ಕಠಿಣ ಪರಿಶ್ರಮ, ಗುರುಗಳ, ಹೆತ್ತವರ ಬೆಂಬಲ ಹಾಗೂ ಶಾಲಾ ಅಧ್ಯಾಪಕರ ಪ್ರೋತ್ಸಾಹ ಇದ್ದಲ್ಲಿ ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವುದು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಕುಮಾರನ್ಸ್ ಸ್ಕೂಲ್ನ ವಿದ್ಯಾರ್ಥಿನಿ 11 ವರ್ಷದ ಕು. ಮೇಧಾಹಿರಣ್ಮಯಿ ಉದಾಹರಣೆ. ಮೇಧಾಹಿರಣ್ಮಯಿ ವಯಸ್ಸಿಗೆ ಮೀರಿದ ಪ್ರತಿಭಾನ್ವಿತೆ. ಈ ಚಿಕ್ಕ ವಯಸ್ಸಿಗೇ ಈಕೆಯ ದಾಸರಪದಗಳ ಸಿ.ಡಿ. 'ಇನಿದನಿ' ಹೊರಬಂದಿದೆ. ಪೇಜಾವರ ಶ್ರೀಗಳಿಂದ ಬಿಡುಗಡೆಗೊಂಡ ಈ ಸಿ.ಡಿ.ಯಲ್ಲಿ 9 ಸುಮಧುರ ದಾಸರಪದಗಳಿವೆ. ಒಂದಕ್ಕಿಂತ ಒಂದು ಇಂಪಾಗಿದೆ.
ಕು. ಮೇಧಾಹಿರಣ್ಮಯಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೊದಲ ಪಾಠಗಳನ್ನು ತನ್ನ ತಂದೆ ಡಾ. ವಿದ್ಯಾಭೂಷಣರಿಂದಲೇ ಕಲಿತಳು. ಕರ್ನಾಟಕ ಸಂಗೀತದ ಸೂಕ್ಷ್ಮತೆಗಳನ್ನು ಗ್ರಹಿಸುವ ಅಸಾಧಾರಣ ಚತುರಮತಿಯಾದ ಈ ಪೋರಿ ಕಲಿಕೆಯಲ್ಲೂ ಮುಂದಿದ್ದಾಳೆ. ಕಳೆದ ಐದಾರು ವರ್ಷಗಳಿಂದ ಸಂಗೀತದ ಮಜಲುಗಳಲ್ಲಿ ಗಂಭೀರವಾಗಿ, ಆಸಕ್ತಿಯಿಂದ ಕಲಿಯುತ್ತಿದ್ದಾಳೆ. ಈಕೆ ಇನ್ನಷ್ಟು ಸಾಧನೆ ಮಾಡಲಿ.