ಪ್ರಧಾನ ಸುದ್ದಿ

ಸುರೇಶ್‌ಬಾಬು ಸೆರೆ

ಸುರೇಶ್‌ಬಾಬು ಸೆರೆ
Published On :

ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ. 19
ಬೇಲೇಕೇರಿ ಬಂದರಿನಿಂದ ಅದಿರು ಕಳ್ಳಸಾಗಣೆ ಮಾಡಿದ ಪ್ರಕರಣ ಸಂಬಂಧ ಕಂಪ್ಲಿ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಸುರೇಶ್ ಬಾಬು ಅವರನ್ನು ಸಿಬಿಐ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶಾಸಕ ಸುರೇಶ್ ಬಾಬು ಅವರಿಗೆ ಸಿಬಿಐ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಕೆಲ ದಿನಗಳಿಂದ ಸಿಬಿಐ ಅಧಿಕಾರಿಗಳ ಕೈಗೆ ಸಿಗದೇ ಇರಲು ಪ್ರಯತ್ನ ನಡೆಸಿದ್ದ ಸುರೇಶ್ ಬಾಬು ಬುಧವಾರ ವಿಚಾರಣೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು.
ಕಳೆದ ಎರಡು ದಿನಗಳಿಂದ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ ಸಿಬಿಐ ಗುರುವಾರ ಮಧ್ಯಾಹ್ನ ಅವರನ್ನು ಬಂಧಿಸಿದೆ. ಇದರೊಂದಿಗೆ ಅಕ್ರಮ ಗಣಿಗಾರಿಕೆ ಸಂಬಂಧ ರೆಡ್ಡಿ ಸೋದರರ ಸಾಮ್ರಾಜ್ಯದ ಇನ್ನೊಬ್ಬ ವ್ಯಕ್ತಿ ಜೈಲು ಪಾಲಾಗುವುದು ಖಚಿತಗೊಂಡಿದೆ.
ಸುರೇಶ್ ಬಾಬು ಅವರನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ನಡೆಯುತ್ತಿರುವ ತನಿಖೆಯ ಭಾಗವಾಗಿ ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಸಾಯಂಕಾಲ 5 ಗಂಟೆ ಸುಮಾರಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಕಚೇರಿ ಹಾಗೂ ಸಾಗರದಲ್ಲಿರುವ ಅವರ ನಿವಾಸಕ್ಕೆ ಫ್ಯಾಕ್ಸ್ ಮೂಲಕ ಮಾಹಿತಿ ನೀಡಿದರು.
ನಂತರ 6.45ರ ಸುಮಾರಿಗೆ ಸುರೇಶ್ ಬಾಬು ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆ ತಂದು ವೈದ್ಯ ಪರೀಕ್ಷೆ ನಡೆಸಿ ಮರಳಿ ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ.

ಗುರುವಾರ ಸಾಯಂಕಾಲವೇ ಸುರೇಶ್ ಬಾಬು ಅವರನ್ನು ನ್ಯಾಯಾಧೀಶರ ಮನೆಗೆ ಸಿಬಿಐ ಅಧಿಕಾರಿಗಳು ಹಾಜರು ಪಡಿಸುತ್ತಾರೆಂಬ ನಿರೀಕ್ಷೆ ಇತ್ತು. ಆದರೆ ಮರಳಿ ಸಿಬಿಐ ಕಚೇರಿಗೆ ಕರೆದೊಯ್ದಿರುವುದರಿಂದ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹದಿನಾಲ್ಕು ದಿನಗಳ ಕಾಲ ಸಿಬಿಐ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳ್ಳತನವಾಗಿದ್ದೆಷ್ಟು ? : ಬೇಲೇಕೇರಿ ಬಂದರಿನಿಂದ ಅದಿರು ಕಳ್ಳಸಾಗಣೆಯಾಗಿರುವ ಬಗ್ಗೆ ಅಂದಿನ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ ಮೊದಲು ಧ್ವನಿ ಎತ್ತಿದ್ದರು. ಇಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅದಿರನ್ನು ವಶಪಡಿಸಿಕೊಂಡ ಐಎಫ್‌ಎಸ್ ಅಧಿಕಾರಿ ಗೋಕುಲ್ ಅವರನ್ನು ಅಂದಿನ ರಾಜ್ಯ ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿತ್ತು. ಇದನ್ನು ಖಂಡಿಸಿ ಸಂತೋಷ್ ಹೆಗ್ಡೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಕೊನೆಗೆ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದ ರಾಜ್ಯ ಸರ್ಕಾರ ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿತ್ತು.
ಆದರೆ ಸಿಐಡಿ ಅಧಿಕಾರಿಗಳು ಪ್ರಕರಣಕ್ಕೆ ತಿಪ್ಪೆ ಸಾರಿಸುವ ಪ್ರಯತ್ನ ನಡೆಸಿದ್ದರು. ಈ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಇಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಮಾತ್ರವಲ್ಲ 2009ರಿಂದ 2010ರ ಅವಧಿಯಲ್ಲಿ 73 ಗಣಿ ಸಂಸ್ಥೆಗಳು ಬೇಲೇಕೇರಿ ಬಂದರಿನಿಂದ 88.06 ಲಕ್ಷ ಮೆಟ್ರಿಕ್ ಟನ್ ಅದಿರು ವಿದೇಶಕ್ಕೆ ರಫ್ತು ಮಾಡಿದ್ದಾರೆ.
ಈ ಪೈಕಿ 38.22 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮಾತ್ರ ರಾಜ್ಯ ಸರ್ಕಾರ ನೀಡುವ ಅದಿರು ಪರವಾನಗಿ ಪತ್ರದ ಅನ್ವಯ ರಫ್ತು ಮಾಡಲಾಗಿದೆ. 50.79 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಸಿಇಸಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಪ್ರಕರಣದಲ್ಲಿ ಸುರೇಶ್ ಬಾಬು ಅವರ ಬೇನಾಮಿ ಸಂಸ್ಥೆ ಜನದೇವಿ ಮಿನರಲ್ಸ್ ಕೂಡಾ ಒಂದಾಗಿದ್ದು, ಅವರ ವಿರುದ್ಧ ಐದು ಪ್ರಕರಣಗಳನ್ನು ಸಿಬಿಐ ದಾಖಲಿಸಿದೆ.

