ಮನೇಲಿ ಆಡಿ ಕವಡೆ ಆಟ

Updated on: 




ಮಳೆಗಾಲದಲ್ಲಿ ಇಲ್ಲವೇ ಮಧ್ಯಾಹ್ನದ ಸುಡು ಬಿಸಿಲಲ್ಲಿ ಮಕ್ಕಳು ಹೊರಗೆ ಹೋಗಿ ಆಟ ಆಡುವುದು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ಕವಡೆಗಳನ್ನು ಹುಡುಕಿ ತಂದು ಆಟ ಆಡುತ್ತಾರೆ. ನಾಲ್ಕು ಕವಡೆಗಳನ್ನು ತೆಗೆದುಕೊಂಡು ಮುಂಗೈ ಮೇಲೆ ಬೀಳುವಂತೆ ಹಾಕಿಕೊಳ್ಳುವುದರಿಂದ ಕವಡೆ ಆಟ ಆರಂಭ. ಮುಂಗೈಯಲ್ಲಿ ಒಂದೆರಡು ಕವಡೆ ಉಳಿದು ಒಂದೆರಡು ಕೆಳಗೆ ಬೀಳುತ್ತವೆ. ನಾಲ್ಕು ಕವಡೆಗಳು ಬೆನ್ನು ಮೇಲೆ ಬೀಳುವಂತೆ ಅಥವಾ ನಾಲ್ಕು ಕೆಳಮುಖವಾಗುವಂತೆ ನೋಡಿಕೊಳ್ಳಬೇಕು. ಹಾಗೆ ಆಗದಿದ್ದರೆ ಅವರ ಆಟ ಹೋದಂತೆ, ಮುಂದಿನವರ ಸರದಿ. ನಾಲ್ಕು ಮೇಲ್ಮುಖ ಎಂಟು ಗೆಲ್ಲಂಕ. ನಾಲ್ಕು ಕೆಳಮುಖ ಬಿದ್ದರೆ ನಾಲ್ಕು ಗೆಲ್ಲಂಕ ಸಿಗುತ್ತದೆ. 10 ಅಂಕ ಇಲ್ಲವೇ 20, 50... ಹೀಗೆ ಹುಂಡ ಮಾಡಿಕೊಂಡು ಆಡಬಹುದು.
ದಚ್ಚಿ: ಇದು ಕವಡೆಗಳನ್ನು ಹಾಕಿ ಆಡುವ ಮತ್ತೊಂದು ಆಟ. ಕವಡೆ ಹಾಕಿದಾಗ ನಾಲ್ಕು ಕವಡೆಗಳು ತಲೆಕಾಳಗಾಗಿ ಬಿದ್ದರೆ 'ದಚ್ಚಿ' ಎಂದು ಬಾಚಿಕೊಳ್ಳಲು ಕೈ ಹಾಕುತ್ತಾರೆ. ಯಾರು ಎಷ್ಟು ಕವಡೆಗಳನ್ನು ತೆಗೆದುಕೊಳ್ಳುವರೋ ಅವರಿಗೆ ಅಷ್ಟು 'ಗೀಚಿ' ಆದಂತೆ. 20 ಗೆಲ್ಲಂಕಗಳಿಗೆ ಒಂದು ಗೀಚಿ. ಇದನ್ನು ಇಪ್ಪತ್ತರಾಟ ಎನ್ನುತ್ತಾರೆ. ಒಂದು ಗೀಚಿ ಮಾಡಿದವರು ಪುನಃ ಆಟವನ್ನು ಮೊದಲಿನಿಂದ ಆರಂಭಿಸುತ್ತಾರೆ. ಯಾರು ಹೆಚ್ಚು ಗೀಚಿಗಳನ್ನು ಮಾಡುತ್ತಾರೋ ಅವರು ಗೆದ್ದಂತೆ.
