ಪ್ರಧಾನ ಸುದ್ದಿ

ಶತಸಿದ್ದು ಕೊಡುಗೆ

ಶತಸಿದ್ದು ಕೊಡುಗೆ
Published On :

ಶತದಿನದ ಸಂಭ್ರಮದಲ್ಲಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಭರಪೂರ ಕೊಡುಗೆಗಳನ್ನೇ ನೀಡಿದೆ.  ರೈತರು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು, ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳಲಾಗಿದೆ. ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಜತೆಗೆ ಜೋಳ, ರಾಗಿ, ಗೋದಿ ನೀಡಲು ತೀರ್ಮಾನಿಸಲಾಗಿದೆ. ಆದರೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಹೆಚ್ಚಿಸುವ ಮೂಲಕ ವಿಮಾನ ಪ್ರಯಾಣಿಕರಿಗೆ ಬರೆ ಎಳೆಯಲಾಗಿದೆ. ಜತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ತಿದ್ದುಪಡಿ ವಿಧೇಯಕಗಳನ್ನು ವಾಪಸ್ ಪಡೆಯಲಾಗಿದೆ.

ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ
ಕೆಪಿಎಸ್ಸಿ ಅಕ್ರಮಗಳನ್ನು ತಡೆಗಟ್ಟಲು ನೇಮಕ ಪ್ರಕ್ರಿಯೆ ಯುಪಿಎಸ್ಸಿ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವ್ಯಕ್ತಿತ್ವ ಪರೀಕ್ಷೆ ಪೂರ್ಣಗೊಳ್ಳುವವರೆಗೆ ಅಭ್ಯರ್ಥಿಗಳು ಪಡೆದ ಲಿಖಿತ ಪರೀಕ್ಷೆ ಅಂಕಗಳನ್ನು ಗೌಪ್ಯವಾಗಿಡಲಾಗುತ್ತದೆ. ಸದಸ್ಯರು ಬೇಕಾಬಿಟ್ಟಿ ಅಂಕ ಹಂಚಿಕೆ ಮಾಡಿದರೆ ಪರಿಗಣಿಸಬಾರದು. ಆದರೆ, ಶೋಧನಾ ಸಮಿತಿ ಮೂಲಕ ಕೆಪಿಎಸ್ಸಿ ಸದಸ್ಯರನ್ನು ನೇಮಕ ಮಾಡಬೇಕು ಎಂಬ ಶಿಫಾರಸನ್ನು ತಿರಸ್ಕರಿಸಿ ಈಗಿನಂತೆಯೇ ರಾಜಕೀಯ ನೇಮಕವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ.

ಗೋ ಹತ್ಯೆ ನಿಷೇಧ ವಾಪಸ್
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2010ರಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಮಸೂದೆ (ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ) ಮತ್ತು 2012ರಲ್ಲಿ ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಗೋ ಸಂವರ್ಧನೆ ತಿದ್ದುಪಡಿ ವಿಧೇಯಕವನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ- 1964 ಮುಂದುವರಿಯಲಿದೆ.

ವೃತ್ತಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ
ರಾಜ್ಯದಲ್ಲಿ ವೃತ್ತಿಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಲು 2014-15ನೇ ಸಾಲಿನಿಂದ ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆ- 2006ನ್ನು ಜಾರಿಗೆ ತರಲಾಗುತ್ತದೆ. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಪ್ರವೇಶ ಮೇಲ್ವಿಚಾರಣಾ ಸಮಿತಿ ಮತ್ತು ಶುಲ್ಕ ನಿಗದಿ ಸಮಿತಿಗಳನ್ನು ರಚಿಸಲಾಗುವುದು. ವಿದ್ಯಾರ್ಥಿಗಳ ಪ್ರವೇಶ ಮತ್ತು ಶುಲ್ಕ ನಿಗದಿ ಕುರಿತಂತೆ ಈ ಎರಡು ಸಮಿತಿಗಳು ನೀಡುವ ವರದಿಯೇ ಅಂತಿಮ.

ಬಿಪಿಎಲ್‌ದಾರರಿಗೆ ರಾಗಿ, ಜೋಳ, ಗೋದಿ
ಬಿಪಿಎಲ್ ಕಾರ್ಡ್‌ದಾರರಿಗೆ ಕೆ.ಜಿ.ಗೆ 1ರಂತೆ 30 ಕೆ.ಜಿ.ವರೆಗೆ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಜೋಳ, ರಾಗಿ, ಗೋದಿ ಜತೆಗೆ ಕುಚ್ಚಲಕ್ಕಿಯನ್ನೂ ನೀಡಲಾಗುವುದು. ಇವುಗಳನ್ನು ವಿತರಿಸಲು ಒಂದು ಮಾನದಂಡ ನಿಗದಿ ಮಾಡಲಾಗಿದೆ. ಆದರೂ ಈ ಉತ್ಪನ್ನಗಳು ಅಗತ್ಯವಿದ್ದಷ್ಟು ಲಭ್ಯವಾದರೆ ಜನರಿಗೆ ಬೇಕಾದಷ್ಟು ಗೋದಿ, ಜೋಳ, ರಾಗಿ ಮತ್ತು ಕುಚ್ಚಲಕ್ಕಿ ವಿತರಿಸಲಾಗುವುದು.

ರೈತರಿಗೆ ಆನ್‌ಲೈನ್ ಮಾರುಕಟ್ಟೆ
ಎಪಿಎಂಸಿಗಳಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಹಾಗೂ ರೈತರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಮತ್ತು ಬೆಲೆ ಸಿಗುವಂತೆ ಮಾಡಲು ನೂತನ ಕೃಷಿ ಮಾರಾಟ ನೀತಿ ಜಾರಿ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ. ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು, ದಾಸ್ತಾನು ಮಳಿಗೆಗಳಿಗೆ ಮಾನ್ಯತೆ ನೀಡಿ ಉಪ ಮಾರುಕಟ್ಟೆ ಪ್ರಾಂಗಣಗಳೆಂದು ಘೋಷಿಸುವುದು, ವ್ಯಾಪಾರಿಗಳಿಗೆ ಒಂದೇ ಪರವಾನಗಿ ನೀಡುವುದು.

ಬಳಕೆದಾರರ ಶುಲ್ಕ ಹೆಚ್ಚಳ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಶುಲ್ಕ ಹೆಚ್ಚಿಸಲು ಅನುಮತಿ. ಪ್ರಸ್ತುತ ಬಿಐಎಎಲ್ ಮೂಲಕ ತೆರಳುವ ದೇಶೀಯ ಪ್ರಯಾಣಿಕರಿಗೆ 231 ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 952 ಬಳಕೆದಾರರ ಶುಲ್ಕ ವಿಧಿಸಲಾಗುತ್ತದೆ. ಇದನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಜತೆಗೆ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಇನ್ನಷ್ಟು ಜಾಗವನ್ನು ಖಾಸಗಿಯವರಿಗೆ ನೀಡಲು ಕೂಡ ಸಮ್ಮತಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.