ಸಿದ್ದರಾಮಯ್ಯ ಸರ್ಕಾರಕ್ಕೆ 100
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಗಳವಾರ ನೂರು ದಿನ ಪೂರೈಸುತ್ತಿದ್ದು, ಆರಂಭದಲ್ಲಿ ಇದ್ದ ವೇಗಕ್ಕೆ ಕೊಂಚ ಕಡಿವಾಣ ಬಿದ್ದಿದೆ.
ಹೌದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭದಲ್ಲಿ ಕೈಗೊಂಡ ಕೆಲವು ಜನಪರ ನಿರ್ಣಯಗಳು ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತು. ಏಕೋ ಏನೋ ಈಗ ಆರಂಭದ ವೇಗ ಕಾಣಿಸಿಕೊಳ್ಳುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ, ಅವರ ಸಂಪುಟದ ಕೆಲ ಸಹೋದ್ಯೋಗಿಗಳು ಕೂಡ ಕೊಂಚ ನಿಧಾನವಾಗಿ ಸಾಗುತ್ತಿದ್ದಾರೆ.
ಅಷ್ಟೇ ಅಲ್ಲ, ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾಚಾರ ತಡೆಗಟ್ಟುವುದಾಗಿ ಘೋಷಣೆ ಮಾಡಲಾಯಿತಾದರೂ ಆ ಬಗ್ಗೆ ಪ್ರಸ್ತಾಪವೇ ಆಗುತ್ತಿಲ್ಲ. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ, ಸರ್ಕಾರಿ ಭೂಮಿ ಒತ್ತುವರಿ ಕುರಿತ ಎರಡು ವರದಿಗಳ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೂ ಕೇವಲ 100 ದಿನಗಳಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಒಂದು ವರ್ಗದ ಜನರ ಪಾಲಿಗೆ ಸರ್ಕಾರ ಆಪ್ಯಾಯಮಾನವಾಗಿರುವುದಂತೂ ಸುಳ್ಳಲ್ಲ.
ಭರವಸೆಗಳೊಂದಿಗೆ ಆರಂಭ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಏಕಾಂಗಿಯಾಗಿ ಸಂಪುಟ ಸಭೆ ನಡೆಸಿ ಬಿಪಿಎಲ್ ಕಾರ್ಡ್ದಾರರಿಗೆ ಕೆ.ಜಿ.ಗೆ 1ರಂತೆ 30 ಕೆ.ಜಿ. ಅಕ್ಕಿ, ಹಾಲು ಉತ್ಪಾದಕರ ಪ್ರೋತ್ಸಾಹಧನ 4ಕ್ಕೆ ಹೆಚ್ಚಳ... ಹೀಗೆ ಐದು ಪ್ರಮುಖ ಘೋಷಣೆ ಹೊರಡಿಸಿದರು.
ಅಷ್ಟೇ ಅಲ್ಲ, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತ ಚುರುಕಿಗೆ ನಿರ್ದೇಶನಗಳನ್ನೂ ನೀಡಿದರು. ಆಡಳಿತ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ಮಾಡುವುದಾಗಿ ಹೇಳಿದರು. ಹೀಗಾಗಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಬಗ್ಗೆ ಜನರಿಗೆ ಭರವಸೆ ಮೂಡಲಾರಂಭಿಸಿತು. ಅದಕ್ಕೆ ತಕ್ಕಂತೆ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ನೂತನ ಸಚಿವರೂ ಹೆಚ್ಚು ಕ್ರಿಯಾಶೀಲವಾಗಿಯೇ ಕಾಣಿಸಿಕೊಂಡರು. ಇಲಾಖಾ ಅಧಿಕಾರಿಗಳ ಸಭೆ ಕರೆದು ಆಡಳಿತಕ್ಕೆ ಚುರುಕು ಮುಟ್ಟಿಸುವಂತೆ ಸೂಚಿಸಿದರು. ಇದರಿಂದ ಹೊಸ ಸರ್ಕಾರದ ಬಗ್ಗೆ ಜನರಿಗೆ ಭರವಸೆ ಮೂಡುವಂತಾಯಿತು. ಆದರೆ, ಉಪ ಚುನಾವಣೆಗಳ ಪ್ರಭಾವವೋ ಏನೋ ಆರಂಭದಲ್ಲಿ ಸಿದ್ದರಾಮಯ್ಯ ಮತ್ತು ಕೆಲವು ಸಚಿವರಲ್ಲಿ ಕಂಡುಬಂದ ಉತ್ಸಾಹ ಕುಂದಿದಂತೆ ಕಂಡುಬರುತ್ತಿದೆ.
