ವಿಜ್ಞಾನ ಖಚಿತ ಸಿಂಹಾಸನ

ಕರ್ನಾಟಕದ ಪಾಲಿಗೆ ಇದು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಏಕೆಂದರೆ ವಿಜ್ಞಾನಿ ಸಿಎನ್ಆರ್ ರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿದೆ. ಭಾರತದ ಇತಿಹಾಸದಲ್ಲಿ ವಿಜ್ಞಾನಿಗಳಿಗೆ ನೀಡಿರುವ ಮೂರನೇ ಪ್ರಶಸ್ತಿ ಇದು. ಸತತ ಎರಡನೇ ಬಾರಿಗೆ ಕನ್ನಡಿಗರಿಗೆ ಪ್ರಶಸ್ತಿ ಸಿಕ್ಕಿರುವುದೂ ಹೆಮ್ಮೆಯ ಸಂಗತಿಯೇ...
ವಿಜ್ಞಾನ ಖಚಿತ ಸಿಂಹಾಸನ
ಪೂರ್ಣ ಹೆಸರು ಚಿಂತಾಮಣಿ ನಾಗೇಶ ರಾಮಚಂದ್ರ ರಾವ್
ವಯಸ್ಸು 79
ಹುಟ್ಟಿದ ದಿನಾಂಕ 1934 ಜೂನ್ 30
42ನೇ ಭಾರತ ರತ್ನ ಪ್ರಶಸ್ತಿ
ಹೆಗ್ಗಳಿಕೆ ಏನು? ಕರ್ನಾಟಕಕ್ಕೆ ಸತತ ಎರಡನೇ ಬಾರಿ 'ಭಾರತ ರತ್ನ' ತಂದುಕೊಟ್ಟ ಹೆಗ್ಗಳಿಕೆ. ಈ ಹಿಂದೆ ಪಂ.ಭಿಮಸೇನ್ ಜೋಶಿ (2009) ಮತ್ತು ಸರ್.ಎಂ.ವಿಶ್ವೇಶ್ವರಯ್ಯ (1955)
ಮೂರನೇ ವಿಜ್ಞಾನಿ ಈ ಹಿಂದೆ ಇದೇ ಪ್ರಶಸ್ತಿ ಸ್ವೀಕರಿಸಿದ್ದ ವಿಜ್ಞಾನಿಗಳು ಡಾ.ಸಿ.ವಿ.ರಾಮನ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ.
ಸಾಧನೆ ಸಾಲಿಡ್ ಸ್ಟೇಟ್ ಮತ್ತು ಮೆಟೀರಿಯಲ್ ಕೆಮಿಸ್ಟ್ರಿ ಕ್ಷೇತ್ರ ಮತ್ತು ರಾಸಾಯನಿಕ ಸಂರಚನೆ ಬಗ್ಗೆ ಅಧ್ಯಯನ
ಪ್ರಮುಖ ಗೌರವಗಳು ಪದ್ಮಶ್ರೀ, ಪದ್ಮ ವಿಭೂಷಣ, ಪ್ರಮುಖ ವಿಜ್ಞಾನ ಸಂಸ್ಥೆಗಳ ಸದಸ್ಯತ್ವ, ಅಧ್ಯಕ್ಷ ಹುದ್ದೆ.
ಸದ್ಯದ ಹುದ್ದೆ ಪಿಎಂ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ
ನಾನೆಷ್ಟೇ ಪ್ರಶಸ್ತಿ ಪಡೆದಿದ್ದರೂ ನನ್ನ ದೇಶದ ಭಾರತ ರತ್ನ ಶ್ರೇಷ್ಠ
ಕನ್ನಡಪ್ರಭ ವಾರ್ತೆ ಬೆಂಗಳೂರು ನ.16
ಸರ್ವೋಚ್ಚ ನಾಗರಿಕ ಪ್ರಶಸ್ತಿಯನ್ನು ಕನ್ನಡಿಗರು, ವಿಜ್ಞಾನ ಹಾಗೂ ಯುವ ವಿಜ್ಞಾನಿಗಳಿಗೆ ಅರ್ಪಿಸುತ್ತೇನೆ. 'ಭಾರತ ರತ್ನ' ಪ್ರಶಸ್ತಿ ಗಳಿಸಿದ ಮೂರನೇ ಕನ್ನಡಿಗ ಹಾಗೂ ಎರಡನೇ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಮೊದಲ ಹೇಳಿಕೆಯಿದು.
