ಪ್ರಧಾನ ಸುದ್ದಿ

ಐಪಿಎಲ್ ಮೇಯ್ದಪ್ಪನ ಸತ್ಯ

ಐಪಿಎಲ್ ಮೇಯ್ದಪ್ಪನ ಸತ್ಯ
Published On :

ಬಿಸಿ ಬಿಸಿ ತನಿಖೆ
ಪಿಟಿಐ ನವದೆಹಲಿ/ಚೆನ್ನೈ ಫೆ.10

ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಮುನ್ನಡೆಸುವ ಉಮೇದಿನಲ್ಲಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರಿಗೆ ಭಾರಿ ಮುಖಭಂಗವಾಗಿದೆ. ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಆರೋಪಿ, ಜತೆಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಭಾಗವೂ ಹೌದು ಎನ್ನುವುದು ಸಾಬೀತಾಗಿದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ ನ್ಯಾ.ಮುಕುಲ್ ಮುದ್ಗಲ್ ನೇತೃತ್ವದ ತ್ರಿಸದಸ್ಯ ಸಮಿತಿ ಘೋಷಿಸಿದೆ. ಈ ಮೂಲಕ ಸಿಎಸ್‌ಕೆ ತಂಡಕ್ಕೂ ಮೇಯಪ್ಪನ್‌ಗೂ ಸಂಬಂಧ ಇಲ್ಲ ಎನ್ನುವ ಶ್ರೀನಿವಾಸನ್ ವಾದ ಸುಳ್ಳಾದಂತಾಗಿದೆ.
ಇದೇ ವೇಳೆ, ಸಿಎಸ್‌ಕೆ ತಂಡದ ಮಾಲೀಕರೂ ಆಗಿರುವ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲೂ ಮುಂದುವರಿಯುತ್ತಿರುವುದನ್ನು ಗಂಭೀರ ವಿಚಾರ ಎಂದಿರುವ ಸಮಿತಿ, ಈ ಕುರಿತು ಪರಿಶೀಲನೆ ನಡೆಸುವ ಅಗತ್ಯ ಇದೆ ಎಂದೂ ನ್ಯಾಯಾಲಯಕ್ಕೆ ತಿಳಿಸಿದೆ.
170 ಪುಟಗಳ ವರದಿ: ಐಪಿಎಲ್ ಮ್ಯಾಚ್‌ಫಿಕ್ಸಿಂಗ್‌ಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ಗೆ ಸೋಮವಾರ 170 ಪುಟಗಳಷ್ಟು ಸುದೀರ್ಘ ವರದಿ ಸಲ್ಲಿಸಿದ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ  ನಿವೃತ್ತ ಮುಖ್ಯ ನ್ಯಾ. ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ, 'ಗುರುನಾಥ್ ಮೇಯಪ್ಪನ್ ಸಿಎಸ್‌ಕೆ ತಂಡದ ಸದಸ್ಯ ಎನ್ನುವುದು ಹಾಗೂ ಬೆಟ್ಟಿಂಗ್ ಮತ್ತು ತಂಡದ ಮಾಹಿತಿಯನ್ನು ಹೊರಗಿನವರಿಗೆ ನೀಡುತ್ತಿದ್ದುದು ಸಾಬೀತಾಗಿದೆ' ಎಂದಿದೆ.
ಜತೆಗೆ, ಮ್ಯಾಚ್ ಫಿಕ್ಸಿಂಗ್‌ನಲ್ಲಿ ಗುರುನಾಥ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕರಾದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಪಾತ್ರದ ಕುರಿತು ಇನ್ನಷ್ಟು ತನಿಖೆ ಅಗತ್ಯವಿದೆ ಎಂದಿದೆ.
ಐಪಿಎಲ್‌ನ ಏಳನೇ ಆವೃತ್ತಿಯ ಹರಾಜು ಪ್ರಕ್ರಿಯೆ ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಅಷ್ಟರಲ್ಲೇ ಮುದ್ಗಲ್ ಸಮಿತಿ ನ್ಯಾಯಾಲಯಕ್ಕೆ ವರದಿ ನೀಡಿರುವುದು ಸಿಎಸ್‌ಕೆ, ಅದರ ಆಟಗಾರರ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ಮೇಯಪ್ಪನ್ ಮುಖ ಬಹಿರಂಗಪಡಿಸಿದ್ದು ಹಸ್ಸಿ
ಚೆನ್ನೈ ಸೂಪರ್‌ಕಿಂಗ್ಸ್‌ನ ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಧ್ವನಿಯೆತ್ತಲು ಆ ತಂಡದ ಒಬ್ಬನೇ ಒಬ್ಬ ಆಟಗಾರ ಮುಂದೆ ಬಂದಿರಲಿಲ್ಲ. ಆದರೆ, ಆಸ್ಟ್ರೇಲಿಯಾದ ಆಟಗಾರ ಮೈಕ್ ಹಸ್ಸಿ ತಮ್ಮ ಕೃತಿ 'ಅಂಡರ್‌ನೀಥ್ ದಿ ಸದರ್ನ್ ಕ್ರಾಸ್‌'ನಲ್ಲಿ ಈ ಕುರಿತು ಕೆಲವು ವಿಚಾರ ಬಹಿರಂಗಪಡಿಸಿದ್ದರು. ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಅವರೇ ತಂಡವನ್ನು ನಡೆಸುತ್ತಿದ್ದರು ಎಂದು ಹಸ್ಸಿ ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.