ಸಿದ್ದು ವಿರುದ್ಧ ತೊಡೆ ತಟ್ಟಿದ್ದ ಬಾಬು
ಸಿಬಿಐ ಬಲೆಗೆ ಬಿದ್ದಿರುವ ಸುರೇಶ್ ಬಾಬು ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ರಾಜಕಾರಣಿಗಳು ಜೈಲು ಪಾಲಾಗುವ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು.
ಲೋಕಾಯುಕ್ತರು ನೀಡಿದ ಮಧ್ಯಂತರ ವರದಿ ಆಧಾರದ ಮೇಲೆ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ರಾಜ್ಯ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದರು. ಆಗ ಕೊನೆಯ ಸಾಲಿನಲ್ಲಿ ಕುಳಿತಿದ್ದ ಸುರೇಶ್ ಬಾಬು, ಸಭಾಧ್ಯಕ್ಷರ ಮುಂಭಾಗದ ಆವರಣದ ಬಳಿ ಬಂದು ಬಳ್ಳಾರಿಗೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ತೊಡೆ ತಟ್ಟಿದ್ದರು.
ಈ ಪ್ರಕರಣ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತ್ತು. ಮಾತ್ರವಲ್ಲ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಬಳ್ಳಾರಿಗೆ ಬಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ತೋಳು ತಟ್ಟಿ ಸವಾಲು ಹಾಕಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ಐತಿಹಾಸಿಕ ಪಾದಯಾತ್ರೆ ಆಯೋಜಿಸಿದ್ದರು.
ಅಲ್ಲಿಂದ ರೆಡ್ಡಿ ಸಾಮ್ರಾಜ್ಯದ ಪತನ ಆರಂಭವಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನ ಆಧರಿಸಿ ತನಿಖೆ ಆರಂಭಿಸಿದ ಸಿಬಿಐ ಜನಾರ್ದನ ರೆಡ್ಡಿ ಅವರನ್ನು ಎರಡು ವರ್ಷದ ಹಿಂದೆ ಬಂಧಿಸಿತ್ತು.

ಇನ್ನು ಕೆಲವರ ಬಂಧನ?
ಇನ್ನು ಕೆಲ ರಾಜಕೀಯ ನಾಯಕರು ಬಂಧನ ಭೀತಿ ಎದುರಿಸುತ್ತಿದ್ದಾರೆ. ಶಾಸಕರಾದ ಆನಂದ್‌ಸಿಂಗ್, ಸತೀಶ್ ಶೈಲ್, ಬಿಎಸ್‌ಆರ್ ಪಕ್ಷದ ಶಾಸಕ ನಾಗೇಂದ್ರ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸುರೇಶ್ ಬಾಬು ಬಂಧಿಸಿರುವುದಾಗಿ ಸಿಬಿಐ ಗುರುವಾರ ಸಂಜೆ 5 ಗಂಟೆಗೆ ಮಾಹಿತಿ ನೀಡಿದೆ. ವಿಧಾನಸಭೆ ಕಲಾಪ ನಡೆಯುವ ಸಂದರ್ಭದಲ್ಲಿ ಶಾಸಕರನ್ನು ಬಂಧಿಸುವುದಕ್ಕೆ ಮಾತ್ರ ಸ್ಪೀಕರ್ ಒಪ್ಪಿಗೆ ಬೇಕಾಗುತ್ತದೆ. ಉಳಿದ ಸಂದರ್ಭದಲ್ಲಿ ನಂತರ ಮಾಹಿತಿ ನೀಡಬೇಕಾಗುತ್ತದೆ.
-ಕಾಗೋಡು ತಿಮ್ಮಪ್ಪ, ಸ್ಪೀಕರ್

ಯಾವ ಪ್ರಕರಣ?
ಸುರೇಶ್ ಬಾಬು ವಿರುದ್ಧ ಒಟ್ಟು ಐದು ಪ್ರಕರಣಗಳಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಇನ್ನು ನಾಲ್ಕು ಪ್ರಕರಣಗಳ ತನಿಖೆ ನಡೆಯುತ್ತಿದ್ದು, ಜನದೇವಿ ಮಿನರಲ್ಸ್ ಎಂಬ ಬೇನಾಮಿ ಕಂಪನಿ ಹೆಸರಿನಲ್ಲಿ ಬೇಲೇಕೇರಿ ಬಂದರಿನಿಂದ ಅದಿರು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.