ಪ್ರಧಾನ ಸುದ್ದಿ

ಕೇಂದ್ರಕ್ಕೆ ಮುಜುಗರ

ಕೇಂದ್ರಕ್ಕೆ ಮುಜುಗರ
Published On :

ನವದೆಹಲಿ: ಕೇಂದ್ರ ಸರ್ಕಾರಕ್ಕೆ ಮತ್ತೊಂದು ಮುಜುಗರ. ಲೋಕಪಾಲ ಸರ್ಚ್ ಕಮಿಟಿಯ ಸದಸ್ಯರಾಗಲು ನೀಡಿದ್ದ ಆಹ್ವಾನವನ್ನು ಹಿರಿಯ ವಕೀಲರಾದ ಫಾಲಿ ನಾರಿಮನ್ ತಿರಸ್ಕರಿಸಿದ ಬೆನ್ನಲ್ಲೇ ಈಗ ಸಮಿತಿಯ ಮುಖ್ಯಸ್ಥರಾಗಬೇಕಿದ್ದವರೇ ಅಲ್ಲಿಂದ ಹೊರಬಂದಿದ್ದಾರೆ. ಇದರಿಂದ ಸರ್ಕಾರ ತೀವ್ರ ಅವಮಾನಕ್ಕೀಡಾಗಿದೆ.
ಸಮಿತಿಯ ನೇತೃತ್ವ ವಹಿಸಲು ಒಪ್ಪಿದ್ದ ನ್ಯಾ. ಕೆ.ಟಿ. ಥಾಮಸ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಮನಮೋಹನ್‌ಸಿಂಗ್ ಕಾರ್ಯಾಲಯಕ್ಕೆ ಪತ್ರ ಬರೆದಿರುವ ಥಾಮಸ್, ಆಯ್ಕೆಯ ನಿಯಮಾವಳಿ ಓದಿದ ಮೇಲೆ ನನಗೆ ಇಲ್ಲಿ ಮುಂದುವರಿಯಲು ಮನಸ್ಸು ಬರಲಿಲ್ಲ ಎಂದಿದ್ದಾರೆ. ಹೀಗಾಗಿ ಈಗ ಲೋಕಪಾಲದ ಸದಸ್ಯರ ಹೆಸರನ್ನು ಸೂಚಿಸಬೇಕಿದ್ದ ಸರ್ಚ್ ಕಮಿಟಿಗೆ ನಾಯಕನೇ ಇಲ್ಲದಂತಾಗಿದೆ.
ಪ್ರಧಾನಿ ಕಾರ್ಯಾಲಯಕ್ಕೆ ಪತ್ರ: ಹಿರಿಯ ವಕೀಲರಾದ ನಾರಿಮನ್ ಅವರು ಸರ್ಕಾರದ ಆಹ್ವಾನ ತಿರಸ್ಕರಿಸಿದ ನಂತರ ನ್ಯಾ. ಥಾಮಸ್ ಅವರು ಸಮಿತಿಯ ನಿಯಮಾವಳಿ ಫ್ಯಾಕ್ಸ್ ಮಾಡುವಂತೆ ಪ್ರಧಾನಿ ಕಾರ್ಯಾಲಯವನ್ನು ಕೋರಿದ್ದರು.
ಅದನ್ನು ಓದಿದ ಬಳಿಕ ನ್ಯಾ. ಥಾಮಸ್ ಅವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ತಾವು ಸಮಿತಿಯ ನೇತೃತ್ವ ವಹಿಸುವ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವೇನು ಎಂಬುದನ್ನು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಆಫರ್ ತಿರಸ್ಕರಿಸಿದ್ದ ನಾರಿಮನ್: ಲೋಕಪಾಲಕ್ಕೆ ಸದಸ್ಯರನ್ನು ಆಯ್ಕೆ ಮಾಡುವ ಸರ್ಚ್ ಕಮಿಟಿಯ ಭಾಗವಾಗುವಂತೆ ಈ ಹಿಂದೆ ಸರ್ಕಾರ ಹಿರಿಯ ವಕೀಲರಾದ ಫಾಲಿ ನಾರಿಮನ್‌ರನ್ನು ಕೇಳಿಕೊಂಡಿತ್ತು. ಆದರೆ, ಕಳೆದ ವಾರವಷ್ಟೇ ಅವರು ಈ ಆಫರ್ ಅನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಲೋಕಪಾಲ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲೇ ದೋಷಗಳಿವೆ. ಲೋಕಪಾಲಕ್ಕೆ ಅರ್ಹ ಅಭ್ಯರ್ಥಿಗಳ ನೇಮಕವಾಗುತ್ತದೆ ಎಂಬ ವಿಶ್ವಾಸ ನನಗಿಲ್ಲ ಎಂದಿದ್ದರು. ಇದಾದ ಒಂದೇ ವಾರದಲ್ಲಿ ನ್ಯಾ. ಥಾಮಸ್ ಅವರೂ ಸಮಿತಿಯ ನೇತೃತ್ವ ವಹಿಸಲು ನಿರಾಕರಿಸಿರುವುದು ಸರ್ಕಾರವನ್ನು ಇಕ್ಕಟ್ಟಿನ ಸ್ಥಿತಿಗೆ ತಳ್ಳಿದೆ.
ಕಳೆದ ಡಿಸೆಂಬರ್‌ನಲ್ಲಿ ಲೋಕಪಾಲ ರಚನೆಯ ಕಾನೂನು ಸಂಸತ್‌ನಲ್ಲಿ ಅಂಗೀಕಾರವಾಗಿತ್ತು. ಲೋಕಪಾಲಕ್ಕೆ ಸದಸ್ಯರನ್ನು ಆಯ್ಕೆ ಮಾಡಲೆಂದು ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಅದರಲ್ಲಿ ಪ್ರಧಾನಿ ಸಿಂಗ್, ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಸೇರಿದಂತೆ 8 ಸದಸ್ಯರಿದ್ದಾರೆ.

