ಮತಸಹಿಷ್ಣುಗಳು ನಾವು

ರಾಜ್ಯದಲ್ಲಿ ಶೇ. 65 ಮತದಾನ ದಾಖಲೆ ಬರೆಯದಿದ್ದರೂ ಕಳೆದ ಬಾರಿಗಿಂತ ಹೆಚ್ಚು ಕರಾವಳಿಯಲ್ಲಿ ಮತದ ಉಬ್ಬರ, ಉತ್ತರ ಸಿಗದ ಬೆಂಗಳೂರು ಯುವ ಉತ್ಸಾಹಿಗಳು
ಕನ್ನಡಪ್ರಭ ವಾರ್ತೆ, ಬೆಂಗಳೂರು, ಏ.17
ಹದಿನಾರನೇ ಲೋಕಸಭೆ ಚುನಾವಣೆ ಮತಯಾಗದಲ್ಲಿ ರಾಜ್ಯದ ಮತದಾರರು ಬಿರುಸಿನಿಂದ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಶೇ.65ಕ್ಕೂ ಅಧಿಕ ಮತದಾನವಾಗಿದ್ದು, ನಗರ ಪ್ರದೇಶಗಳಿಗಿಂತ ಗ್ರಾಮೀಣ ಕರ್ನಾಟಕದ ಮತದಾರರೇ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳ 434 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ ದಾಖಲಾಗಿದೆ.
ಬಿಸಿಲಿನ ತಾಪಕ್ಕೂ ಜಗ್ಗದ ಮತದಾರರು, ದೇಶದಲ್ಲಿ ಹೊಸ ಸರ್ಕಾರ ರಚಿಸುವ ನಿಟ್ಟಿನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೆಳಗಿನ ತಂಪಿನಲ್ಲಿ ಮನೆಯಲ್ಲೇ ಕುಳಿತಿದ್ದ ಜನ ಬಿಸಿಲೇರುತ್ತಿದ್ದಂತೆ ಮತಗಟ್ಟೆಗೆ ಧಾವಿಸಿರುವ ಅಪರೂಪದ ಸಂಗತಿ ರಾಜ್ಯದ ಮತಯಾಗದಲ್ಲಿ ನಡೆದಿದೆ. ಮೊದಲ 4 ಗಂಟೆಯ ಮತದಾನದಲ್ಲಿ ಕೇವಲ ಶೇ.18.82ರಷ್ಟು ಜನ ಮಾತ್ರ ಮತ ಚಲಾಯಿಸಿದ್ದರು. ಬಿಸಿಲಿನ ಕಾವು ಏರುತ್ತಿದ್ದ ಮಧ್ಯಾಹ್ನದ 6 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ ಸುಮಾರು ಶೇ.40ರಷ್ಟು ಮತದಾನವಾಗಿದೆ. ಕೊನೆಯ ಒಂದು ತಾಸಿನಲ್ಲಿ ಶೇ.7ಕ್ಕೂ ಅಧಿಕ ಮತದಾನವಾಗಿದೆ.
ಇದರೊಂದಿಗೆ ಮತದಾನ ಮಾಡುವ ಇರಾದೆಯಿದ್ದರೆ ಯಾವ ತಾಪಕ್ಕೂ ಮಣಿಯುವುದಿಲ್ಲ ಎನ್ನುವುದನ್ನು ರಾಜ್ಯದ ಮತದಾರರು ತೋರಿಸಿಕೊಟ್ಟಿದ್ದಾರೆ. ಕಳೆದ 2009ರ ಲೋಕಸಭೆ ಚುನಾವಣೆಯಲ್ಲಿ ಶೇ.58.81ರಷ್ಟು ಮತದಾನ ರಾಜ್ಯದಲ್ಲಾಗಿತ್ತು.
