ಗ್ಯಾಂಗ್‌ರೇಪ್: ಮೂವರ ಬಂಧನ

ಕನ್ನಡಪ್ರಭ ವಾರ್ತೆ, ಉಡುಪಿ, ಜೂ.27-
ಭಾರಿ ಸದ್ದು ಮಾಡಿದ್ದ ಮಣಿಪಾಲದ ವೈದ್ಯ ವಿದ್ಯಾರ್ಥಿನಿ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಮೂವರ ಪೈಕಿ ಇಬ್ಬರು ಆರೋಪಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಓಂತಿಬೆಟ್ಟು ಗ್ರಾಮದ ನಿವಾಸಿ ಯೋಗೀಶ್ ಪೂಜಾರಿ ಯಾನೆ ಆಮ್ಲೆಟ್ ಯೋಗೀಶ್ (30), ಪರ್ಕಳ ಸಮೀಪದ ಬಡಗುಬೆಟ್ಟು ಗ್ರಾಮದ ನಿವಾಸಿ ಹರಿಪ್ರಸಾದ್ ಪೂಜಾರಿ ಯಾನೆ ಹರಿ (27) ಹಾಗೂ ಬಡಗುಬೆಟ್ಟಿನ ಆನಂದ್ ಬಂಧಿತರು. ಈ ಮೂವರಲ್ಲಿ ಪ್ರಮುಖ ಆರೋಪಿಯಾಗಿರುವ ಯೋಗೀಶ್ ಗುರುವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲದೆ, ಆತನಿಂದ ಹೇಳಿಕೆಯನ್ನು ಕೂಡಾ ದಾಖಲಿಸಿಕೊಂಡಿದ್ದರು. ಆದರೆ, ಮತ್ತೊಂದು ನಾಟಕೀಯ ಬೆಳವಣಿಗೆಯಲ್ಲಿ ಮೂರನೇ ಆರೋಪಿಯಾಗಿರುವ ಆನಂದ್ ಗುರುವಾರ ಸಂಜೆ ವಿಷ ಸೇವಿಸಿದ್ದಲ್ಲದೆ, ಮರಕ್ಕೆ ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದ. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಗೀಶ್‌ನ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಮೂವರು ಆರೋಪಿಗಳು ಆಟೋ ಚಾಲಕರಾಗಿದ್ದಾರೆ. ಯೋಗೀಶ್ ಸ್ವಂತ ಆಟೋ ಹೊಂದಿದ್ದು, ಹರಿಪ್ರಸಾದ್ ತನ್ನ ಅಣ್ಣನ ಆಟೋ ಓಡಿಸುತ್ತಾನೆ. ಇಬ್ಬರು ಪರ್ಕಳ ಆಟೋ ಸ್ಟ್ಯಾಂಡ್‌ನಲ್ಲಿ ಬಾಡಿಗೆ ನಡೆಸುತ್ತಿದ್ದರು.
ಮತ್ತೊಬ್ಬ ಆರೋಪಿ ಆನಂದ್ ಪಾರ್ಟ್‌ಟೈಮ್ ಆಟೋ ಅಥವಾ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೂವರು ಕೂಡ ಓದುಬರಹ ಬಲ್ಲವರಾಗಿದ್ದರೂ, ಒಳ್ಳೆಯ ಶಿಕ್ಷಣವಂತರೇನಲ್ಲ.
ರೌಡಿ ಲಿಸ್ಟ್‌ನಲ್ಲಿ ಯೋಗೀಶ್: ಯೋಗೀಶ್ 2005ರಿಂದ ಮಣಿಪಾಲ ಪೊಲೀಸ್ ಠಾಣೆಯ ರೌಡಿ ಲಿಸ್ಟ್‌ನಲ್ಲಿದ್ದಾನೆ. ದೊಂಬಿ, ಕಳ್ಳತನದಂಥ 5ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈ ಹಿಂದೆಯೂ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ.
ನೈತಿಕ ಪೊಲೀಸ್‌ಗಿರಿಯ ಆರೋಪವೂ ಈತನ ಮೇಲಿದೆ. ಉಳಿದವರಿಬ್ಬರ ಮೇಲೆ ಪೊಲೀಸ್ ಠಾಣೆಗಳಲ್ಲಿ ಯಾವುದೇ ಅಪರಾಧ ದಾಖಲೆಗಳಿಲ್ಲ. ಈ ಮೂವರು ಗೆಳೆಯರು. ಅವಿವಾಹಿತರಾಗಿದ್ದ ಇವರಿಗೆ ಕುಡಿತ, ಮೋಜು ಮಸ್ತಿ ದಿನಚರಿಯಾಗಿತ್ತು.
3ನೇ ಆರೋಪಿಯೂ ಆತ್ಮಹತ್ಯೆಗೆ ಯತ್ನ!
