ಪುಟಾಣಿಗಳೆ, 'ಚಾಕೊಲೆಟ್ ಬೇಕು' ಅಂತ ಹಠ ಮಾಡಿದ್ರೆ ಅಮ್ಮ ಬಯ್ತಾಳೆ ಅಲ್ವಾ? ಈ ಬಾರಿ, 'ನಾನು ತಿನ್ನಲ್ಲ. ಪ್ಲೀಸ್...ಎರಡು ಚಾಕೊಲೆಟ್ ಕೊಡ್ಸಿ. ಎಕ್ಸ್ಪಿರಿಮೆಂಟ್ ಮಾಡ್ತೀನಿ' ಅನ್ನಿ. ಏನ್ ಮಾಡ್ತಾರೆ ನೋಡೋಣ ಅಂತಾದ್ರೂ ಕೊಡಿಸ್ತಾರೆ. ನೆನಪಿರಲಿ. ಎರಡೂ ಒಂದೇ ಗಾತ್ರದವು ಆಗಿರಲಿ. ಚೌಕಾಕಾರದ್ದು ಆದರೆ ಇನ್ನೂ ಒಳ್ಳೆಯದು.
ಏನಪ್ಪಾ ಮಾಡ್ಬೇಕು ಅಂದ್ರೆ ಒಂದು ಚಾಕೊಲೆಟ್ ಅನ್ನು ಪೇಪರ್ ಪ್ಲೇಟ್ನಲ್ಲಿಟ್ಟು ರೂಮಿನಲ್ಲೇ ಇಟ್ಟುಕೊಂಡಿರಿ. ಅದು ಕರಗಲು ಎಷ್ಟು ಸಮಯ ಬೇಕು? 10 ನಿಮಿಷದ ನಂತರ ಎಷ್ಟು ಮೃದುವಾಗಿದೆ? ಇದನ್ನು ಬರೆದಿಟ್ಟುಕೊಳ್ಳಿ. ಈಗ ಮತ್ತೊಂದು ಚಾಕೊಲೆಟ್ ಅನ್ನು ಬಿಸಿಲಿನಲ್ಲಿ ಇಡಿ. ಅದು ಎಷ್ಟು ಹೊತ್ತಿಗೆ ಕರಗುತ್ತದೆ? 10 ನಿಮಿಷದ ಬಳಿಕ ಎಷ್ಟು ಮೃದುವಾಗಿರುತ್ತದೆ? ಅದನ್ನೂ ಬರೆದಿಟ್ಟುಕೊಳ್ಳಿ. ಥರ್ಮಾಮೀಟರ್ ಇದ್ದರೆ ಎರಡೂ ಕಡೆಯ ಉಷ್ಣಾಂಶ ಬರೆದಿಟ್ಟುಕೊಳ್ಳಿ. ಈಗ ಎರಡನ್ನೂ ಹೋಲಿಸಿ.
ಬಿಸಿಲಿನಲ್ಲಿಟ್ಟಾಗ ಬೇಗ ಕರಗುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅಮ್ಮ ಮತ್ತೆ ಕೊಡ್ಸಿದ್ರೆ ಮುಂದಿನ ಸಲ ಇನ್ನೂ ದಟ್ಟಬಣ್ಣದ (ಡಾರ್ಕ್) ಚಾಕೊಲೆಟ್ ಉಪಯೋಗಿಸಿ ಇದೇ ಪ್ರಯೋಗ ಪುನರಾವರ್ತನೆ ಮಾಡಬಹುದು.