ಸುಂದರನಾಥ ಸುವರ್ಣ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಗೂ ಹೆಸರಾಂತ ಛಾಯಾಗ್ರಾಹಕ ಸುಂದರನಾಥ ಸುವರ್ಣ ಇನ್ನಿಲ್ಲ. ಮಂಗಳವಾರ ಮುಂಜಾನೆ ವಿದ್ಯಾಪೀಠ ವೃತ್ತದ ಬಳಿ ಇರುವ ಸ್ವಗೃಹದಲ್ಲಿ 60 ವರ್ಷದ ಸುಂದರನಾಥ ಸುವರ್ಣ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಸುವರ್ಣ ಪತ್ನಿ, ಮೂವರು ಪುತ್ರಿಯರು, ಸಹೋದರರಾದ ವಿಶ್ವನಾಥ್, ರವಿ, ನವೀನ್ ಅವರನ್ನು ಅಗಲಿದ್ದಾರೆ. ಮಂಗಳವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಚಿತ್ರೋದ್ಯಮದ ಗಣ್ಯರು ಅವರ ಮನೆಯತ್ತ ಧಾವಿಸಿದ್ದರು.
ಸಂಗೀತ ನಿರ್ದೇಶಕರಾದ ವಿ. ಮನೋಹರ್, ಗುರುಕಿರಣ್, ಗಿರಿಧರ್ ದಿವಾನ್, ನಿರ್ಮಾಪಕರಾದ ಸಾ.ರಾ. ಗೋವಿಂದು, ಕರಿಸುಬ್ಬು, ನಿರ್ದೇಶಕ ಸಿ.ವಿ ಶಿವಶಂಕರ್, ಶ್ರೀಗಣೇಶ್, ಕ್ರೇಜಿಮೈಂಡ್ಸ್ ಶ್ರೀ, ನಟ ರಮೇಶ್ ಭಟ್, ಮಿಥುನ್ ತೇಜಸ್ವಿ, ಬರಹಗಾರರಾದ ರಿಚರ್ಡ್ ಲೂಯಿಸ್, ಕೃಷ್ಣ ನಾಡಿಗ್ ಮುಂತಾದವರ ದಂಡೇ ಅಲ್ಲಿ ನೆರೆದಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಕೂಡ ಆಗಮಿಸಿದ್ದರು. ಶೋಕತಪ್ತರಾಗಿದ್ದ ಸಂಗೀತ ನಿರ್ದೇಶಕ ಗುರುಕಿರಣ್, ಮೊಟ್ಟ ಮೊದಲ ಬಾರಿಗೆ ನಾನು ತುಳು ಚಿತ್ರವೊಂದಕ್ಕೆ ಸಂಗೀತ ನೀಡುವ ಸಂದರ್ಭದಲ್ಲಿ ಸುವರ್ಣ ಅವರೇ ನನಗೆ ಮಾರ್ಗದರ್ಶಕರಾಗಿದ್ದರು. ಅಂದಿನಿಂದ ಇಲ್ಲಿಯವರೆಗೂ ನಮ್ಮ ಒಡನಾಟ ಇತ್ತು. ಅವರು ನಮ್ಮನ್ನು ಅಗಲಿರುವುದು ದುರದೃಷ್ಟಕರ ಎಂದರೆ 'ಅನುಭವ' ಚಿತ್ರಕ್ಕೆ ನಾನು ಬರೆದ 'ಹೋದೆಯ ದೂರ ಓ ಜತೆಗಾರ' ಹಾಡಿಗೆ ಅವರೇ ಛಾಯಾಗ್ರಾಹಕರಾಗಿದ್ದರು ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು ವಿ. ಮನೋಹರ್. ಒಬ್ಬ ಮನುಷ್ಯ ಏನು ಮಾತಾಡ್ತಾನೆ ಎಂಬುದು ಅವರ ಪಕ್ಕ ಯಾರಿರುತ್ತಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಎಂದು ಸುವರ್ಣ ಹೇಳುತ್ತಿದ್ದ ಮಾತುಗಳನ್ನು ನೆನಪಿಸಿಕೊಂಡ ಕೃಷ್ಣ ನಾಡಿಗ್ ಈಗ ಅವರು ಯಾರು ಏನು ಮಾತನಾಡಿದರೂ ಕೇಳಿಸಿಕೊಳ್ಳಲಾಗದ ಲೋಕಕ್ಕೆ ಹೋಗಿದ್ದಾರೆ ಎಂದು ದುಃಖದಲ್ಲಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


