ಪ್ರಧಾನ ಸುದ್ದಿ

ಪಿಎಂ ಮಾತಾಡಿದ್ರು

ಪಿಎಂ ಮಾತಾಡಿದ್ರು
Published On :

ನವದೆಹಲಿ: ಪ್ರಧಾನಿ ಮನಮೋಹನ ಸಿಂಗ್ ಅವರು ಮೌನಿಯೂ ಅಲ್ಲ, ದುರ್ಬಲರೂ ಅಲ್ಲ. ಒಂದು ವೇಳೆ ಅವರು ದುರ್ಬಲರಾಗಿರುತ್ತಿದ್ದರೆ ಭಾರತದ ಜಿಡಿಪಿ ಮೂರು ಪಟ್ಟು ಏರಿಕೆಯಾಗುತ್ತಲೇ ಇರಲಿಲ್ಲ..! - ಪ್ರಧಾನಿ ಮನಮೋಹನ ಸಿಂಗ್ ವಿರುದ್ಧ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಟೀಕೆಗಳಿಗೆ ಪ್ರಧಾನಿ ಕಾರ್ಯಾಲಯ(ಪಿಎಂಒ) ನೀಡಿದ ಖಾರವಾದ ಪ್ರತಿಕ್ರಿಯೆ ಇದು.

ಪ್ರಧಾನಿ ಮಾಧ್ಯಮ ಮತ್ತು ವಿರೋಧಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡದೇ ಇರಬಹುದು. ಅವರೊಬ್ಬ ಪ್ರಧಾನಿ. ಅವರಿಗೆ ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೂ ಇಲ್ಲ ಎಂದು ಪ್ರಧಾನಿ ಮಾಧ್ಯಮ ಸಲಹೆಗಾರ ಪಂಕಜ್ ಪಚೌರಿ ಶುಕ್ರವಾರ ಹೇಳಿದ್ದಾರೆ.
ಸಂಜಯ್ ಬಾರು ಮತ್ತು ಪಿ.ಸಿ. ಪಾರಖ್ ಅವರ ಕೃತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಮನಮೋಹನ ಸಿಂಗ್ ನಾಯಕತ್ವದ ಮೇಲೆ ಬಿಜೆಪಿ ಮಾಡಿದ ಟೀಕೆಗಳ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಅಗತ್ಯ ಕಂಡರಷ್ಟೇ ಪ್ರತಿಕ್ರಿಯೆ: ಪ್ರತಿಕ್ರಿಯೆ ನೀಡುವ ಮೊದಲು ಅದರ ಸತ್ಯಾಸತ್ಯತೆ ಪರಿಶೀಲಿಸಬೇಕಾಗುತ್ತದೆ. ಅಗತ್ಯ ಕಂಡರಷ್ಟೇ ಅವರು ಪ್ರತಿಕ್ರಿಯೆ ನೀಡುತ್ತಾರೆ. ಈ ಮೂಲಕ ಬೇಕಾಬಿಟ್ಟಿ ಆರೋಪಗಳಿಗೆ ಉತ್ತರ ನೀಡುವ ಜಾಯಮಾನ ಪ್ರಧಾನಿಯವರದ್ದಲ್ಲ ಎಂದಿದ್ದಾರೆ ಪಚೌರಿ.
ಅವಕಾಶವೇ ನೀಡಿಲ್ವಲ್ಲಪ್ಪ: ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮಾತನಾಡಿಯೇ ಇಲ್ಲ ಎನ್ನುತ್ತಾರೆ ವಿರೋಧಿಗಳು. ಆದರೆ, ಪ್ರಮುಖ ವಿಚಾರಗಳಿಗೆ ಸಂಬಂಧಿಸಿ ಸಂಸತ್ತಿನಲ್ಲಿ ಮಾತನಾಡಲು  ವಿರೋಧ ಪಕ್ಷಗಳು ಅವಕಾಶ ನೀಡಬೇಕಲ್ಲ. ಅವಕಾಶವೇ ಕೊಡದಿದ್ರೆ ಮಾತನಾಡುವುದಾದರೂ ಹೇಗೆ?

3 ದಿನಗಳಿಗೊಮ್ಮೆಮಾತನಾಡಿದ್ದಾರೆ
ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಪ್ರಧಾನಿ ಸಿಂಗ್ ಸರಾಸರಿ ಪ್ರತಿ ಮೂರು ದಿನಗಳಿಗೊಮ್ಮೆ ಭಾಷಣ ಮಾಡಿದ್ದಾರೆ. 1,198 ಭಾಷಣ ಮಾಡಿದ್ದಾರೆ, ಅನೇಕ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಿದ್ದಾರೆ. ಇವುಗಳಲ್ಲಿ ಬಹುತೇಕವು ಆರ್ಥಿಕತೆ, ವಿಜ್ಞಾನ, ಶಿಕ್ಷಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ್ದು. ಸಮೀಕ್ಷೆಯೊಂದರ ಪ್ರಕಾರ ಕ್ರೀಡೆ, ರಾಜಕೀಯ ಮತ್ತು ಮನರಂಜನೆಗಷ್ಟೇ ಮಾಧ್ಯಮ ಹೆಚ್ಚು ಆದ್ಯತೆ ನೀಡುತ್ತವೆ. ಆದರೆ, ಪ್ರಧಾನಿ ಈ ಕುರಿತು ಮಾತನಾಡಿದ್ದು ಕಡಿಮೆ. ಹಾಗಾಗಿ ಮಾಧ್ಯಮದ ಆದ್ಯತೆ ಬೇರೆಯಾಗಿದ್ದರಿಂದ ಅವರ ಭಾಷಣಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿಲ್ಲ.

ಬಾರು, ಪಾರಖ್ ಕೃತಿಗೆ ಯಾಕೆ ಪ್ರತಿಕ್ರಿಯಿಸಲಿ?
ಪ್ರಧಾನಿಗಳ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ. ಪಾರಖ್ ಅವರ ಕೃತಿಗಳು ಹುಟ್ಟು ಹಾಕಿದ ವಿವಾದಕ್ಕೆ ಸಂಬಂಧಿಸಿ ಡಾ. ಸಿಂಗ್ ಯಾಕೆ ಪ್ರತಿಕ್ರಿಯೆ ನೀಡಬೇಕು? ಈ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಕಾರ್ಯಾಲಯ ಈಗಾಗಲೇ ಎರಡೆರಡು ಬಾರಿ ಸ್ಪಷ್ಟನೆ ನೀಡಿದೆ. ಪ್ರಧಾನಿ ಕುಟುಂಬ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ಕಾಂಗ್ರೆಸ್ ಕೂಡ ಈ ಕುರಿತು ಪ್ರತಿಕ್ರಿಯಿಸಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರಧಾನಿ ಸಿಂಗ್ ಹೊಸದಾಗಿ ಹೇಳುವಂಥದ್ದೇನಿದೆ?

ನಾನು ಪುಸ್ತಕ ಬರೆಯುತ್ತಿಲ್ಲ. ನನಗೂ ಪುಸ್ತಕ ಬರೆಯುವಂತೆ ಕೇಳಿಕೊಳ್ಳಲಾಗಿತ್ತು. ನಾನು ಅದನ್ನು ತಿರಸ್ಕರಿಸಿದ್ದೇನೆ.
-ಪಂಕಜ್ ಪಚೌರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.