ಪ್ರಧಾನ ಸುದ್ದಿ

ಮಳೆಗೆ ಮೂರು ಆಹುತಿ

Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಜು.27
ರಾಜ್ಯದ ಹಲವೆಡೆ ಮಳೆ ಮುಂದುವರಿದಿದ್ದು ಮನೆ ಕುಸಿದು ಇಬ್ಬರು ಮೃತಪಟ್ಟರೆ, ತುಂಗಭದ್ರಾ ಜಲಾಶಯದ ಪ್ರವಾಹಕ್ಕೆ ವ್ಯಕ್ತಿಯೊಬ್ಬ ಕೊಚ್ಚಿ ಹೋಗಿದ್ದಾನೆ. ಕೃಷ್ಣಾ ನದಿ ಏರುಮುಖವಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ.
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿದ್ದರಿಂದ ಹಂಪಿ ಭಾಗಶಃ ಜಲಾವೃತವಾಗಿದ್ದು, ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ತೀರ ಪ್ರದೇಶದಲ್ಲಿ ಭಾರಿ ಪ್ರಮಾಣದ ಹಾನಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಸತತ ಮಳೆಯಿಂದ ಮನೆ ಕುಸಿದು ಹೊನ್ನಾಳಿ ತಾಲೂಕಿನ ನ್ಯಾಮತಿ ಸಮೀಪದ ಕಣುವೆಗುಡ್ಡದಲ್ಲಿ ಚಿನ್ನಿಕಟ್ಟೆಯ ರಾಜಮಾಣಿಕ್ಯಂ (45), ಕಮ್ಮಾರಗಟ್ಟೆ ಗ್ರಾಮದ ಗೌರಮ್ಮ (65) ಮೃತಪಟ್ಟಿದ್ದಾರೆ. ತುಂಗಭದ್ರಾ ಪ್ರವಾಹಕ್ಕೆ ಹೂವಿನಹಡಗಲಿ ತಾಲೂಕಿನ ಅಂಗೂರು ಬಳಿ ಬೂದನೂರು ಗ್ರಾಮದ ರೈತ ಹನುಮಂತಪ್ಪ (50) ಕೊಚ್ಚಿ ಹೋಗಿದ್ದಾನೆ. ಹೊಲದ ಕೆಲಸ ಮುಗಿಸಿ ವಾಪಸಾಗುವಾಗ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಕೊಚ್ಚಿ ಹೋಗಿದ್ದಾನೆ ಎಂದು ಹಿರೇಹಡಗಲಿ ಪೊಲೀಸರು ತಿಳಿಸಿದ್ದಾರೆ.
ಹಂಪಿ ಜಲಾವೃತ: ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಮಳೆ ನಿಂತಿದ್ದರೂ ತುಂಗಭದ್ರಾ ಜಲಾಶಯದ 33 ಗೇಟ್ ಮೂಲಕ 1,24,000 ಕ್ಯುಸೆಕ್ ನೀರು ನದಿಗೆ ಬಿಡುತ್ತಿರುವುದರಿಂದ ಹಂಪಿಯ ಪುರಂದರ ದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ಮಂಟಪ, ಅರಕಳ ಗುಂಡು, ಗೌರಮ್ಮನ ಗುಂಡು, ಕಲ್ಲು ಸೇತುವೆಯ ಕಾಲು ಸೇತುವೆ, ಕೋಟಿಲಿಂಗ, ಒನಕೆ ಕಿಂಡಿ, ಯಂತ್ರೋದ್ಧಾರಕ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿವೆ. ಕೋದಂಡರಾಮ ದೇವಸ್ಥಾನದ ಮೆಟ್ಟಿಲು, ಸಾಲು ಮಂಟಪ, ರಘುನಂದನ ತೀರ್ಥರ ಮಂಟಪಕ್ಕೆ ನೀರು ನುಗ್ಗಿದೆ. ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಯಾಗಿದ್ದು ಹೊಸಪೇಟೆ ಮತ್ತು ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಗುಲ್ಬರ್ಗ, ರಾಯಚೂರಿಗೆ ತೆರಳುವ ಬಸ್‌ಗಳನ್ನು ಮುನಿರಾಬಾದ್ ಮೂಲಕ ಓಡಿಸಲಾಗುತ್ತಿದೆ. ನಾರಾಯಣಪುರ ಜಲಾಶಯದ ಹೊರ ಹರಿವು ತಗ್ಗಿದ್ದರಿಂದ ಶಹಾಪುರ- ದೇವದುರ್ಗಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಯಾದಗಿರಿ ಜಿಲ್ಲೆಯ ನೀಲಕಂಠರಾಯನಗಡ್ಡಿಗೆ ಯಾಂತ್ರಿಕ ಬೋಟ್ ವ್ಯವಸ್ಥೆ ಮಾಡಲಾಗಿದೆ. ಕೃಷ್ಣಾ ನದಿ ಪ್ರವಾಹ ತಗ್ಗಿದ್ದರಿಂದ ಲಿಂಗಸ್ಗೂರು, ದೇವದುರ್ಗ ತಾಲೂಕಿನ ಜನತೆ ನಿರುಮ್ಮಳಾಗಿದ್ದಾರೆ. ಹೂವಿನಹೆಡಗಿ ಸೇತುವೆ ಸಂಪರ್ಕಕ್ಕೆ ಮುಕ್ತವಾಗಿದೆ. ಆದರೆ, ಕೃಷ್ಣಾ ನದಿಯಿಂದ ಹರಿದು ಹೋಗುವ ನೀರು ರಾಜ್ಯದ ಗಡಿಯಲ್ಲಿ ಆಂಧ್ರದ ವ್ಯಾಪ್ತಿಗೆ ಬರುವ ಜುರಾಲಾ ಅಣೆಕಟ್ಟೆಯಲ್ಲಿ ಸಂಗ್ರಹವಾಗುತ್ತಿದ್ದು ಹಿನ್ನೀರಿನ ಭೀತಿ ಎದುರಾಗಿದೆ. ಜುರಾಲಾ ಅಣೆಕಟ್ಟೆಯ ಹಿನ್ನೀರು ರಾಜ್ಯದ ಜನತೆಯನ್ನು ಬಾಧಿಸುತ್ತದೆ.
ನಿಲ್ಲದ 'ಮಹಾ' ಮಳೆ: ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿಗೆ 2.18 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ 8, ರಾಯಬಾಗ ತಾಲೂಕಿನ 7, ಅಥಣಿಯಲ್ಲಿ 3, ಹುಕ್ಕೇರಿ ಹಾಗೂ ಗೋಕಾಕ ತಾಲೂಕಿನಲ್ಲಿ ತಲಾ 1 ಸೇರಿದಂತೆ 20 ಸೇತುವೆಗಳು ಜಲಾವೃತಗೊಂಡಿವೆ. ಖಾನಾಪುರ ತಾಲೂಕಿನ ಇಂಗಳಗಾಂವ, ಸಪ್ತಸಾಗರ, ಸಿದ್ದಾಪುರ, ಖೆಮಲಾಪುರ, ಶಿರಗೂರ, ಇಂಗಳಿ ಸೇರಿದಂತೆ ಅನೇಕ ಗ್ರಾಮಗಳು ನಡುಗಡ್ಡೆಯಂತಾಗಿವೆ. ರಾಯಬಾಗ ತಾಲೂಕಿನ ಕುಡಚಿ ಬಳಿ ತೋಟದಲ್ಲಿ ಎರಡು ಶಾಲೆಗಳಿಗೆ ಪ್ರವಾಹ ಇಳಿಮುಖವಾಗುವ ತನಕ ರಜೆ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ 26 ಮನೆಗಳು ಕುಸಿದಿವೆ. ಜಮಖಂಡಿ ತಾಲೂಕಿನ ಮೈಗೂರು, ಮುತ್ತೂರು, ಕಂಕಣವಾಡಿ, ಹಿಪ್ಪರಗಿ, ಶಿರಗುಪ್ಪಿ, ಕುಲಹಳ್ಳಿ, ಆಸ್ಕಿ, ಹಳಿಂಗಳಿ, ತಮದಡ್ಡಿ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಆಲಮಟ್ಟಿ ಜಲಾಶಯದಿಂದ 2.48 ಲಕ್ಷ ಕ್ಯುಸೆಕ್ ನೀರು ಹೊರ ಬಿಡುತ್ತಿದ್ದು ಹಿನ್ನೀರಿನ ಆತಂಕ ಸದ್ಯಕ್ಕಿಲ್ಲ. ಮಲಪ್ರಭಾ, ಘಟಪ್ರಭಾ, ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಕಲ್ಲೋಳ-ಯಡೂರು ಪ್ರವಾಹ ಪೀಡಿತ ಸ್ಥಳಕ್ಕೆ ತೆರಳಿದ ಜಿಲ್ಲಾಧಿಕಾರಿ ಜಯರಾಂ ಅವರಿಗೆ ಕಲ್ಲೋಳ ಗ್ರಾಮಸ್ಥರು ಮುತ್ತಿಗೆ ಹಾಕಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.