ಸೊಸೆ ತಂದ ದೌರ್ಭಾಗ್ಯ!
ಬೀಜಿಂಗ್: ಈ ಕಥೆ ಕೇಳಿ ನಗಬೇಕೋ, ಅಳಬೇಕೋ ನೀವೇ ನಿರ್ಧರಿಸಿ..! ಯಾಕೆಂದರೆ ಈ ಕಥೆ ಇರುವುದೇ ಹಾಗೆ!
ಚೀನಾದ ಮುಲಿಂಗ್ ನಗರದ 57 ವರ್ಷದ ವಾಂಗ್ ಎಂಬಾತ ಎರಡು ವರ್ಷದ ಹಿಂದಷ್ಟೇ ನೌಕರಿಯಿಂದ ನಿವೃತ್ತನಾಗಿದ್ದ. ಹೇಗೂ ಮಾಡಲಿಕ್ಕೇನೂ ಕೆಲಸವಿಲ್ಲ, ಆಗ ಅವನಿಗೆ ಕಣ್ಣಿಗೆ ಬಿದ್ದದ್ದು ಆನ್ಲೈನ್ ಚಾಟಿಂಗ್. ಹೀಗೆ ಆನ್ಲೈನ್ ಜಾಲಾಡುತ್ತಿರುವಾಗ ವಾಂಗ್ಗೆ 'ಲೋನ್ಲಿ ಫ್ಲವರ್ಸ್ ಆ್ಯಂಡ್ ಪ್ಲಾಂಟ್' ಎನ್ನುವ ಸೈಟ್ನಲ್ಲಿ ಹೆಂಗಸೊಬ್ಬಳ ಪರಿಚಯವಾಗಿತ್ತು. ಆಕೆ ತನ್ನ ಗಂಡ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ತಾನೀಗ ಮಗನೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಳು. ವಾಂಗ್ ತಾನೊಬ್ಬ ವಿಧುರ ಎಂದು ಹೇಳಿಕೊಂಡಿದ್ದ. ಅಲ್ಲದೆ, ಕಂಪನಿಯೊಂದರ ನಿರ್ದೇಶಕನಾಗಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದ. ಈ ಆನ್ಲೈನ್ ಪರಿಚಯ ಸರಸಕೆ ಕರೆಯುವವರೆಗೆ ಮುಂದುವರಿದಿತ್ತು. ಇದಕ್ಕೂ ಮೊದಲು ಇಬ್ಬರೂ ಪರಸ್ಪರ ಫೋಟೋಗಳನ್ನು ವಿನಿಮಯ ಮಾಡಿಕೊಂಡಿದ್ದರು. ಒಂದು ದಿನ ಈ ಜೋಡಿ ಲಾಡ್ಜ್ವೊಂದರಲ್ಲಿ ಭೇಟಿಯಾಗಲೂ ನಿರ್ಧರಿಸಿತು. ಅದರಂತೆ ವಾಂಗ್ ರೂಂವೊಂದನ್ನು ಬುಕ್ ಮಾಡಿ ಕಾದು ಕೂತಿದ್ದ. ಅಲ್ಲಿಯ ವರೆಗೂ ಇಬ್ಬರೂ ಅಂದುಕೊಂಡಂತೆಯೇ ನಡೆದಿತ್ತು. ಆಕೆ ಪುಳಕದಿಂದ ಬಾಗಿಲು ಬಡಿದದ್ದು ಅದೇ ಕುತೂಹಲದಿಂದ ವಾಂಗ್ ಬಾಗಿಲು ತೆರೆದದ್ದು ಎರಡೂ ಆಗಿದೆ. ನಂತರ ನಡೆದದ್ದೆಲ್ಲ ಕನಸೋ, ನನಸೋ ಎಂಬುದು ಇಬ್ಬರಿಗೂ ಇಲ್ಲಿಯವರೆಗೂ ಅರ್ಥವಾಗಿಲ್ಲ!
ಯಾಕೆಂದರೆ ಹಾಗೆ ಬಾಗಿಲು ಬಡಿದಾಕೆ ಬೇರಾರೂ ಅಲ್ಲ, ವಾಂಗ್ನ ಸ್ವಂತ ಸೊಸೆ(ಮಗನ ಹೆಂಡತಿ) ಲಿಲಿ! ಈ ಆಘಾತದಿಂದ ಇಬ್ಬರಿಗೂ ಚೇತರಿಸಿಕೊಳ್ಳಲು ಹಲವು ನಿಮಿಷಗಳೇ ಬೇಕಾಯಿತು.
