

ಪ್ಯಾರಾಚೂಟ್ ಹಾರಾಟವನ್ನು ನೀವೆಲ್ಲ ಟಿ.ವಿಯಲ್ಲಿ ನೋಡಿಯೇ ಇರುತ್ತೀರಿ. ಅಂಥ ಪ್ಯಾರಾಚೂಟ್ ಅನ್ನೇ ನಾವೂ ಮಾಡೋಣ, ಸರೀನಾ?
ಹಳ್ಳಿಗಳಲ್ಲಿ ಮಳೆಗಾಲದ ಉಪಯೋಗಕ್ಕೆಂದು ದೊಡ್ಡದಾದ ಪ್ಲಾಸ್ಟಿಕ್ ಹಾಳೆಯನ್ನು ತಂದಿರುತ್ತಾರೆ. ಅಂಥದ್ದೇ ಶೀಟ್ ನಮಗೆ ಬೇಕಾಗಿರುವುದು. ಸಾಮಾನ್ಯವಾಗಿ ಇದು ಆಯತಾಕಾರ ಅಥವಾ ಚೌಕಾಕಾರದಲ್ಲಿರುತ್ತದೆ. ಅದರ ನಾಲ್ಕೂ ಕಡೆ ತಲಾ ಎಂಟು (ಒಂದೊಂದು ತುದಿಗೂ ಎಂಟು) ರಂಧ್ರ ಮಾಡಿ. ಕತ್ತರಿಯಿಂದ ಸ್ವಲ್ಪ ಟ್ರಿಮ್ ಮಾಡಿದರೆ ನೋಡಲು ಚೆಂದ ಕಾಣುತ್ತದೆ. ಈಗ ಪ್ರತಿ ರಂಧ್ರಕ್ಕೂ ದಾರ ಕಟ್ಟಿ. ಮಧ್ಯಮ ಗಾತ್ರದ ಕಲ್ಲು ಅಥವಾ ತುಸು ಭಾರದ ವಸ್ತುವಿಗೆ ಆ ಎಲ್ಲ ದಾರದ ತುದಿಗಳನ್ನೂ ಸೇರಿಸಿ ಕಟ್ಟಿ. ಸರಿಯಾಗಿ ಮಧ್ಯಭಾಗದಲ್ಲಿ ರಂಧ್ರ ಮಾಡಿ. ನಂತರ ಅದನ್ನು ಬಯಲಿಗೆ ಕೊಂಡೊಯ್ದು ಎತ್ತರದ ಜಾಗದಿಂದ ಗಾಳಿಯಲ್ಲಿ ಹಾರಿಬಿಡಿ. ಖುರ್ಚಿ ಮೇಲೆ ನಿಂತು ಬಿಟ್ಟರೂ ಆದೀತು.
ಏನಾಗುತ್ತದೆ? ನೀವು ಕಟ್ಟಿರುವ ಭಾರದ ವಸ್ತುವಿನ ನೆರವಿನಿಂದ ಮೆಲ್ಲಗೆ ನೆಲದ ಮೇಲೆ ಪ್ಯಾರಾಚೂಟ್ ಲ್ಯಾಂಡ್ ಆಗುತ್ತದೆ. ಹಾರಿಬಿಟ್ಟಾಗ ದಾರಗಳ ಭಾರದಿಂದ ತೆರೆದುಕೊಂಡು ದೊಡ್ಡದಾಗುತ್ತದೆ. ಗಾಳಿಯ ಪ್ರತಿರೋಧ ಎದುರಿಸಿ ನಿಧಾನವಾಗಿ ಕೆಳಗಿಳಿಯಲು ಕಾರಣವಾಗುವುದು ಇದೇ. ಮಧ್ಯಭಾಗದಲ್ಲಿ ರಂಧ್ರ ಮಾಡುವುದರಿಂದ ಪ್ಯಾರಾಚೂಟ್ ಅತ್ತಿತ್ತ ಹೋಗದೆ ನೇರವಾಗಿ ನೆಲದ ಮೇಲೆ ಇಳಿಯುತ್ತದೆ.
ಪುಟಾಣಿಗಳೆ ನೆನಪಿಡಿ. ಇದು ಪ್ರಯೋಗಕ್ಕೆ ಮಾತ್ರ. ನಿಮ್ಮ ಭಾರವನ್ನು ಇದು ತಾಳುವುದಿಲ್ಲ. ಹೀಗಾಗಿ ಇದರ ನೆರವಿನಿಂದ ನೀವೂ ಹಾರಲು ಯತ್ನಿಸಬೇಡಿ!