ಕವಡೆ ಬಚ್ಚಿಡುವ ಆಟ: ಕವಡೆ ಬಚ್ಚಿಡುವವಳು ಮತ್ತೊಬ್ಬಳು ಮೊದಲೇ ನಿಗದಿ ಮಾಡಿಕೊಳ್ಳುತ್ತಾರೆ. ಇಲ್ಲವೇ ಟಾಸ್ ಹಾಕಿ ತೀರ್ಮಾನಿಸುತ್ತಾರೆ. ಅದರಂತೆ ಕವಡೆಗಳನ್ನು ಕೊಠಡಿಯೊಂದರಲ್ಲಿ ಬಚ್ಚಿಟ್ಟು ಮತ್ತೊಬ್ಬಳಿಗೆ ಹುಡುಕುವಂತೆ ಬಿಡುತ್ತಾಳೆ. ಬಚ್ಚಿಟ್ಟವಳು ಪುಸ್ತಕದ ಸಂದಿಯಲ್ಲೋ, ದಿಂಬಿನ ಅಡಿಯಲ್ಲೋ ಹೀಗೆ ಎಲ್ಲೆಲ್ಲೋ ಬಚ್ಚಿಟ್ಟಿರುತ್ತಾಳೆ. ಹುಡುಕುವವಳು ನಾಲ್ಕು ಕವಡೆಗಳನ್ನು ಹುಡುಕಬೇಕು. ಇಲ್ಲದಿದ್ದರೆ 'ನಾನು ಸೋತೆ' ಎಂದು ಹೇಳಬೇಕು.
ಕವಡೆ ಡಿಕ್ಕಿ: ಕವಡೆಗಳನ್ನು ಮುಷ್ಠಿಯಲ್ಲಿ ಹಿಡಿದು ಚೌಕಾಬಾರದಲ್ಲಿ ಹುಣಸೆಬೀಜ ಕುಲುಕಿಹಾಕುವಂತೆ ನೆಲದ ಮೇಲೆ ಹಾಕುತ್ತಾರೆ. ಮೂರು ಕವಡೆ ಮೇಲ್ಮುಖವಾಗಿ ಒಂದು ಕವಡೆ ಕೆಳಮುಖವಾಗಿ ಬಿದ್ದರೆ ಹಿಮ್ಮುಖವಾಗಿ ಬಿದ್ದ ಕವಡೆಯಿಂದ ಕೇರಂ ಪಾನ್ ಹೊಡೆಯುವಂತೆ ಇನ್ನೊಂದಕ್ಕೆ ಹೊಡೆದು ತಗುಲಿದರೆ ಪಕ್ಕಕ್ಕೆ ಇರಿಸಿಕೊಳ್ಳುತ್ತಾರೆ. ಉಳಿದೆರಡನ್ನು ಹೀಗೆ ಹೊಡೆದರೆ ಎರಡು ಗೆಲ್ಲಂಕಗಳು. ಎರಡು ಮೇಲ್ಮುಖ ಎರಡು ಕೆಳಮುಖವಾಗಿ ಬಿದ್ದಾಗ ಕೆಳಮುಖವಾಗಿ ಬಿದ್ದ ಕವಡೆಗಳನ್ನು ಎತ್ತಿಟ್ಟು ಮೇಲ್ಮುಖವಾಗಿರುವುದರಿಂದ ಇನ್ನೊಂದಕ್ಕೆ ಹೊಡೆಯುತ್ತಾರೆ. ಕವಡೆಗಳು ಒಂದಕ್ಕೊಂದು ತಗುಲಿದರೆ ಮಾತ್ರ ಆ ಸಂದರ್ಭದಲ್ಲಿ ಗೆಲ್ಲಂಕ ಸಿಗುತ್ತದೆ. ಮೂರು ಕವಡೆಗಳು ಮುಖ ಕೆಳಗಾಗಿ ಬಿದ್ದರೆ ಅದಕ್ಕೆ 'ಮೂಸ' ಎಂದು ಆಟ ಬಿಟ್ಟುಕೊಡಬೇಕು.
=  ಡಾ. ಕೆ.ಎಸ್. ಹರಶಿವಮೂರ್ತಿ
(ಮನೆಯಂಗಳದ ಮಕ್ಕಳಾಟಗಳು)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com