿಡಬೇಕು ಎಂದು ಹಲವು ದಿನ ಪ್ರಯತ್ನಪಟ್ಟಿದ್ದಿದೆ. ಅದಕ್ಕಾಗಿಯೇ ಮುಂಚೆ ಹೊರಟದ್ದಿದೆ. ಪೇಪರ್ ರೂಟ್ ಅನ್ನೇ ಬದಲಿಸಿ ಈ ರಸ್ತೆಗೇ ಮೊದಲು ಬರುವಂತೆ ಮಾಡಿಕೊಂಡದ್ದಿದೆ. ತಾಸುಗಟ್ಟಲೇ ಮನೆಯ ಮುಂದೆ ನಿಂತು ಆಕೆ ಒಮ್ಮೆಯಾದರೂ ಹೊರಬಂದು ಇಣುಕಿಯಾಳೇ ಎಂಬ ನಿರೀಕ್ಷೆಯಲ್ಲಿ ಸೋತದ್ದಿದೆ. ಆದರೆ ಏನೇ ಮಾಡಿದರೂ ನಾನು ಬರುವ ಮುನ್ನವೇ ರಂಗೋಲಿ ಹುಡುಗಿ ತನ್ನ ಕೆಲಸ ಮುಗಿಸಿಕೊಂಡು ಒಳ ಸೇರಿಯಾಗಿರುತ್ತಿತ್ತು. ರಂಗೋಲಿ ಮಾತ್ರ ಆಕೆಯ ರಹಸ್ಯ ಸೌಂದರ್ಯದ ಪ್ರತೀಕವಾಗಿ ನಗುತ್ತಿರುತ್ತಿತ್ತು. ಪ್ರತಿದಿನವೂ ಈಗಷ್ಟೇ ರಂಗೋಲಿ ಬಿಡಿಸಿ ಆಕೆ ಒಳಹೊಕ್ಕದ್ದಕ್ಕೆ ಸಾಕ್ಷಿಯಾಗಿರುತ್ತಿತ್ತು ಹಸಿ ನೆಲ. ಇನ್ನೂ ಚಿಮುಕಿಸಿದ ನೀರು ಆರಿರುತ್ತಿರಲಿಲ್ಲ.
ಆಕೆಯ ಸ್ನಿಗ್ಧ ಸೌಂದರ್ಯ, ಅರ್ಧ ಕುಳಿತೋ, ಬಾಗಿಯೋ ಆಕೆ ರಂಗೋಲಿ ಬಿಡಿಸಬಹುದಾದ ಭಂಗಿ, ಅದಕ್ಕೂ ಮುನ್ನ ಆಕೆ ಆಗಷ್ಟೇ ತಲೆಗೆ ನೀರೆರೆದುಕೊಂಡು ಬಂದು, ನೀಳಕೂದಲಿನಿಂದ ತೊಟ್ಟಿಕ್ಕುವ ನೀರನ್ನು ತಡೆಯಲು ತಲೆಗೊಂದು ತುರುಬು ಸುತ್ತಿ, ಅದಕ್ಕೆ ಅಚ್ಚ ಬಿಳಿಯ ಬಟ್ಟೆ ಕಟ್ಟಿ... ಅದೂ ನಿಲ್ಲದೇ ಭುಜಕ್ಕೆ ಬಂದು ನಿಲ್ಲುವ ಹೇರಳ ಹೆರಳಿನ ಸೌಂದರ್ಯ, ಉಟ್ಟ ಸೀರೆಯೋ, ತೊಟ್ಟ ಲಂಗವೋ, ಹಾಕಿದ ದಾವಣಿಯೋ ಅಂತೂ ನಟ್ಟನಡುವೆ ಕೊಂಕಿಸಿ ನಿಲ್ಲುವ ಆಕೆಯ ನಡು, ಕೆಣಕುವ ಎದೆ, ಮಿಟುಕಿಸುವ ಕಣ್ಣು, ನುಣುಪು ಕೈ...ಕಲ್ಪನೆಯ ಓಘಕ್ಕೆ ಸಿಲುಕಿ ಎಷ್ಟೋ ಬಾರಿ ನಾನು ಕೊಚ್ಚಿ ಹೋದದ್ದಿದೆ. ಆದರೂ ಆಕೆಯ ಚಂದದ ವದನದ ದರ್ಶನ ಆಗುತ್ತಿರಲೇ ಇಲ್ಲ.

ಇಂದಲ್ಲಾ ನಾಳೆ ಆಕೆಯನ್ನು ನೋಡೇ ನೋಡುತ್ತೇನೆಂಬ ಆಶಾಭಾವದಲ್ಲಿ ಮತ್ತೆ ಸೈಕಲ್ ಏರುತ್ತಿದ್ದೆ. ಆದರೆ ಆವತ್ತು ನಿಜಕ್ಕೂ ಕಂಗಾಲಾದೆ. ಎಂದಿನಂತೆ ಆ ಮನೆಯೆದುರು ಚಿತ್ತ ಸೆಳೆಯುವ ಚಿತ್ತಾರವೇ ಇರಲಿಲ್ಲ. ಮತ್ತೆ ಅಲ್ಲಿ ಉಳಿದೆಲ್ಲ ಜೀವಂತಿಕೆ ಹೇಗೆ ಉಳಿದೀತು? ಎಲ್ಲೋ ಹೋಗಿರಬಹುದು, ನಾಳೆ ಬಂದಾಳು ನನ್ನ ರಂಗೋಲಿ ಹುಡುಗಿ ಎಂದು ನನ್ನನ್ನೇ ಸಂತೈಸಿಕೊಂಡು ಮುನ್ನಡೆದೆ. ದಿನಗಳು ವಾರಗಳಾದವು, ವಾರ ಕಳೆದು ತಿಂಗಳಾದರೂ ರಂಗೋಲಿಯ ಸುಳಿವಿಲ್ಲ. ಕೊನೆಗೊಮ್ಮೆ ಯಾರೋ ಹೇಳಿದರು, 'ಓ ಆ ಮನೆಯ ಅಜ್ಜಿಯಾ, ಅವರು ಕಳೆದ ತಿಂಗಳು ತೀರಿಕೊಂಡರು. ಪಾಪ ತುಂಬಾ ವಯಸ್ಸಾಗಿತ್ತು. ಅವರಿಗೆ ರಂಗೋಲಿ ಅಂದ್ರೆ ಪ್ರಾಣವಾಗಿತ್ತು. ಅವತ್ತು ಬೆಳಗ್ಗೆನೂ ರಂಗೋಲಿ ಹಾಕಿ, ಇನ್ನೇನು ಹೊಸಿಲು ದಾಟಿರಲಿಲ್ಲ. ಅಲ್ಲೇ ಬಿದ್ದು ಪ್ರಾಣಬಿಟ್ಟರು. ಎಂಥಾ ಪುಣ್ಯದ ಸಾವು ನೋಡಿ...' ಅವರು ಹೇಳುತ್ತಲೇ ಇದ್ದರು. ನನಗೆ ಮುಂದಿನದೇನೂ ಕೇಳಿಸಲಿಲ್ಲ. ಆಕೆ ನನ್ನ ಮನದಲ್ಲಿ ಬಿಡಿಸಿ ಹೋದ ರಂಗವಲ್ಲಿ ಮಾತ್ರ ಇಂದಿಗೂ ರಂಗು ಕಳೆದುಕೊಳ್ಳಲಿಲ್ಲ.

- ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.