

ಒಂದು ದೊಡ್ಡ ಮರದ ಪೊಟರೆಯಲ್ಲಿ ಗಿಳಿಯೊಂದು ವಾಸವಾಗಿತ್ತು. ಕೆಲ ದಿನಗಳ ನಂತರ ಆ ಮರದ ಹತ್ತಿರ ಒಂದು ನವಿಲು ಹಾಗೂ ಒಂದು ಜಿಂಕೆ ಬಂದವು. ಅವು ಮೂರೂ ತುಂಬಾ ಸ್ನೇಹದಿಂದ ಬಾಳತೊಡಗಿದವು. ಒಂದು ದಿನ ಗಿಳಿ, ನವಿಲು ಹಾಗೂ ಜಿಂಕೆ ಸಭೆ ಸೇರಿದವು. 'ಈ ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಪ್ರಾಣಿ-ಪಕ್ಷಿ ಯಾವುದು?' ಎಂಬ ಬಗ್ಗೆ ಚರ್ಚೆ ಮಾಡತೊಡಗಿದವು. ಜಿಂಕೆ ಎದ್ದುನಿಂತು 'ಈ ಪ್ರಪಂಚದಲ್ಲಿ ನನ್ನಂಥಾ ಸುಂದರವಾದ ಪ್ರಾಣಿ ಯಾವುದಿಲ್ಲ. ಬಂಗಾರದ ಮೈ-ಬಣ್ಣ, ಅಂದವಾದ ಕಣ್ಣುಗಳು. ಅಂಥ ಸೀತಾಮಾತೆಯೇ ನನ್ನ ಚೆಂದಕ್ಕೆ ಮರುಳಾದಳೆಂದಮೇಲೆ ನಂಗೆ ಯಾರುತಾನೇ ಸಾಟಿ? ನಾನೇ ಈ ಜಗತ್ತಿನ ಸುರಸುಂದರಾಂಗ...' ಎಂದು ಕುಣಿದಾಡತೊಡಗಿತು.
ಇದನ್ನು ಕಂಡು ಗಿಳಿಗೆ ತುಂಬಾ ಕೋಪ ಬಂತು, 'ನಿಲ್ಲು... ನಿನ್ನಷ್ಟಕ್ಕೆ ನೀನೇ ಗರ್ವ ಪಡಬೇಡಾ! ನನ್ನ ನೋಡು... ಹಸಿರು ಮೈಬಣ್ಣ, ಚೆಂದವಾದ ಕೆಂಪು ಮೂಗು. ನಂಗೆ ಯಾರು ಸಾಟಿ? ನಾನೇ ಚೆಂದುಳ್ಳಿ ಚೆಲುವ...' ಎಂದು ಹಾರಾಡತೊಡಗಿತು. ಅಲ್ಲಿಯವರೆಗೂ ಸುಮ್ಮನೇ ಕುಳಿತಿದ್ದ ನವಿಲು ಕೋಪದಿಂದ- 'ಸಾಕುಮಾಡಿ ನಿಮ್ಮ ಒಣ ಜಂಭ! ಯಾಕೆ ಹೀಗೆ ಹಾರಾಡ್ತೀರಾ? ಜಿಂಕೆಗೋ ಮಾರುದ್ದ ಕಾಲು. ಮೈತುಂಬಾ ವಿಕಾರವಾಗಿರೋ ಕಪ್ಪು ಚುಕ್ಕೆ... ಏನು ಚೆಂದವೋ? ಇನ್ನು ಗಿಳಿಗೋ ಪುಟ್ಟ ಕಣ್ಣು, ಮೈತುಂಬಾ ಹಸಿರು, ಎಂಥಾ ಸೊಗಸೋ ಏನೋ. ನೀವ್ಯಾರೂ ನನ್ನ ಅಂದ ಚೆಂದಕ್ಕೆ ಕಿಂಚಿತ್ತೂ ಸಮರಲ್ಲ! ಸಾವಿರ ಕಂಗಳು ಯಾರಿಗುಂಟು? ನಾನು ನರ್ತಿಸಲು ವರುಣ ಮಳೆ ಸುರಿಸುವ. ನನ್ನ ಚೆಂದಕ್ಕೆ ಸಮರಾರಿಲ್ಲ. ನಾನೇ ತ್ರಿಲೋಕ ಸುಂದರ..' ಎಂದು ನರ್ತಿಸತೊಡಗಿತು. ಈ ಬಗ್ಗೆ ಅವುಗಳಲ್ಲಿ ಒಪ್ಪಂದ ಮೂಡದೇ ಕದನ ಮೂಡತೊಡಗಿದಾಗ... 'ಕುಹೂ... ಕುಹೂ...' ಎಂಬ ಇಂಪಾದ ಸ್ವರ ಕೇಳಿ ಆ ಮಾಧುರ್ಯಕ್ಕೆ ಮರುಳಾಗಿ ಅವು ಅತ್ತ ನೋಡಿದಾಗ, ಕೋಗಿಲೆಯೊಂದು ಕಂಡಿತು. ಅದು ಹೇಳಿತು- 'ಬಂಧುಗಳೇ... ಏಕೆ ಹೀಗೆ ಕಚ್ಚಾಡುವಿರಿ? ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು. ಮೇಲು ಕೀಳು ಸರಿಯಲ್ಲ. ಸ್ನೇಹವೇ ಜೀವನ...' ಎಂದು ಹಾಡು ಹೇಳುತ್ತಾ ಹಾರಿಹೋಯಿತು. ಆಗ, ಗಿಳಿ-ಜಿಂಕೆ-ನವಿಲಿಗೆ ಗರ್ವಭಂಗವಾಯ್ತು. ಕದನ ಬಿಟ್ಟು ಸ್ನೇಹದಿಂದ ಬಾಳಿದವು.
-ಅಮರಯ್ಯ ಶಂಕರಯ್ಯ ಪತ್ರಿಮಠ