ದುರ್ಬಲ ಪ್ರಧಾನಿ ಯಾರು?

ಲಾಗ ಹಾಕಿದ ಕಾಂಗ್ರೆಸ್, ಬಾರು, ಆಡ್ವಾಣಿ ಮಾರುತ್ತರ ಮೋದಿ ಅಲೆಗೆ ಬಿಜೆಪಿ ಸಮಜಾಯಿಷಿ
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಿನ್ನೆ ಶತ್ರುವಾಗಿದ್ದವನು ಇಂದು ಮಿತ್ರನಾಗಬಹುದು. ಇಂದು ಕೈ ಹಿಡಿದವನು ನಾಳೆ ಕೈಕೊಡವಬಹುದು. ನಿನ್ನೆ ತೆಗಳಿದವನೇ ನಾಳೆ ಹೊಗಳಬಹುದು. ದೇಶದ ದುರ್ಬಲ ಪ್ರಧಾನಿ ಯಾರೆಂಬ ವಿಚಾರದಲ್ಲಿ ನಾಯಕರ ಹೇಳಿಕೆಗಳು ಇಂಥ 'ಲಾಗ'ಕ್ಕೆ ನಿದರ್ಶನಗಳು...
ವಾಜಪೇಯಿಯೇ ದುರ್ಬಲ ಪ್ರಧಾನಿ
ವಾಜಪೇಯಿ ದೇಶದ ಅತಿ ದುರ್ಬಲ ಪ್ರಧಾನಿ. ಕಂದಹಾರ್ ವಿಮಾನ ಅಪಹರಣ ವೇಳೆ ಉಗ್ರರ ಬಿಡುಗಡೆ ಮಾಡಿದ್ದೇ ಅಟಲ್. ಸಂಸತ್ ದಾಳಿಗೂ ಅವಕಾಶ ಕೊಟ್ಟರು. ಕಾರ್ಗಿಲ್‌ನಲ್ಲಿ ನಮ್ಮ 50 ಯೋಧರು ಮೃತಪಟ್ಟರೂ ಪಾಕ್ ಪ್ರಧಾನಿಯನ್ನು ಆಲಿಂಗಿಸಿಕೊಂಡರು
-ಸಂಜಯ್ ಝಾ, ಕಾಂಗ್ರೆಸ್ ವಕ್ತಾರ
ಸಿಂಗ್ ಕಿಂಗ್ ಅಲ್ಲವೇ ಅಲ್ಲ
ಮನಮೋಹನ ಸಿಂಗ್‌ರಷ್ಟು ದುರ್ಬಲ ಪ್ರಧಾನಿ ನೋಡಿಯೇ ಇಲ್ಲ. ಹಗರಣಗಳನ್ನು ಮೈತ್ರಿಕೂಟದ ಅನಿವಾರ್ಯಗಳಡಿ ಹೂತು ಹಾಕಬಹುದು. ಆದರೆ, ತಮ್ಮದೇ ಸಹೋದ್ಯೋಗಿಗಳು ಭ್ರಷ್ಟರಾಗದಂತೆ ತಡೆಯಲಾಗದಷ್ಟೂ ಅವರು ದುರ್ಬಲರಾಗಿದ್ದರು.
-ಎಲ್.ಕೆ. ಆಡ್ವಾಣಿ, ಬಿಜೆಪಿ ಹಿರಿಯ ಮುಖಂಡ
ಪ್ರಧಾನಿ ಧೃತರಾಷ್ಟ್ರನಲ್ಲ, ಭೀಷ್ಮ
ಪ್ರಧಾನಿ ಸಿಂಗ್ ಮಹಾಭಾರತದ ಭೀಷ್ಮನಂತಿದ್ದರೇ ಹೊರತು ಧೃತರಾಷ್ಟ್ರನಲ್ಲ. ನನ್ನ ಕೃತಿಯಲ್ಲಿರುವ ವಿಚಾರ ಯುಪಿಎ-1ರದ್ದೇ ಹೊರತು ಯುಪಿಎ-2ರದ್ದಲ್ಲ. ಆದರೆ, ಸರ್ಕಾರದಲ್ಲಿ ಸೋನಿಯಾ ಮಾತೇ ಅಂತಿಮವಾಗಿತ್ತು ಎನ್ನುವ ನಿಲುವಿಗೆ ಈಗಲೂ ಬದ್ಧ.
- ಸಂಜಯ್ ಬಾರು, ಪಿಎಂ ಮಾಜಿ ಸಲಹೆಗಾರ
-ಬಿಜೆಪಿ, ಮೋದಿ ಅಲೆ ಬೇರೆ ಅಲ್ಲ
ಲಖನೌ/ಅಮೇಠಿ: ಬಿಜೆಪಿ ಅಲೆ ಮತ್ತು ಮೋದಿ ಅಲೆ ಮಧ್ಯೆ ವ್ಯತ್ಯಾಸವಿಲ್ಲ. ಮೋದಿ ಅಲೆಯೇ ಬಿಜೆಪಿ ಅಲೆ. ಹೀಗಂದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್. 'ದೇಶದಲ್ಲಿ ಬಿಜೆಪಿ ಅಲೆ ಇದೆಯೇ ಹೊರತು ಮೋದಿ ಅಲೆಯಲ್ಲ' ಎಂಬ ಮುರಳಿ ಮನೋಹರ ಜೋಶಿ ಹೇಳಿಕೆಗೆ ಸೋಮವಾರ ಹೀಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ, ಮೋದಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯ ಇಲ್ಲ. ನಾವೆಲ್ಲರೂ ಪಕ್ಷದ ಅಂಗಗಳು ಎಂದಿರುವ ಸಿಂಗ್, ಪಕ್ಷದೊಳಗೆ ಭಿನ್ನಮತ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಜೋಶಿ ಅವರೂ ಮೋದಿ ಮತ್ತು ನನ್ನ ನಡುವೆ ಮನಸ್ತಾಪವಿಲ್ಲ ಎಂದಿದ್ದಾರೆ.
