ಪ್ರಧಾನ ಸುದ್ದಿ

ತಿರಸ್ಕಾರದ ಹಕ್ಕು

ತಿರಸ್ಕಾರದ ಹಕ್ಕು
Published On :

ಶುಕ್ರವಾರ ಎರಡು ವಿಚಾರಗಳಿಗೆ ಮಹತ್ವ ಪಡೆದಿದೆ. ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಜಾರಿಗೆ ಬರಬೇಕು ಎಂಬ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪು. ಇದರಿಂದ ಮತ ಹಾಕುವುದೇ ಬೇಡ ಎಂದು ದೂರ ಉಳಿಯುವವರಿಗೂ ಹಕ್ಕು ಇದೆ ಎಂಬುದನ್ನು ತಿಳಿಸಿಕೊಟ್ಟಿದೆ. ಜತೆಗೆ ದೋಷಿ ಸಂಸದರ ರಕ್ಷಣೆಗಾಗಿ ಕೇಂದ್ರ ಸರ್ಕಾರದ ಉದ್ದೇಶಿತ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ. ಅದನ್ನು ಹರಿದು ಬಿಸಾಡಿ ಎಂದು ಗುಡುಗಿದ್ದಾರೆ...

ಪಿಟಿಐ ನವದೆಹಲಿ ಸೆ.27-
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರಿಗೆ ಇಷ್ಟವಾಗದೇ ಇದ್ದಲ್ಲಿ ಅವರನ್ನು ತಿರಸ್ಕರಿಸುವ ಹಕ್ಕನ್ನು ಒದಗಿಸಿಕೊಡಿ...
ಇದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನೀಡಿರುವ ಸ್ಪಷ್ಟ ನಿರ್ದೇಶನ.
ಅಭ್ಯರ್ಥಿ ತಿರಸ್ಕರಿಸುವ ಹಕ್ಕಿನ ಕುರಿತಂತೆ ಐತಿಹಾಸಿಕ ತೀರ್ಪು ನೀಡಿರುವ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ, ನ್ಯಾಯಮೂರ್ತಿಗಳಾದ ರಂಜನಾ ಪ್ರಕಾಶ್ ದೇಸಾಯಿ ಮತ್ತು ರಂಜನ್ ಗೊಗೋಯ್ ಅವರಿದ್ದ ಪೀಠ, ರಾಜಕಾರಣದ ಶುಚಿತ್ವಕ್ಕೆ ಮುಂದಾಗಿದೆ.
ಜನರಿಗೆ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಆರಿಸುವ ಹಕ್ಕಿರುವಂತೆಯೇ, ಸೂಕ್ತ ಅಭ್ಯರ್ಥಿಗಳಿಲ್ಲದ ಕ್ಷೇತ್ರದಲ್ಲಿ ಅವರನ್ನು ತಿರಸ್ಕರಿಸುವ ಹಕ್ಕೂ ಇರಬೇಕು. ಈ ಹಿನ್ನೆಲೆಯಲ್ಲಿ ಬ್ಯಾಲೆಟ್ ಪೇಪರ್ ಮತ್ತು ಇವಿಎಂಗಳಲ್ಲಿ 'ಮೇಲಿನ ಯಾರೂ ಬೇಡ' ಎಂಬ ಗುಂಡಿಯನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಇಷ್ಟೇ ದಿನದಲ್ಲಿ ಈ ಸೌಲಭ್ಯ ತನ್ನಿ ಎಂದು ಸುಪ್ರೀಂಕೋರ್ಟ್ ಗಡುವು ವಿಧಿಸಿಲ್ಲ. ಹೀಗಾಗಿ ಮುಂಬರುವ ಪಂಚ ರಾಜ್ಯಗಳ ಚುನಾವಣೆ ಅಥವಾ 2014ರ ಲೋಕಸಭೆ ಚುನಾವಣೆ ಹೊತ್ತಿಗೆ ಈ ನಿಯಮ ಜಾರಿಗೆ ಬರಬಹುದು.
ಆದರೆ ನೇತ್ಯಾತ್ಮಕ ಮತಗಳೇ ಹೆಚ್ಚು ಬಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಇವಿಎಂನ ಕಡೆಯಲ್ಲಿ ಈ 'ತಿರಸ್ಕಾರ'ದ ಬಟನ್ ಅಥವಾ ಬ್ಯಾಲೆಟ್ ಪೇಪರ್‌ನ ಅಂತ್ಯದಲ್ಲಿ ತಿರಸ್ಕಾರದ ಆಯ್ಕೆ ಇರಬೇಕು. ಈ ಮೂಲಕ ಜನರಿಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಇಷ್ಟವಾಗದಿದ್ದಲ್ಲಿ ಅವರನ್ನು ತಿರಸ್ಕಾರ ಮಾಡುವ ಅವಕಾಶ ನೀಡಬೇಕು ಎಂದು ಹೇಳಿದೆ.