ಎಲ್ಲೋ ಬೇರಿನ್ಯಾವುದೋ ರೂಂ ಬದಲು ಇಲ್ಲಿಗೆ ತಪ್ಪಿ ಬಂದಿರಬೇಕು ಎಂದು ಅಂದುಕೊಳ್ಳುವಷ್ಟರಲ್ಲೇ ವಾಂಗ್ ಪುತ್ರ ಡಾ ಜುಂಗ್ ರೂಂನೊಳಗೆ ಗೂಳಿಯಂತೆ ನುಗ್ಗಿದ್ದಾನೆ.
ವೃತ್ತಿಯಲ್ಲಿ ಸರಕು ಸಾಗಣೆ ಲಾರಿ ಚಾಲಕನಾಗಿದ್ದ ಜುಂಗ್ ಕೆಲಸದ ನಿಮಿತ್ತ ಹಲವು ದಿನ ಮನೆಯಿಂದ ದೂರ ಉಳಿಯುತ್ತಿದ್ದ. ಮನೆಯಲ್ಲಿ ಒಂಟಿಯಾಗಿರುತ್ತಿದ್ದ ಲಿಲಿ ಆನ್ಲೈನ್ ಚಾಟಿಂಗ್ನಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಇತ್ತೀಚೆಗೆ ಮನೆಗೆ ವಾಪಸಾಗಿದ್ದ ಆತನಿಗೆ ಲಿಲಿ ಯಾರದ್ದೋ ಜತೆಗೆ ಲಾಡ್ಜ್ಗೆ ಹೋಗುತ್ತಿರುವ ವಿಚಾರ ಗೊತ್ತಾಗಿತ್ತು. ಅನುಮಾನಗೊಂಡ ಆತ ಆಕೆಗೆ ಗೊತ್ತಿಲ್ಲದಂತೆ ಹಿಂಬಾಲಿಸಿದ್ದ. ಮೊದಲೇ ಸಿಟ್ಟಿನಲ್ಲಿದ್ದ ಜುಂಗ್ ಅಪ್ಪ- ಸೊಸೆ ಒಂದೇ ಕೋಣೆಯಲ್ಲಿರುವುದನ್ನು ಕಂಡು ಇನ್ನಷ್ಟು ಕೆಂಡಾಮಂಡಲವಾಗಿದ್ದಾನೆ.
ನಾನು ದುಡಿಯಲು ಹೋದರೆ ನೀವಿಬ್ಬರೂ ಕದ್ದುಮುಚ್ಚಿ ಚಕ್ಕಂದವಾಡುತ್ತಿದ್ದೀರಾ? ಎಂದು ಹೇಳಿದವನೇ ಇಬ್ಬರ ಮೇಲೂ ಎಗರಿಬಿದ್ದಿದ್ದಾನೆ. ಪತ್ನಿಯ ಮುಖಕ್ಕೆರಡು ಚೀನಾ ಶೈಲಿಯಲ್ಲಿ ಪಂಚ್ ಮಾಡಿದ್ದಾನೆ. ಈ ಪಂಚ್ಗೆ ಹೆಂಡತಿಯ ಮೂರು ಹಲ್ಲುಗಳು ಉದುರಿ ಬಿದ್ದಿವೆ!
ಇಷ್ಟೆಲ್ಲ ಆದ ಬಳಿಕ ವಾಂಗ್ ಆಕೆ ನಿನ್ನ ಪತ್ನಿ ಎಂದು ಗೊತ್ತೇ ಇರಲಿಲ್ಲ ಎಂದು ಗೋಳಾಡಿದ್ದಾನೆ. ಆದರೂ ಮಗ ಮಾತ್ರ ಅದನ್ನು ನಂಬಲು ಸಿದ್ಧವೇ ಇರಲಿಲ್ಲ.
ಅಂದ ಹಾಗೆ, ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾದದ್ದು ಬೇರಿನ್ನೇನೂ ಅಲ್ಲ, ವಾಂಗ್ ಹಾಗೂ ಲಿಲಿ ಕಳುಹಿಸಿದ ನಕಲಿ ಫೋಟೋ! ವಾಂಗ್ ತನ್ನ ಸುಂದರ ಗೆಳೆಯನ ಫೋಟೋ ಕಳುಹಿಸಿದ್ದರೆ, ಲಿಲಿ ತನ್ನ ಗೆಳತಿಯ ಫೋಟೋ ಕಳುಹಿಸಿದ್ದಳು!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