ಕಮಿಟಿಗೇ ಅಪಸ್ವರ
ನಿಯಮಾವಳಿ ಓದಿದ್ದೇನೆ. ಕೇಂದ್ರ ಸರ್ಕಾರವು ಕಳುಹಿಸಿರುವ ಪಟ್ಟಿಯಲ್ಲಿರುವ ಹೆಸರುಗಳಲ್ಲೇ ಕೆಲವನ್ನು ಸರ್ಚ್ ಕಮಿಟಿ ಆಯ್ಕೆ ಮಾಡಬೇಕು. ನಮಗೆ (ಸರ್ಚ್ ಕಮಿಟಿ) ಸ್ವತಂತ್ರವಾಗಿ ಯಾರದೇ ಹೆಸರನ್ನು ಸೂಚಿಸುವ ಅಧಿಕಾರ ಇಲ್ಲ. ಅಷ್ಟೇ ಅಲ್ಲ, ಸರ್ಚ್ ಕಮಿಟಿಯು ಸಿದ್ಧಪಡಿಸಿದ ಪಟ್ಟಿಯನ್ನು ಆಯ್ಕೆ ಸಮಿತಿ ಪರಿಶೀಲಿಸುತ್ತದೆ. ನಾವು ಸೂಚಿಸಿರುವ ಹೆಸರುಗಳನ್ನು ಆಯ್ಕೆ ಸಮಿತಿ ಒಪ್ಪಲೇಬೇಕು ಎಂದೂ ಇಲ್ಲ. ಹೀಗಿರುವಾಗ ಆಯ್ಕೆ ಸಮಿತಿಯ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದ್ದಾರೆ ನ್ಯಾ. ಥಾಮಸ್. ಜತೆಗೆ, ಇಂತಹ ಸನ್ನಿವೇಶದಲ್ಲಿ ನಾನು ಕೇರಳದ ಕೊಟ್ಟಾಯಂನಿಂದ ದೆಹಲಿಯವರೆಗೆ ಪ್ರಯಾಣ ಬೆಳೆಸಬೇಕೇ? ಇದು ನನಗೆ ಸರಿ ಅನಿಸುತ್ತಿಲ್ಲ. ಹೀಗಾಗಿ ಸರ್ಚ್ ಕಮಿಟಿಯ ನೇತೃತ್ವ ವಹಿಸುವ ನಿರ್ಧಾರವನ್ನು ವಾಪಸ್ ಪಡೆಯುತ್ತಿದ್ದೇನೆ ಎಂದೂ ಹೇಳಿದ್ದಾರೆ ನ್ಯಾ. ಥಾಮಸ್.

ಲೋಕಪಾಲಕ್ಕೆ ಯಾರು ಸದಸ್ಯರಾಗಬೇಕು ಎಂಬುದನ್ನು ಆಯ್ಕೆ ಸಮಿತಿಯೇ ನಿರ್ಧರಿಸುವುದಾದರೆ ಸರ್ಚ್ ಕಮಿಟಿಯ ಅಗತ್ಯವೇನಿದೆ? ಈ ಕೆಲಸಕ್ಕಾಗಿ ನಾನು ಕೇರಳದಿಂದ ದೆಹಲಿಗೆ ಬರುವುದು ಉಪಯುಕ್ತ ಎಂದು ನನಗನಿಸುತ್ತಿಲ್ಲ. ಹಾಗಾಗಿ ಸಮಿತಿಯ ನೇತೃತ್ವ ವಹಿಸಲು ನಾನು ಒಪ್ಪುವುದಿಲ್ಲ.
-ನ್ಯಾ. ಕೆ.ಟಿ. ಥಾಮಸ್

ಅಧಿಕಾರದಲ್ಲಿರುವಾಗಲೇ ಲೋಕಪಾಲ ರಚಿಸಬೇಕು ಎನ್ನುವುದು ಕಾಂಗ್ರೆಸ್ ಇರಾದೆ. ಏಕೆಂದರೆ, ಆಗ ಕಾಂಗ್ರೆಸ್‌ನ ಎಲ್ಲ ಕೇಸುಗಳೂ ಲೋಕಪಾಲಕ್ಕೆ ಹೋಗುತ್ತವೆ. ಕೇಸುಗಳು ಲೋಕಪಾಲಕ್ಕೆ ಹೋದರೆ ತಾವು ನಿರಾಳವಾಗಬಹುದು ಎನ್ನುವುದು ಕಾಂಗ್ರೆಸ್‌ನವರ ಯೋಚನೆ.
-ಪ್ರಕಾಶ್ ಜಾವಡೇಕರ್, ಬಿಜೆಪಿ ವಕ್ತಾರ

ಲೋಕಪಾಲ ಸರ್ಚ್ ಕಮಿಟಿಯಿಂದ ಪ್ರಮುಖರು ಏಕೆ ಹೊರಹೋಗುತ್ತಿದ್ದಾರೆ? ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರವೇ ಸರ್ಚ್ ಕಮಿಟಿಯ ಅಧಿಕಾರಕ್ಕೆ ಕತ್ತರಿ ಹಾಕಿದೆ.
-ಅರುಣ್ ಜೇಟ್ಲಿ, ಬಿಜೆಪಿ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.