'ನೇತ್ಯಾತ್ಮಕ ಮತದಾನ ಅಥವಾ ತಿರಸ್ಕಾರದ ಮತದಾನದಿಂದ ಚುನಾವಣೆಗಳು ಶುದ್ಧವಾಗುತ್ತವೆ ಮತ್ತು ಸ್ಪಂದನಶೀಲವಾಗುತ್ತವೆ. ಅಲ್ಲದೆ ಅಭ್ಯರ್ಥಿಗಳು ಸರಿ ಇಲ್ಲ ಎಂದು ಮನೆಯಲ್ಲೇ ಉಳಿಯುತ್ತಿದ್ದ ಮತದಾರರು ಚುನಾವಣಾ ಕೇಂದ್ರಕ್ಕೆ ಬಂದು ಮತ ಹಾಕುತ್ತಾರೆ. ಈ ಮೂಲಕವಾದರೂ ಅವರು ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕು ಪಡೆಯುತ್ತಾರೆ' ಎಂದು ತೀರ್ಪು ನೀಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರು ಹೇಳಿದ್ದಾರೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ಎನ್‌ಜಿಓ ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿತ್ತು. ರೈಟ್ ಟು ರಿಜೆಕ್ಟ್ ಅಥವಾ ತಿರಸ್ಕಾರದ ಹಕ್ಕನ್ನು ಮತದಾರರಿಗೆ ಒದಗಿಸಬೇಕು. ಇದರಂತೆ ಚುನಾವಣೆಯಲ್ಲಿ ಶೇ.50 ರಷ್ಟು ತಿರಸ್ಕಾರದ ಮತಗಳು ಬಂದರೆ ಆ ಕ್ಷೇತ್ರದಲ್ಲಿ ಫಲಿತಾಂಶ ತಡೆಹಿಡಿದು ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಿತ್ತು. ಇದನ್ನು ಒಪ್ಪಿರುವ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಅಷ್ಟಕ್ಕೂ ತಿರಸ್ಕಾರದ ಹಕ್ಕು ಎಂದರೇನು?: ನೆಗೆಟಿವ್ ವೋಟಿಂಗ್ ಅಂದ್ರೆ ಮತದಾನವೇ ಬೇಡ ಎಂದು ಮನೆಯಲ್ಲಿ ಉಳಿಯುವುದಲ್ಲ. ಇದರ ಬದಲಾಗಿ ಮತಗಟ್ಟೆಗೆ ಹೋಗಿ, ಇವಿಎಂ ಅಥವಾ ಬ್ಯಾಲೆಟ್ ಪೇಪರ್‌ನಲ್ಲಿರುವ ತಿರಸ್ಕಾರದ ಆಯ್ಕೆಗೆ ಒತ್ತಿ ಬರುವುದು. ಇದು ರಹಸ್ಯವಾಗಿರುವುದರಿಂದ ಮತದಾರ ತಿರಸ್ಕಾರದ ಹಕ್ಕು ಚಲಾಯಿಸಿದ್ದಾನೆ ಎಂಬುದು ಬಹಿರಂಗವಾಗುವುದೇ ಇಲ್ಲ.  ತಿರಸ್ಕಾರದ ಹಕ್ಕು ಭಾರತದ ಪಾಲಿಗೆ ಹೊಸದೇನಲ್ಲ. ಈಗಲೂ ಇದು ಜಾರಿಯಲ್ಲಿದೆ. ಆದರೆ ರೂಪ ಬೇರೆಯದ್ದಷ್ಟೇ. ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 49(0) ನಲ್ಲಿ ತಿರಸ್ಕಾರದ ಹಕ್ಕಿನ ಬಗ್ಗೆ ಉಲ್ಲೇಖಿಸಲಾಗಿದೆ. ಅಂದರೆ ಮತದಾರನೊಬ್ಬ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತಹಾಕಲು ಇಷ್ಟವಿಲ್ಲದೇ ಹೋದಲ್ಲಿ ಆತ ಮತಕೇಂದ್ರದಲ್ಲಿರುವ ಮತಗಟ್ಟೆ ಅಧಿಕಾರಿ ಬಳಿಗೆ ಹೋಗಿ, ತನ್ನ ಹೆಸರಿನ ಮುಂದೆ ಸಹಿ ಮಾಡಿ, ಅವರಿಗೆ ತನಗೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲ ಎಂದು ಹೇಳಿ ಮತ ಹಾಕದೇ ವಾಪಸ್ ಬರಬಹುದಾಗಿದೆ. ಈ ಸಂದರ್ಭದಲ್ಲಿ ಆತನ ಬೆರಳಿಗೆ ಶಾಯಿಯನ್ನು ಹಾಕಬೇಕು. ಇದರಿಂದ ಈ ವ್ಯಕ್ತಿಯ ಹೆಸರಲ್ಲಿ ಬೇರೆಯವರು ಮತ ಹಾಕುವುದು ತಪ್ಪುತ್ತಿತ್ತು.

