

ಲೈರ್ ಪಕ್ಷಿ ಆಸ್ಟ್ರೇಲಿಯಾ ಮೂಲದ್ದು. ಮಿಮಿಕ್ರಿ ಮಾಡುವುದರಿಂದಲೇ ಪ್ರಸಿದ್ಧವಾಗಿರುವ ಈ ಹಕ್ಕಿ ತಾನು ವಾಸಿಸುವ ಪ್ರದೇಶದಲ್ಲಿ ಕಂಡುಬರುವ ಇತರ ಪ್ರಾಣಿ-ಪಕ್ಷಿಗಳ ಶಬ್ದವನ್ನು ಸಲೀಸಾಗಿ ಅನುಕರಣೆ ಮಾಡುತ್ತದೆ! ಈ ಅನುಕರಣೆ ಎಷ್ಟು ಸ್ಪಷ್ಟವಾಗಿರುತ್ತದೆಂದರೆ, ಸ್ವತಃ ಆ ಪ್ರಾಣಿ-ಪಕ್ಷಿಗಳೇ ಕೂಗಿದಂತಿರುತ್ತದೆ. ಇದಲ್ಲದೆ ವಾಹನಗಳ ಎಂಜಿನ್ ಶಬ್ದ, ಸೈರನ್ ಶಬ್ದ, ಗುಂಡಿನ ಶಬ್ದ,ಚಿಕ್ಕ ಮಕ್ಕಳು ಅಳುವ, ಅಷ್ಟೇ ಅಲ್ಲ ನೀವು ಮಾತನಾಡಿದಂತೆ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದು ಕೊಳಲು ನುಡಿದಂತೆಯೇ ಸ್ವರ ಹೊರಡಿಸಬಲ್ಲದು ಎಂಬ ಅಚ್ಚರಿಯನ್ನು 1930ರಲ್ಲಿಯೇ ಪರಿಸರ ತಜ್ಞರು ಸಂಶೋಧಿಸಿದ್ದರು.
ಇದಕ್ಕೆ ಕಾರಣ ನಮಗೆ ಧ್ವನಿಪೆಟ್ಟಿಗೆ ಇರುವ ಹಾಗೆ ಇವಕ್ಕೆ 'ಸಿರಿಂಕ್ಸ್' ಎಂಬ ತಂತುಗಳಿಂದ ರಚಿತವಾದ ಭಾಗವಿದೆ. ಇದು ಸುಮಧುರ ಧ್ವನಿ ಹೊರಡಿಸಲು ಸಹಾಯಕವಾಗುತ್ತದೆ. ಲೈರ್ ಪಕ್ಷಿಗಳಲ್ಲಿರುವ ಸಿರಿಂಕ್ಸ್ ಅತೀ ಸಂಕೀರ್ಣ ಸ್ನಾಯುಗಳಿಂದ ಕೂಡಿದೆ. ಹೀಗಾಗಿ ಇದು ಇತರ ಪಕ್ಷಿಗಳಲ್ಲಿರುವ ಸಿರಿಂಕ್ಸ್‌ಗಿಂತ ಭಿನ್ನವಾಗಿದೆ. ಈ ರೀತಿಯ ಅನುಕರಣೆಯಿಂದಾಗಿ ಅವು ಶತ್ರುಗಳಿಂದ ಸುಲಭವಾಗಿ ಪಾರಾಗಬಲ್ಲವು.
ಲೈರ್ ಗಂಡು-ಹೆಣ್ಣು ಎರಡೂ ಹಕ್ಕಿಗಳಲ್ಲೂ ಮಿಮಿಕ್ರಿ ಮಾಡುವ ಸಾಮರ್ಥ್ಯವಿದೆಯಾದರೂ ಇದರಲ್ಲಿ ಜಾಸ್ತಿ ಕೇಳಿಬರುವುದು ಗಂಡು ಹಕ್ಕಿಯ ಕೂಗೇ! ಲೈರ್ ಹಕ್ಕಿ ನೋಡಲು ಸುಂದರವಾಗಿ, ಅದ್ಭುತವಾಗಿ ಕಾಣುತ್ತದೆ. ಹಾಗಾಗಿ ಇದು ಚಿತ್ರ ಕಲಾವಿದರನ್ನು ಹೆಚ್ಚು ಆಕರ್ಷಿಸಿದ ಪಕ್ಷಿ.