ಪ್ರಧಾನ ಸುದ್ದಿ

ಸಿಂಗ್ ಮೇಲೆ ಕೈಕಣ್ಣು

ಸಿಂಗ್ ಮೇಲೆ ಕೈಕಣ್ಣು
Published On :

ನವದೆಹಲಿ: ಐದು ದಿನಗಳ ಹಿಂದೆ ಹರ್ಯಾಣ ರೇವಾರಿಯಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಜತೆಗೆ ವೇದಿಕೆ ಹಂಚಿಕೊಂಡ ನಿವೃತ್ತ ಭೂ ಸೇನಾ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಅವರ ಹೆಡೆಮುರಿಕಟ್ಟುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆಯೇ?
ಇಂತಹದ್ದೊಂದು ಅನುಮಾನಕ್ಕೆ ಎಡೆಮಾಡಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ, ರಹಸ್ಯ ಬೇಹುಗಾರಿಕಾ ಘಟಕ ಸ್ಥಾಪಿಸುವ ಮೂಲಕ ಸೇನಾಧಿಕಾರಿಗಳ ವಿರುದ್ಧವೇ ಗೂಢಚರ್ಯೆ ನಡೆಸಿದ ಆರೋಪವನ್ನು ಸರ್ಕಾರ ವಿ.ಕೆ. ಸಿಂಗ್ ತಲೆಗೆ ಕಟ್ಟಲು ಹೊರಟಿದೆ.
ಬೇಹುಗಾರಿಕಾ ಘಟಕದ ಮೂಲಕ ಹಿರಿಯ ಸೇನಾಧಿಕಾರಿಗಳ ಫೋನ್ ಕದ್ದಾಲಿಕೆ ಹಾಗೂ ಸೇನೆಯ ರಹಸ್ಯ ನಿಧಿ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಆರೋಪವನ್ನೂ ಹೊರಿಸಲಾಗಿದೆ.
ಸೇನೆಯ ತನಿಖಾ ಸಮಿತಿಯು ಮಾರ್ಚ್ ತಿಂಗಳಲ್ಲಿ ನೀಡಿದ್ದ ವರದಿಯಲ್ಲಿ ಈ ಆರೋಪ ಹೊರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ, ಈ ಕುರಿತು ಸಿಬಿಐ ತನಿಖೆಗೂ ಆದೇಶಿಸುವ ಸಾಧ್ಯತೆಯಿದೆ.
2010ರಿಂದ 2012ರ ವರೆಗೆ ಸೇನೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ವಿ.ಕೆ. ಸಿಂಗ್ ಕಾಲಾವಧಿಯಲ್ಲಿ ಬೇಹುಗಾರಿಕಾ ದಳದಲ್ಲಿ ರಹಸ್ಯ ತಾಂತ್ರಿಕ ಸೇವೆಗಳ ವಿಭಾಗ(ಟಿಎಸ್‌ಡಿ) ಸ್ಥಾಪಿಸಲಾಗಿತ್ತು. ಈ ವಿಭಾಗದ ಕಾರ್ಯನಿರ್ವಹಣೆ ಕುರಿತು ಸೇನೆಯ ತನಿಖಾ ಸಮಿತಿಯು ರಕ್ಷಣಾ ಸಚಿವಾಲಯಕ್ಕೆ ವರದಿ ನೀಡಿತ್ತು. ಅಲ್ಲದೆ, ಟಿಎಸ್‌ಡಿ ಕುರಿತು ಸಿಬಿಐ ತನಿಖೆಗೆ ಆದೇಶಿಸುವಂತೆಯೂ ಶಿಫಾರಸು ಮಾಡಿದೆ. ಈ ವರದಿ ಈಗ ರಕ್ಷಣಾ ಸಚಿವಾಲಯದ ಪರಿಶೀಲನೆಯಲ್ಲಿದೆ ಎಂದು ಸರ್ಕಾರ ತಿಳಿಸಿದೆ.
ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಲಂಕಶ ಪರಿಶೀಲನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದೆ. ವರದಿಯಲ್ಲಿರುವ ವಿಚಾರಗಳು ಗಂಭೀರ ಹಾಗೂ ಸೂಕ್ಷ್ಮವಾಗಿದ್ದು, ನಿವೃತ್ತಿಯಾಗಿರುವ ಅಥವಾ ಸೇವೆ ಸಲ್ಲಿಸುತ್ತಿರುವ ಯಾವುದೇ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡು ಬಂದರೆ ಅವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿ ತಿಳಿಸಿದ್ದಾರೆ.