ಕೋರ್ಟ್ ಅಭಿಮತ
ಈ ಅವಕಾಶ 13 ದೇಶಗಳಲ್ಲಿ ಜಾರಿಯಲ್ಲಿದೆ.  ಸಂಸತ್ತಿನಲ್ಲಿ ಮತದಾನ ನಡೆಯುವಾಗ ಸಂಸದರಿಗೆ ಮತದಾನದಿಂದ 'ದೂರವುಳಿಯುವ' ಸೌಲಭ್ಯ ಇರುತ್ತದೆ. ಒಂದು ವೇಳೆ ನಾವು ಚುನಾವಣಾ ಪ್ರಕ್ರಿಯೆಯಲ್ಲಿ ತಿರಸ್ಕಾರದ ಅವಕಾಶ ನೀಡಿದಲ್ಲಿ ಜನರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗುತ್ತದೆ. ಇದಷ್ಟೇ ಅಲ್ಲ, ಪಕ್ಷಗಳಿಗೂ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಅನಿವಾರ್ಯತೆಯನ್ನು ತಂದಿಡುತ್ತದೆ.

4 ಸಂಗತಿಗಳು
ಹಕ್ಕು ಚಲಾವಣೆ ಹೇಗೆ?

ತಿರಸ್ಕಾರದ ಹಕ್ಕು ಎಂದರೆ ಮನೆಯಲ್ಲಿ ಉಳಿಯುವುದಲ್ಲ, ಮತಗಟ್ಟೆಗೆ ಹೋಗಿ ತಿರಸ್ಕಾರದ ಗುಂಡಿ ಆಯ್ಕೆ ಮಾಡುವುದು.

ಯಾವ ದೇಶಗಳಲ್ಲಿದೆ?
ಗ್ರೀಸ್, ನೆವಾಡ, ಉಕ್ರೇನ್, ಸ್ಪೇನ್ ಮತ್ತು ಕೊಲಂಬಿಯಾ ಸೇರಿ 13 ದೇಶಗಳಲ್ಲಿ ಜಾರಿಯಲ್ಲಿದೆ. ರಷ್ಯಾ 2006ರಲ್ಲಿ ಇದನ್ನು ರದ್ದು ಮಾಡಿತ್ತು. ಪಾಕಿಸ್ತಾನ 2013ರಲ್ಲಿ ಜಾರಿಗೆ ತಂದು ಆಗಲೇ ವಾಪಸ್ ತೆಗೆದುಕೊಂಡಿತ್ತು.

ಉಪಯೋಗ

ರಾಜಕೀಯ ಪಕ್ಷಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆರಿಸುವ ಹೊಣೆಗಾರಿಕೆ ನೀಡುತ್ತದೆ. ಜನ ಎಲ್ಲಿ ತಿರಸ್ಕರಿಸಿಬಿಡುತ್ತಾರೋ ಎಂಬ ಭಯದಿಂದಾದರೂ ಪರಿಶುದ್ಧ ವ್ಯಕ್ತಿಗಳು ಕಣಕ್ಕಿಳಿಯಬಹುದು.

ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 49(0) ಯಾರಾದರೂ ಬಳಸಿದ್ದಾರೆಯೇ?
ಈ ಬಗ್ಗೆ ಜನರಿಗೆ ಇರುವ ಅರಿವು ಕಡಿಮೆ. ಹೀಗಾಗಿ ಈವರೆಗೆ ತೀರಾ ಕಡಿಮೆ ಮಂದಿ ಇದನ್ನು  ಬಳಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ವಿಧಾನವನ್ನು ಜನಪ್ರಿಯಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೇಳಿದೆ.

ಯಾವಾಗ ಜಾರಿ?
ಚುನಾವಣಾ ಆಯೋಗದ ಮೂಲಗಳ ಪ್ರಕಾರ ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ಮಿಜೋರಾಂ ಚುನಾವಣೆಯಲ್ಲಿ ಜಾರಿಯಾಗಲಿದೆ.  ತೀರ್ಪಿನ ಹಿನ್ನೆಲೆಯಲ್ಲಿ  ಆಯೋಗ ಸರ್ಕಾರದ ಜೊತೆ ಚರ್ಚಿಸಿ ಜಾರಿಗೆ ತರಬೇಕಿದೆ. ಹೀಗಾಗಿ ಪಂಚ ರಾಜ್ಯಗಳ ಚುನಾವಣೆ ಹೊತ್ತಲ್ಲಿ, ಲೋಕಸಭೆ ಚುನಾವಣೆ ವೇಳೆ ಜಾರಿಯಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.