'ನಾನು ಈ ಪ್ರಶಸ್ತಿ ನಿರೀಕ್ಷಿಸಿಯೂ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿದ್ದಾಗ ಈ ವಿಚಾರ ತಿಳಿಯಿತು. ಐದು ನಿಮಿಷಗಳ ಬಳಿಕ ಪ್ರಧಾನಮಂತ್ರಿಯವರೇ ಸ್ವತಃ ಕರೆ ಮಾಡಿ ತಿಳಿಸಿದಾಗ ತುಂಬಾ ಸಂತೋಷವಾಯಿತು. ಐದು ನಿಮಿಷಗಳ ಕಾಲ ನನಗೆ ನಂಬಲು ಸಾಧ್ಯವಾಗಲಿಲ್ಲ. 'ಭಾರತ ರತ್ನ' ಪ್ರಶಸ್ತಿ ನನಗೆ ವಿಶೇಷವಾದದ್ದು. ಈವರೆಗೆ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದೇನೆ. ಆದರೆ, ನನ್ನ ದೇಶ ನನಗೆ ನೀಡಿರುವ ಸರ್ವೋಚ್ಚ ಪ್ರಶಸ್ತಿ ಎಂದಿಗೂ ಮರೆಯಲಾಗದ್ದು. ನಮ್ಮ ದೇಶದ ಸರ್ಕಾರ 'ನೀವು ನಮ್ಮವ' ಎಂದು ಗುರುತಿಸಿ ಗೌರವಿಸಿರುವುದು ಸಂತೋಷದ ವಿಚಾರ' ಎಂದು ಭಾರತೀಯ ವಿಜ್ಞಾನ ಲೋಕದ ಎರಡನೇ 'ಭಾರತ ರತ್ನ' ರಾವ್ ಖುಷಿ ಹಂಚಿಕೊಂಡಿದ್ದಾರೆ.
'ನನಗೆ ದುಡ್ಡು ಬೇಡ, ಬದುಕಿರುವವರೆಗೆ ನನಗೆ ಹಾಗೂ ಇತರ ಯುವ ವಿಜ್ಞಾನಿಗಳಿಗೆ ವಿಜ್ಞಾನದಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟರೆ ಸಾಕು. ಸರ್ಕಾರ ಮತ್ತು ಉದ್ಯಮವು ವಿಜ್ಞಾನದ ಅಭಿವೃದ್ಧಿಗೆ ತನು ಮನ ಧನ ನೀಡಬೇಕು. ಭಾರತವನ್ನು ವಿಜ್ಞಾನ ಕ್ಷೇತ್ರದ ಟಾಪ್-5 ಪಟ್ಟಿಯಲ್ಲಿ ಕಾಣುವುದೇ ನನ್ನ ಕನಸು. ವಿಜ್ಞಾನ ಹಾಗೂ ಸಂಶೋಧನೆಯಲ್ಲಿ ಉನ್ನತ ಸ್ಥಾನದಲ್ಲಿರುವ ಜಪಾನ್ ಹಾಗೂ ಕೊರಿಯಾ ದೇಶಗಳಿಗೆ ಸ್ಪರ್ಧೆ ನೀಡಲು ಭಾರತ ಇನ್ನಷ್ಟು ಬಂಡವಾಳ ಹೂಡಬೇಕು' ಎಂದು ಅವರು ಸಲಹೆ ನೀಡಿದ್ದಾರೆ.
'ನನ್ನ ಜೀವನದಲ್ಲಿ ವಿಜ್ಞಾನವೇ ಎಲ್ಲ. ನಾನು ಇಂದು ಏನೇ ಸಾಧಿಸಿದ್ದರೂ ಭಾರತ ರತ್ನ ಪ್ರಶಸ್ತಿ ಬಂದಿದ್ದರೂ ಇದಕ್ಕೆ ಕಾರಣ ಶಿಕ್ಷಕರು ಹಾಗೂ ನನ್ನ ಬಳಿ ಓದುತ್ತಿರುವ ಯುವ ವಿದ್ಯಾರ್ಥಿಗಳು. ಈ ಪ್ರಶಸ್ತಿಗಳನ್ನು ವಿಶೇಷವಾಗಿ ಇವರಿಗೆ ಸಮರ್ಪಿಸುತ್ತಾ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸಿ.ವಿ.ರಾಮನ್ ಬಳಿಕ ವಿಜ್ಞಾನದಲ್ಲಿ ಎರಡನೇ ಭಾರತ ರತ್ನ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಮತ್ತಷ್ಟು ಹೆಮ್ಮೆಯಾಗುತ್ತಿದೆ. ಇದು ಭಾರತೀಯ ವಿಜ್ಞಾನ ಲೋಕಕ್ಕೆ ಸಂದಿರುವ ಅತ್ಯುನ್ನತ ಗೌರವ.' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುವ ವಿಜ್ಞಾನಿಗಳಲ್ಲಿ ನಾನು ಮಾಡುವ ಮನವಿಯೆಂದರೆ, ಹಗಲು ರಾತ್ರಿ, ರಜಾದಿನಗಳಿಲ್ಲದೇ ವಿಜ್ಞಾನದ ಯಶಸ್ಸಿಗೆ ಕೆಲಸಮಾಡಿ ಎಂದು ಕರೆ ನೀಡಿದ್ದಾರೆ.
ಈ ಪ್ರಶಸ್ತಿ ಕನ್ನಡಿಗರಿಗೆ ಅರ್ಪಣೆ. 'ನೀವು ನಮ್ಮವ' ಎಂದು ಗುರುತಿಸಿ ಭಾರತ ರತ್ನದಂಥ ಶ್ರೇಷ್ಠ ಪ್ರಶಸ್ತಿ ನೀಡಿರುವುದು ನನಗೆ ದೊರೆತ ಎಲ್ಲಾ ಪ್ರಶಸ್ತಿಗಳಿಗಿಂತಲೂ ಮಿಗಿಲಾದದ್ದು.
-ಸಿಎನ್ಆರ್ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