ಯಾವಾಗ ಸ್ಥಾಪನೆ?
ಈ ರಹಸ್ಯ ಬೇಹುಗಾರಿಕಾ ದಳ ತಾಂತ್ರಿಕ ಸೇವೆಗಳ ವಿಭಾಗವನ್ನು ವಿ.ಕೆ. ಸಿಂಗ್ ಮೇ 2010ರಂದು ರಚಿಸಿದ್ದರು. ಎರಡು ವರ್ಷಗಳಲ್ಲಿ ಈ ಘಟಕ 20 ಕೋಟಿ ಹಣ ಬಳಸಿಕೊಂಡಿತ್ತು. 8 ಕೋಟಿ ರುಪಾಯಿಗೆ ಸಂಬಂಧಿಸಿ ಸರಿಯಾದ ದಾಖಲೆಗಳೇ ಇಲ್ಲ. ಆದರೆ, ಇದನ್ನು ರಹಸ್ಯ ಕಾರ್ಯಾಚರಣೆಗಳಿಗೆ ಬಳಸಲಾಗಿದೆ ಎನ್ನುವ ಆರೋಪ ಇದೆ. ಈ ಸಂಬಂಧ ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆ. ವಿನೋದ್ ಭಾಟಿಯಾ ಅವರು ವರದಿ ಸಿದ್ಧಪಡಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನಿಕಟಪೂರ್ವ ಸೇನಾ ಮುಖ್ಯಸ್ಥರು ರಚಿಸಿದ್ದ ರಹಸ್ಯ ಘಟಕದ ಕಾರ್ಯನಿರ್ವಹಣೆ ಕುರಿತು ಪರಿಶೀಲನೆಗೆ ಜ. ಬಿಕ್ರಂ ಸಿಂಗ್ ಅವರು ನೇಮಿಸಿದ್ದ ತನಿಖಾ ಸಮಿತಿ ಪರವಾಗಿ ಭಾಟಿಯಾ ಈ ವರದಿ ಸಿದ್ಧಪಡಿಸಿದ್ದಾರೆ.

ಏನು ಆರೋಪ?

  •    ಬೇಹುಗಾರಿಕಾ ದಳದಲ್ಲಿ ರಹಸ್ಯವಾಗಿ ತಾಂತ್ರಿಕ ಸೇವೆಗಳ ವಿಭಾಗ ಸ್ಥಾಪನೆ
  •    ಹಿರಿಯ ಸೇನಾಧಿಕಾರಿಗಳ ದೂರವಾಣಿ ಅಕ್ರಮವಾಗಿ ಕದ್ದಾಲಿಕೆ
  •    ಕೃಷಿ ಸಚಿವ ಗುಲಾಂ ಹಸನ್ ಮಿರ್ ಅವರಿಗೆ 1 ಕೋಟಿ ಪಾವತಿ
  •    ಸೇನೆಯ ಕೆಲವರು ಉತ್ತರಾಧಿಕಾರಿಗಳಾಗದಂತೆ ನೋಡಿಕೊಳ್ಳಲು ಎನ್‌ಜಿಒ ಸ್ಥಾಪನೆ, ಕೆಲವು ಎನ್‌ಜಿಒಗಳಿಗೆ ಹಣ ಪಾವತಿ
ತನಿಖೆಗೆ ಆಗ್ರಹ
-ರಶೀದ್ ಆಳ್ವಿ, ಕಾಂಗ್ರೆಸ್ ಮುಖಂಡ
-ನಿರ್ಮಲಾ ಸೀತಾರಾಮನ್, ಬಿಜೆಪಿ ವಕ್ತಾರೆ
-ಜ. ವಿ.ಕೆ. ಸಿಂಗ್, ನಿವೃತ್ತ ಭೂ ಸೇನಾ ಮುಖ್ಯಸ್ಥ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.