-ಚುನಾವಣೆ ಸ್ಪರ್ಧೆ ವೈಯಕ್ತಿಕ
ವಾರಾಣಸಿಯಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲು ಮುಂದಾಗಿದ್ದರೆನ್ನುವ ಮಾಧ್ಯಮ ವರದಿ ದೆಹಲಿ ಸೇರಿದಂತೆ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ, ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಬೇಕಾಗಿತ್ತು ಎಂದಿದ್ದಾರೆ. ಆದರೆ, ಪ್ರಿಯಾಂಕಾ ಅಂಥ ಪ್ರಸ್ತಾಪವೇ ಇಲ್ಲ ಎಂದಿದ್ದಾರೆ.
- ಪ್ರಧಾನಿ ಕುರಿತೂ ತನಿಖೆಯಾಗಲಿ
ನವದೆಹಲಿ: ಆ್ಯಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್ ಬೆನ್ನಲ್ಲೇ ಮತ್ತೊಂದು ಕೃತಿ ಪ್ರಧಾನಿ ನಿದ್ದೆಗೆಡಿಸಿದೆ. ಕಲ್ಲಿದ್ದಲು ಖಾತೆ ನಿವೃತ್ತ ಕಾರ್ಯದರ್ಶಿ ಪಿ.ಸಿ. ಪಾರಖ್‌ರ 'ಕ್ರುಸೇಡರ್ ಆರ್ ಕಾನ್‌ಸ್ಪಿರೇಟರ್? ಕೋಲ್ಗೇಟ್ ಆ್ಯಂಡ್ ಅದರ್ ಟ್ರುಥ್ಸ್' ಕೃತಿ ಸಿಂಗ್‌ರ ದಯನೀಯ ಸ್ಥಿತಿ ಕುರಿತು ಬೆಳಕು ಚೆಲ್ಲಿದೆ. ಒಂದು ವೇಳೆ ಪ್ರಧಾನಿ ಅಧಿಕಾರ ಚಲಾಯಿಸಿರುತ್ತಿದ್ದರೆ ಕಲ್ಲಿದ್ದಲು ಹಗರಣ ತಡೆಯಬಹುದಿತ್ತು. ಹಗರಣದ ಹಿಂದೆ ದೊಡ್ಡ ಸಂಚು ಇದೆ ಎಂದು ಸಿಬಿಐ ಹೇಳಿದೆ. ಹಾಗಿದ್ದ ಮೇಲೆ ಪ್ರಧಾನಿ ಪಾತ್ರವೂ ಇರಬೇಕಲ್ಲವೇ? ಹಾಗಾಗಿ ಈ ಕುರಿತೂ ತನಿಖೆಯಾಗ ಬೇಕಲ್ಲವೇ ಎಂದು ಪಾರಖ್ ಪ್ರಶ್ನಿಸಿದ್ದಾರೆ.
-ಮೋದಿ ಸತ್ಯ ಹೇಳಲ್ಲ: ಜೈರಾಂ
ಚಿಕ್ಕಮಗಳೂರಿನಲ್ಲಿ ನರೇಂದ್ರ ಮೋದಿ ಭಾನುವಾರ ಮಾಡಿದ ಆರೋಪಕ್ಕೆ ಕೇಂದ್ರ ಸಚಿವ ಜೈರಾಂ ರಮೇಶ್ ತಿರುಗೇಟು ನೀಡಿದ್ದಾರೆ. ಮೋದಿ ಹೇಳುವುದೆಲ್ಲ ಸುಳ್ಳಿನ ಕಂತೆ. ಅವರು ಬಾಯ್ತಪ್ಪಿ ಕೂಡ ಸತ್ಯ ಹೇಳುವ ವ್ಯಕ್ತಿಯಲ್ಲ ಎಂದು ಆರೋಪಿಸಿದ್ದಾರೆ. 'ಭಾರತ ಅತೀ ಕೊಳಕು, ಸೋಮಾರಿ ದೇಶ ಎಂದು ನಾನು ವಿದೇಶ ಭೇಟಿ ವೇಳೆ ಹೇಳಿದ್ದಾಗಿ ಆರೋಪಿಸಿದ್ದೀರಿ. ಮೋದಿ ಅವರೇ... ನೀವು ಸುಳ್ಳು ಹೇಳುತ್ತೀರಿ ಎನ್ನುವುದು ಗೊತ್ತಿತ್ತು. ಒಂದು ಮಾತಂತೂ ಸ್ಪಷ್ಟವಾಯಿತು. ನೀವು ಬಾಯ್ತಪ್ಪಿ ಕೂಡ ಸತ್ಯ ಮಾತನಾಡುವವರಲ್ಲ ಎಂದು ಮೋದಿಗೆ ಬರೆದ ಪತ್ರದಲ್ಲಿ ಜೈರಾಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


