ಮಳೆ ನಿಂತರೂ ಇಳಿಯದ ಪ್ರವಾಹ
ಕ.ಪ್ರ.ವಾರ್ತೆ, ಬೆಂಗಳೂರು, ಆ. 4-
ರಾಜ್ಯ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ತಗ್ಗಿದ್ದರೂ ಕೃಷ್ಣಾ, ತುಂಗಭದ್ರಾ ನದಿ ತೀರದಲ್ಲಿ ಪ್ರವಾಹ ಇಳಿಮುಖವಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 17 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಕಂಪ್ಲಿ ಸೇತುವೆ ಮುಳುಗಡೆಯಾಗಿದ್ದು ನದಿ ತೀರದ ಹತ್ತಕ್ಕೂ ಹೆಚ್ಚು ಗ್ರಾಮಗಳು ಸಂಕರ್ಪ ಕಡಿದುಕೊಂಡಿವೆ.
ಸಕಲೇಶಪುರದ ತಾಲೂಕು ವ್ಯಾಪ್ತಿಯಲ್ಲಿ ರೇಲ್ವೆ ಹಳಿ ಮೇಲೆ ಮಣ್ಣು ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಬಾಲಕಯೊಬ್ಬ ಮೃತಪಟ್ಟಿದ್ದಾನೆ.
ತುಂಗಭದ್ರಾ ಜಲಾಶಯದಿಂದ 1,45,096 ಕ್ಯುಸೆಕ್ ನೀರು ನದಿ ಬಿಡಲಾಗುತ್ತಿದ್ದು ಹೂವಿನಹಡಗಲಿ ತಾಲೂಕಿನ ಹೊಸಹಳ್ಳಿ-ಮಾಗಳ, ಹೂವಿನಹಡಗಲಿ ಹೊನ್ನೂರು, ಅಲ್ಲಿಪುರ-ರಾಜವಾಳ, ಹೊಸಹಳ್ಳಿ-ಅಂಗೂರು, ಕೋಟಿಹಾಳು-ಅಂಗೂರು, ಮಕರಬ್ಬಿ-ಬ್ಯಾಲಹುಣ್ಸಿ, ನಂದಿಗಾವಿ, ಬ್ಯಾಲಹುಣ್ಸಿ-ಹೊಳಲು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಂಪ್ಲಿ-ಗಂಗಾವತಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಹೊಸಪೇಟೆ, ರಾಯಚೂರು ಮತ್ತು ಗುಲ್ಬರ್ಗ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. ಹಂಪಿಯ ಸ್ಮಾರಕಗಳು ಇನ್ನು ಜಲಾವೃತಗೊಂಡಿವೆ. ಮುಂಡರಗಿ ತಾಲೂಕಿನ ಹಳೆ ಸಿಂಗಟಾಲೂರು ಗ್ರಾಮ ಸಹ ಜಲಾವೃತಗೊಂಡಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿಯಲ್ಲಿ ಭಾರಿ ಮಳೆಯಿಂದಾಗಿ ವೀರಭದ್ರೇಶ್ವರ ದೇವಸ್ಥಾನ ಸಂಪೂರ್ಣವಾಗಿ ಕುಸಿದಿದ್ದು ದೇಗುಲದ ಕಳಶ ಉರುಳಿ ಬಿದ್ದಿದೆ. ರಾಣಿಬೆನ್ನೂರು ತಾಲೂಕಿನ ಕುಪ್ಪೆಲೂರು ಗ್ರಾಮದಲ್ಲಿ ಕೃಷಿ ಇಲಾಖೆ ಕಟ್ಟಡ ಹಾಗೂ ಬಡವರ ಎರಡು ಮನೆಗಳು ಕುಮದ್ವತಿ ನದಿಯ ಹಿನ್ನೀರಿನಲ್ಲಿ ಜಲಾವೃತವಾಗಿವೆ.
17 ಸೇತುವೆಗಳು ಜಲಾವೃತ: ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ಪ್ರವಾಹ ತಗ್ಗಿಲ್ಲ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ-ದಾನವಾಡ ಸೇರಿದಂತೆ 17 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿಲ್ಲ. ರಾಜಾಪುರ ಮತ್ತು ದೂಧಗಂಗಾ ಬ್ಯಾರೇಜ್ಗಳಿಂದ 10 ಸಾವಿರ ಕ್ಯುಸೆಕ್ ನೀರು ಹೆಚ್ಚಳವಾಗಿರುವುದರಿಂದ ಈಗ ಒಟ್ಟು 2.8 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿದು ಬರುತ್ತಿದೆ. ಘಟಪ್ರಭಾ ಜಲಾಶಯಕ್ಕೂ 30 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಪಾಂುದ ಮಟ್ಟ ತಲುಪಲು ಕೇವಲ ಮೂರು ಅಡಿಗಳು ಮಾತ್ರ ಬಾಕಿ ಉಳಿದಿದೆ.
ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಹೊನ್ನಾಳಿ ತಾಲೂಕಿನ ಚನ್ನೇನಹಳ್ಳಿ ತಾಂಡಾದಲ್ಲಿ ಹೊಲಕ್ಕೆ ಹೋಗಿದ್ದ ಶರತ್(14) ಮೃತಪಟ್ಟಿದ್ದಾನೆ. ಹರಿಹರ ಹಾಗೂ ಹೊನ್ನಾಳಿ ತಾಲೂಕು ವ್ಯಾಪ್ತಿಯ ನೂರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಚಿಕ್ಕಬಿದರೆ, ಸಾರಥಿ, ಉಕ್ಕಡಗಾತ್ರಿ ಭಾಗದಲ್ಲಿ ರಸ್ತೆ ಸಂಪರ್ಕವಿಲ್ಲದಂತಾಗಿದೆ. ಹರಪನಹಳ್ಳಿ ತಾಲೂಕಿನ ಹಲವಾಗಲು, ಗರ್ಭಗುಡಿ, ನಂದಿಹಾಳ, ನಿಟ್ಟೂರು ಭಾಗದ ಸಂಪರ್ಕ ಕಡಿತವಾಗಿದೆ.
ಸಕಲೇಶಪುರದಲ್ಲಿ ಮಳೆ ಕಡಿಮೆಯಾಗಿದ್ದು ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಸಕಲೇಶಪುರ- ಎಡಕಮುರಿ ರೇಲ್ವೆ ನಿಲ್ದಾಣ ನಡುವಿನ 56 ಹಾಗೂ 600 ಮೈಲುಗಲ್ಲಿನ ಸಮೀಪ ಭೂ ಕುಸಿತ ಉಂಟಾಗಿದ್ದರಿಂದ ಹಾಸನ- ಮಂಗಳೂರು ರೈಲು ಸಂಚಾರಕ್ಕೆ ಕೆಲ ಕಾಲ ತೊಂದರೆಯಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಬಳಿ ಗುಡ್ಡ ಕುಸಿದು ಸೀತೂರು ಗ್ರಾಮದ ಸಂಪರ್ಕ ಕಡಿತವಾಗಿದೆ. ಕೊಡಗಿನಲ್ಲಿ ಮಳೆ ತಗ್ಗಿದೆ.
ಆಂಧ್ರಕ್ಕೆ ಹರಿಯಿತು 137 ಟಿಎಂಸಿ ನೀರು!
ಜುಲೈ 22ರಿಂದ ಆಗಸ್ಟ್ 4ರವರೆಗೆ ತುಂಗಭದ್ರಾ ನದಿ ಮೂಲಕ ಸುಮಾರು 137 ಟಿಎಂಸಿ ನೀರು ಹರಿಸಲಾಗಿದೆ. ಈ ನೀರು ರಾಯಚೂರು, ಸಿರಗುಪ್ಪ, ಮಂತ್ರಾಲಯ ಮಾರ್ಗವಾಗಿ ಕರ್ನೂಲಿನಲ್ಲಿ ಕೃಷ್ಣಾ ನದಿಗೆ ಸೇರುತ್ತದೆ. ಕರ್ನಾಟಕದಲ್ಲಿ ಪ್ರವಾಹವುಂಟಾದರೆ ಇದರ ಲಾಭ ಮಾತ್ರ ಆಂಧ್ರಕ್ಕೆ ಸಿಗುತ್ತದೆ. ಜಲಾಶಯದಲ್ಲಿ ನೀರಿನ ಶೇಖರಣೆ ಸಾಮರ್ಥ್ಯ 100 ಟಿಎಂಸಿಗಳಷ್ಟಿದ್ದು, ಜಲಾಶಯದಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆಯೋ ಅದಕ್ಕಿಂತ ಅಧಿಕ ಪ್ರಮಾಣದ ನೀರನ್ನು ನದಿ ಮೂಲಕ ಹರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