ಬಾಯಿಮಾತಿನಲ್ಲೇ ಉಳಿಯಿತು: ಇನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂಬ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬರುವ ಲಕ್ಷಣ ಕಾಣಿಸುತ್ತಿಲ್ಲ. ಪ್ರಮುಖವಾಗಿ ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರು ನೀಡಿರುವ ವರದಿ ಹಾಗೂ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ ಎ.ಟಿ. ರಾಮಸ್ವಾಮಿ ನೇತೃತ್ವದ ಸದನ ಸಮಿತಿ ನೀಡಿದ ವರದಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ನೀಡಿದ ವರದಿ ಅನುಷ್ಠಾನಗೊಳಿಸಲು ಪ್ರಯತ್ನ ಆರಂಭವಾಗಲೇ ಇಲ್ಲ. ಈ ಮಧ್ಯೆ ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ಮೂಲಕ ಅವರ ವರದಿಯನ್ನೇ ಮೂಲೆಗುಂಪು ಮಾಡುವ ಪ್ರಯತ್ನ ನಡೆಯುವುದು ಒಂದೆಡೆಯಾದರೆ, ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯನ್ನು ಹಿಂದಿನ ಸರ್ಕಾರದಂತೆ ಉನ್ನತ ಮಟ್ಟದ ಸಮಿತಿಯ ಹೆಸರಿನಲ್ಲಿ ಬದಿಗೆ ಸರಿಸುವ ಕೆಲಸವೂ ಆಗುತ್ತದೆಯೋ ಎಂಬ ಅನುಮಾನ ಮೂಡಿಸಿದೆ. ಅದೇರೀತಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಉತ್ಸಾಹ ತೋರುತ್ತಿಲ್ಲ.
ವಿವಾದಕ್ಕೆ ಹೊರತಲ್ಲ: ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧಿಕಾರ ದುರುಪಯೋಗದ ಆರೋಪ ಮಾಡಿದ್ದ ಕಾಂಗ್ರೆಸ್, ತನ್ನ ಸರ್ಕಾರದಲ್ಲೂ ಅಂತಹದದ್ದೇ ವಿವಾದಕ್ಕೆ ಸಿಲುಕಿದೆ. ಸಚಿವ ಶಿವರಾಜ್ ತಂಗಡಗಿ ಅವರು ತಮ್ಮ ಸಹೋದರನಿಗಾಗಿ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದು ಅದು ಸಾಧ್ಯವಾಗದೇ ಇದ್ದಾಗ ಅವರನ್ನು ವರ್ಗಾವಣೆ ಮಾಡಿಸಿದ ಆರೋಪ ಎದುರಿಸಬೇಕಾಯಿತು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಜುಗರಕ್ಕೂ ಕಾರಣವಾಯಿತು.
ಭರವಸೆ ಮೂಡಿಸಿದ್ದು
-ಬಿಪಿಎಲ್ ಕಾರ್ಡ್ದಾರರಿಗೆ ಪ್ರತಿ ಕೆ.ಜಿ.ಗೆ 1ರಂತೆ 30 ಕೆ.ಜಿ.ವರೆಗೆ ಅಕ್ಕಿ
-ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ 2ರಿಂದ 4ಕ್ಕೆ ಏರಿಕೆ
-ಶಾಲಾ ಮಕ್ಕಳಿಗೆ ವಾರದ ಮೂರು ದಿನ 150 ಮಿಲಿ ಲೀಟರ್ ಹಾಲು
-ವಸತಿ ಯೋಜನೆಯಡಿ ನೀಡುವ ಸಹಾಯಧನ 70 ಸಾವಿರದಿಂದ 1.20 ಲಕ್ಷಕ್ಕೆ ಏರಿಕೆ
-ನಿಗಮ, ಮಂಡಳಿಗಳಿಂದ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಪಡೆದ ಸಾಲ ಮನ್ನಾ
-ಭಾಗ್ಯಜ್ಯೋತಿ ಯೋಜನೆ ಫಲಾನುಭವಿಗಳ ವಿದ್ಯುತ್ ಬಾಕಿ ಮನ್ನಾ, ಮರು ಸಂಪರ್ಕಕ್ಕೆ ಸೂಚನೆ
ಮಾಡಿಕೊಂಡ ಎಡವಟ್ಟುಗಳು
-ಪೂರ್ವ ಸಿದ್ಧತೆ ಇಲ್ಲದ ಕಾರಣ ಅನ್ನಭಾಗ್ಯ ಯೋಜನೆ ಒಂದು ತಿಂಗಳು ವಿಳಂಬ
-ವಸತಿ ಯೋಜನೆ ಸಹಾಯಧನ ಏರಿಕೆ ಮಾಡಿದರೂ ಪಂಚಾಯ್ತಿಗೆ ಕೇವಲ 20 ಮನೆ
-ಕಾಲ ಕಾಲಕ್ಕೆ ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನಡೆಸದ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರನ್ನು ಅನರ್ಹಗೊಳಿಸುವ ಕುರಿತು ತರಾತುರಿಯಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಿ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದುಕೊಂಡು ಬಳಿಕ ಚುನಾವಣೆಯಲ್ಲಿ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಜಂಟಿ ಸದನ ಸಮಿತಿ ರಚಿಸಿದ್ದು.
-ಅದೇ ರೀತಿ ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವವರಿಗೆ ರಾಜ್ಯಾದ್ಯಂತ ಒಂದೇ ಪರವಾನಗಿ ನೀಡುವುದು ಸೇರಿದಂತೆ ವರ್ತಕರಿಗೆ ಅನುಕೂಲ ಮಾಡಿಕೊಡುವ ತಿದ್ದುಪಡಿ ವಿಧೇಯಕ ಮಂಡಿಸಿ ಗೊಂದಲಕ್ಕೆ ಕಾರಣವಾಗಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