ನಾಟಕೀಯ ತಿರುವಿನಲ್ಲಿ ಪ್ರಕರಣದ 3ನೇ ಆರೋಪಿ ಆನಂದ್ ಕೂಡ ಗುರುವಾರ ಸಂಜೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಬದುಕುಳಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಪರ್ಕಳ ಸಮೀಪದ ಬಡಗುಬೆಟ್ಟು ಗ್ರಾಮದ ನಿವಾಸಿ ಆನಂದ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಖಚಿತವಾಗಿತ್ತು. ಮೊದಲು ಆತ ಗೋವಾದಲ್ಲಿದ್ದಾನೆ.
ಆತನನ್ನು ಅಲ್ಲಿಂದ ಬಂಧಿಸಿ ಕರೆ ತರುವುದಕ್ಕೆ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಗೋವಾದಲ್ಲಿರುವ ಈ ಆನಂದ್ ಕೂಡ ಪರ್ಕಳದ ನಿವಾಸಿಯಾಗಿದ್ದರೂ, ಆತ ಆರೋಪಿ ಅಲ್ಲ ಎಂಬುದು ತಿಳಿಯಿತು. ನಿಜವಾದ ಆರೋಪಿ ಆನಂದ ಬಡಗುಬೆಟ್ಟು ಗ್ರಾಮದಲ್ಲಿಯೇ ಇದ್ದಾನೆ ಎಂದು ತಿಳಿಯಿತು. ಆದರೆ, ಇತರೆ ಆರೋಪಿಗಳು ಪೊಲೀಸರಿಗೆ ಸೆರೆ ಸಿಕ್ಕಿರುವ ಬಗ್ಗೆ ಮಾಹಿತಿ ತಿಳಿದ ಆನಂದ್ ಪೊಲೀಸರು ತನ್ನ ಬೆನ್ನು ಬಿದ್ದಿದ್ದಾರೆ ಎಂಬುದನ್ನು ಅರಿತು, ಗುರುವಾರ ಸಂಜೆ ಮನೆಯ ಬಳಿ ವಿಷ ಕುಡಿದು, ಜೊತೆಗೆ ಮರವೊಂದಕ್ಕೆ ನೇಣು ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ಸೇರಿಸಿದ್ದಾರೆ.
ವಿಷ ಸೇವಿಸಿ, ಐಜಿಪಿಗೆ ಕರೆ ಮಾಡಿದ!
ಜೂ.20ರಂದು ಮಧ್ಯರಾತ್ರಿ ವೈದ್ಯ ವಿದ್ಯಾರ್ಥಿನಿಯನ್ನು ಅಪಹರಿಸಿ ತನ್ನಿಬ್ಬರು ಗೆಳೆಯರೊಂದಿಗೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದ ಯೋಗೀಶ್, ಘಟನೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮರುದಿನದಿಂದಲೇ ಮೈಸೂರು ಮತ್ತಿತರ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಆತನನ್ನು ಹಿಡಿಯುವುದಕ್ಕೆ ಬೀಸಿದ್ದ ಬಲೆಯನ್ನು ತಿಳಿಯದೆ ಬುಧವಾರ ರಾತ್ರಿ ಮನೆಗೆ ಬಂದಿದ್ದ. ಬಳಿಕ ತಾನು ಪೊಲೀಸರ ಬಲೆಯೊಳಗೆ ಸಿಕ್ಕಿಬಿದ್ದಿದ್ದೇನೆ, ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಗುರುವಾರ ಬೆಳಗ್ಗೆ ಖಚಿತವಾಗಿ ತಿಳಿದ ಯೋಗೀಶ್, ಮನೆ ಹಿಂಭಾಗದ ಗುಡ್ಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.
ಐಜಿಪಿ ಮೊಬೈಲ್‌ಗೆ ಕರೆ ಮಾಡಿದ: ವಿಷ ಸೇವಿಸಿದ ವೇಳೆ ಯೋಗೀಶ್, ಗುರುವಾರ ಬೆಳಗ್ಗೆ ಸುಮಾರು 10 ಗಂಟೆಗೆ ಪಶ್ಚಿಮ ವಲಯ ಪೊಲೀಸ್ ಐಜಿಪಿ ಪ್ರತಾಪ್ ರೆಡ್ಡಿ ಅವರ ಮೊಬೈಲ್‌ಗೆ ಕರೆ ಮಾಡಿ, ತಾನು ವಿಷ ಸೇವಿಸಿದ್ದನ್ನು ತಿಳಿಸಿದ್ದ. ತಕ್ಷಣ ಆತನ ಮನೆಗೆ ಹೋದ ಪೊಲೀಸರು, ವಿಷ ಸೇವಿಸಿ ಪೊದೆಯಲ್ಲಿ ಬಿದ್ದುಕೊಂಡಿದ್ದ ಆತನನ್ನು ಬಂಧಿಸಿದರು. ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಆತನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದರೂ, ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