ಮತ್ತೊಂದೆಡೆ ಬೆಂಗಳೂರು ನಗರದಲ್ಲಿಯೂ ಚೇತರಿಕೆಯ ಮತದಾನವಾಗಿದ್ದು ಶೇ.50ರ ಗಡಿ ದಾಟಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ.46ರಷ್ಟು ಮತದಾನವಾಗಿತ್ತು. ರಾಜ್ಯದಲ್ಲಿ ಇಲ್ಲಿಯವರೆಗೆ ಅತ್ಯಧಿಕ ಮತದಾನವಾಗಿದ್ದು 1999ರಲ್ಲಿ. 13ನೇ ಲೋಕಸಭೆ ಚುನಾವಣೆಯಲ್ಲಿ ಶೇ.67.58ರಷ್ಟು ಮತದಾನ ಅತ್ಯಧಿಕವಾಗಿ ದಾಖಲಾಗಿದೆ. 1989ರಲ್ಲಿ ನಡೆದ ಒಂಬತ್ತನೇ ಲೋಕಸಭೆ ಚುನಾವಣೆಯಲ್ಲಿ ಶೇ.67.53ರಷ್ಟು ಮತದಾನವನ್ನು ಇದು ಹಿಂದಿಕ್ಕಿತ್ತು. 1999ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಪರ ಅಲೆಯಿಂದ ದೇಶಾದ್ಯಂತ ಮತದಾನವು ಹೆಚ್ಚಾಗಿತ್ತು.
ಗುಲ್ಬರ್ಗ, ಬೆಂ.ಉತ್ತರದಲ್ಲಿ ಕಡಿಮೆ ಮತ
ಬುದ್ಧಿವಂತರ ಜಿಲ್ಲೆಗಳ ಮತದಾರರನ್ನು ಒಳಗೊಂಡ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಶೇ.75 ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ವ್ಯಾಪ್ತಿಯಲ್ಲಿ ಶೇ.72 ಮತದಾನವಾಗಿದೆ. ಗುಲ್ಬರ್ಗ ಕ್ಷೇತ್ರದಲ್ಲಿ ಶೇ.51, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಶೇ. 52 ಮತದಾನವಾಗಿದೆ. ರಾಜ್ಯದಲ್ಲಿ ನೀರಸ ಮತದಾನವಾಗಿರುವುದು ಇಲ್ಲೇ.
ರಾಜಧಾನಿಯಲ್ಲಿ ಮತ ಕುಸಿತ ಸಂಸದ ರಾಜೀವ್ ಅಸಮಾಧಾನ
ಬೆಂಗಳೂರು: ಬೆಂಗಳೂರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ದಾಖಲಾಗದೇ ಇರುವುದಕ್ಕೆ ರಾಜ್ಯಸಭೆ ಸಂಸದ ರಾಜೀವ್ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ, ಇದೊಂದು ನಿರಾಶಾದಾಯಕ ಬೆಳವಣಿಗೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಗುರುವಾರ ನಗರದಲ್ಲಿ ಮಾತನಾಡಿದ ಸಂಸದ ರಾಜೀವ್, ಈ ಬಾರಿ 2009ಕ್ಕಿಂತ ಹೆಚ್ಚಿನ ಮತದಾನ ದಾಖಲಾಗಿದ್ದರೂ, ದೇಶದ ಇತರೆ ಭಾಗಗಳಿಗೆ ಹೋಲಿಸಿದರೆ ಬೆಂಗಳೂರಿಗರು ಹಕ್ಕು ಚಲಾಯಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಇದು ತೀವ್ರ ಅಸಮಾಧಾನ ಮೂಡಿಸಿದೆ ಎಂದಿದ್ದಾರೆ. ಯಾರೆಲ್ಲ ಮತ ಚಲಾಯಿಸಿಲ್ಲವೋ ಅವರು ಸರ್ಕಾರ ಹಾಗೂ ರಾಜಕೀಯವನ್ನು ಟೀಕಿಸುವ ಅಧಿಕಾರ ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ ರಾಜೀವ್. ಅಷ್ಟೇ ಅಲ್ಲದೆ, ಯಾವುದೇ ವ್ಯಕ್ತಿಯ ಅಭಿಪ್ರಾಯವನ್ನು ಪ್ರಕಟಿಸುವ, ಪ್ರಸಾರ ಮಾಡುವ ಮುನ್ನ ಆ ವ್ಯಕ್ತಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದಾನೋ, ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ ಎಂದು ಅವರು ಮಾಧ್ಯಮಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


