

ಕೊರೆದಿಟ್ಟ ಬೆಟ್ಟದ ಸಾಲು. ವೈಶಿಷ್ಟ್ಯಪೂರ್ಣ ತಿರುವೊಂದರಲ್ಲಿ ಕಾಣಸಿಗುತ್ತದೆ ಈ ಜಲಧಾರೆಯ ಸೊಬಗು. ಮಳೆ ಬಿದ್ದ ಕೂಡಲೇ ಸವದತ್ತಿಯ ಯಲ್ಲಮ್ಮನಗುಡ್ಡಕ್ಕೆ ಹೋಗುವ ದಾರಿಯಲ್ಲಿ ಜೋಗುಳಬಾಂವಿಯಿಂದ ಅರ್ಧ ಕಿ.ಮೀ. ಅಂತರದಲ್ಲಿ ಈ ಜಲಪಾತದ ವೈಭವ ಕಾಣಿಸುತ್ತದೆ.
ಸವದತ್ತಿಯಿಂದ 2 ಕಿ.ಮೀ. ದೂರದಲ್ಲಿ ರಮಣೀಯ ಪರಿಸರದಲ್ಲಿ ಭೋರ್ಗರೆಯುವ ಈ ಜಲಪಾತ ಕೇವಲ ಮಳೆಗಾಲದಲ್ಲಷ್ಟೇ ದರ್ಶನ ಕೊಡುತ್ತದೆ. ಕಳೆದವಾರ ಇಲ್ಲಿ ಅಪರೂಪದ ಮಳೆ ಬಂತು. ಆ ವೇಳೆ ಜಲಧಾರೆ ಮೈದುಂಬಿ, ತನ್ನ ಸೊಬಗು ಪ್ರದರ್ಶಿಸಿತು. ದಾರಿಹೋಕರನೇಕರು ಇದರ ದಡದಲ್ಲಿ ಸ್ನಾನ ಮಾಡಿದರು. ಖಾಸಗಿ ವಾಹನದವರು ತಮ್ಮ ವಾಹನಗಳನ್ನು ತೊಳೆದು ಮುಂದೆ ಹೊರಟು ಜಲಧಾರೆಗೊಂದು ಧನ್ಯವಾದ ಹೇಳಿದರು.
ಆಗಷ್ಟೇ ಮಳೆ ಸುರಿದಿದ್ದರಿಂದ ಬೆಟ್ಟದ ಕಲ್ಲುಗಳಲ್ಲಿ ಅಲ್ಲಲ್ಲಿ ನೀರು ಜಿನುಗುತ್ತಿತ್ತು. ಹಾಗೆಯೇ ಸಾವಕಾಶವಾಗಿ ಬೆಟ್ಟ ಏರತೊಡಗಿದೆ. ಒಂದು ಕ್ಷಣ ಎಲ್ಲಿ ಬಿದ್ದುಬಿಡುವೆನೋ ಎಂಬ ಭಯ ಕಾಡಿದರೂ ಭೀತನಾಗದೆ ಚಾರಣಿಗರಂತೆ ಹತ್ತುವ ಸಾಹಸ ಮಾಡಿದೆ. ಮಲೆನಾಡಿನಲ್ಲಾದರೆ ಇಂಥ ಜಲಧಾರೆಗಳು ಸಾಕಷ್ಟು ಸಿಗುತ್ತವೆ. ಬಯಲುಸೀಮೆಯ ಜನರಿಗಿದು ಇದು ವಿರಳ ವರ.
ಈ ಬೆಟ್ಟದಲ್ಲಿ ಸಾಮಾನ್ಯವಾಗಿ ಕುರಿಗಾಹಿಗಳು, ದನ ಕಾಯುವವರು ಸಂಚರಿಸುತ್ತ ಸಂಜೆ ಹೊತ್ತಿಗೆ ತಮ್ಮ ತಮ್ಮ ಮನೆ ಸೇರುವ ದೃಶ್ಯ ಹೊರತುಪಡಿಸಿದರೆ ಬೇರಾರೂ ಇಲ್ಲಿ ಸಂಚರಿಸುವುದು ಕಡಿಮೆ.
ನೀವು ಬರುತ್ತೀರಾ?
ಬೆಂಗಳೂರಿನಿಂದ ಬರುವವರು ಹುಬ್ಬಳ್ಳಿ ಮಾರ್ಗವಾಗಿ ಸವದತ್ತಿಗೆ ಬರಬೇಕು. ಧಾರವಾಡ, ಬೆಳಗಾವಿಯ ಕಡೆಗಳಿಂದಲೂ ಬಸ್ ಸೌಕರ್ಯವುಂಟು. ಸವದತ್ತಿಗೆ ಬಂದು ಅಲ್ಲಿಂದ ಜೋಗುಳಬಾಂವಿಯತ್ತ ಹೋಗುವ ಯಾವುದೇ ಬಸ್‌ಗಳಲ್ಲಿ ಸಾಗಬೇಕು. ಜೋಗುಳಬಾಂವಿಯಲ್ಲಿಳಿದು ಕಾಲ್ನಡಿಗೆ ಅಥವಾ ರಿಕ್ಷಾಗಳಲ್ಲಿ ಇಲ್ಲಿಗೆ
ಬರಬಹುದು.
- ವೈ.ಬಿ. ಕಡಕೋಳ