

ಅಟ್ಲಾಂಟಿಕ್ ಸಮುದ್ರದಲ್ಲಿ ಹೆಚ್ಚಾಗಿ ಕಂಡುಬರುವ ಈ ಹಕ್ಕಿಗೆ ಆ ಕಾರಣದಿಂದಲೇ ಅಟ್ಲಾಂಟಿಕ್ ಪಫಿನ್ಸ್ ಎಂದು ಹೆಸರು. ಇದರ ಆಯಸ್ಸು 20 ವರ್ಷ. ಬದುಕಿನ ಬಹುಭಾಗವನ್ನು ಸಮುದ್ರದಲ್ಲೇ ಕಳೆಯುತ್ತದೆ. ಇದಕ್ಕೆ 'ಸಮುದ್ರ ಗಿಳಿ' ಎಂದೂ ಕರೆಯುವುದುಂಟು. ಪೆಂಗ್ವಿನ್ ಥರದ ಬಣ್ಣವನ್ನು ಇದು ಹೊಂದಿರುತ್ತದೆ. ಚಳಿಗಾಲದಲ್ಲಿ ಇವು ಕೊಕ್ಕು ಕಂದು ಬಣ್ಣಕ್ಕೆ ತಿರುಗುತ್ತದೆ. ಸಂತಾನೋತ್ಪತ್ತಿ ಸಮಯಕ್ಕೆ ಸಂಗಾತಿಗಳನ್ನು ಆಕರ್ಷಿಸಲು ಇದು ನೆರವಾಗುತ್ತದೆ ಎನ್ನುವುದು ಪಕ್ಷಿತಜ್ಞರ ಅಭಿಮತ.
ಸಮುದ್ರದ ಅಲೆಗಳ ಮೇಲೆ ಈಜುತ್ತ ಬದುಕುವ ಈ ಪಕ್ಷಿಗಳು ಅದ್ಭುತ ಈಜುಗಾರರು. ಸಮುದ್ರದ ಆಳದಲ್ಲಿ 200 ಅಡಿವರೆಗೂ ಹೋಗಬಲ್ಲವು. ಅಚ್ಚರಿಯೆಂದರೆ ಅವು ನೀರಿನ ಆಳದಲ್ಲಿರುವುದು 20ರಿಂದ 30 ಸೆಕೆಂಡು ಮಾತ್ರ. ಗಾಳಿಯಲ್ಲಿಯೂ ಹಾರಾಡಬಲ್ಲ ಇವು ಗಂಟೆಗೆ 88 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ. ಹಾರಾಡುವಾಗ ನಿಮಿಷಕ್ಕೆ 400 ಸಲ ರೆಕ್ಕೆ ಬಡಿಯುತ್ತವೆ. ಸಣ್ಣಸಣ್ಣ ಮೀನುಗಳೇ ಇದರ ಆಹಾರ. ಉತ್ತರ ಅಟ್ಲಾಂಟಿಕ್ ಕರಾವಳಿ ತೀರ ಮತ್ತು ಅಲ್ಲಿನ ದ್ವೀಪಗಳಲ್ಲಿ ಚಳಿಗಾಲ, ಬೇಸಿಗೆಯಲ್ಲಿ ಇವು ಸಂತಾನೋತ್ಪತ್ತಿ ಮಾಡುತ್ತವೆ.