ಪ್ರಧಾನ ಸುದ್ದಿ

ಭಾವುಕರಾದ ಗುರು ಶಿಷ್ಯರು

ಭಾವುಕರಾದ ಗುರು ಶಿಷ್ಯರು
Published On :

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಸೆಂಟ್ರಲ್ ಹಾಲ್‌ನಲ್ಲಿ ಮಂಗಳವಾರ ಗುರು- ಶಿಷ್ಯರಿಬ್ಬರೂ ತೀವ್ರ ಭಾವುಕರಾಗಿದ್ದರು.
ಅವರ ನಡುವೆ ಎದ್ದಿದ್ದ ಭಿನ್ನಾಭಿಪ್ರಾಯದ ಗೋಡೆ ಉರುಳಿಬಿದ್ದಿತ್ತು. ಅಸಮಾಧಾನ ಅಲೆಗಳು ತಣ್ಣಗಾಗಿದ್ದವು. ಶೀತಲ ಸಮರ ಕೊನೆಗೊಂಡ ಅವಿಸ್ಮರಣೀಯ ಕ್ಷಣ ಅದು. ಹಳೆಯ ಆಪ್ತತೆಯಲ್ಲಿ ಇಬ್ಬರೂ ಮಿಂದೆದ್ದ ಕ್ಷಣ.
ಅಡ್ವಾಣಿ- ಮೋದಿ ನಡುವೆ ಎಲ್ಲವೂ ಸರಿಯಿರಲಿಲ್ಲ. ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದಾಗ, ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದಾಗ ಅಡ್ವಾಣಿ ಪ್ರಬಲವಾಗಿ ವಿರೋಧಿಸಿದ್ದರು. ಅದಾದ ನಂತರ ಅವರ ನಡುವೆ ಮಾನವ ಸಹಜ ದ್ವೇಷಾಸೂಯೆ ಅಲ್ಲದಿದ್ದರೂ ಅತೃಪ್ತಿ- ಅಸಮಾಧಾನಗಳು ಭುಗಿಲೆದ್ದಿದ್ದವು.
ಆದರೆ, ಚುನಾವಣೆಯಲ್ಲಿ ಭರ್ಜರಿ ಜಯ ತಂದುಕೊಟ್ಟ ಮೋದಿ ಬಗ್ಗೆ ಅಡ್ವಾಣಿ ಅವರಿಗೆ  ಅಭಿಮಾನ ಇಮ್ಮಡಿಸಿತ್ತು.
ಸಂಸದೀಯ ಪಕ್ಷದ ಸಭೆಗೆ ಆಗಮಿಸಿದ ನರೇಂದ್ರಮೋದಿ ಅವರು ಅಡ್ವಾಣಿ ಅವರಿಗೆ ಶಿರಭಾಗಿ ವಂದಿಸಿ ಕಾಲುಮುಟ್ಟಿ ನಮಸ್ಕರಿಸಿದರು. ಇದರಿಂದ ತೀವ್ರ ಭಾವುಕರಾದ ಅಡ್ವಾಣಿ ಮೋದಿ ಅವರನ್ನು ಆಲಂಗಿಸಿ ಮೈದಡವಿ ಆಶೀರ್ವದಿಸಿದರು. ಆಗಲೇ ಅವರ ಕಣ್ಣಲ್ಲಿ ನೀರು ಚಿಮ್ಮಿತ್ತು.
ಅಡ್ವಾಣಿ ಅವರು ಮಾತನಾಡುವಾಗ ತಾವು ಭಾವುಕರಾದುದಕ್ಕೆ ಕಾರಣ ಹೇಳಿದರು. ದೇಶಕ್ಕೆ  ಸ್ವಾತಂತ್ರ್ಯ ಸಿಕ್ಕಾಗ ನಾನು ಭಾವುಕನಾಗಿ ಅತ್ತಿದ್ದೆ. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಕೊನೆಗೊಂಡಾಗ ನಾನು ಅತ್ತಿದ್ದೆ. ಆ ಸಂತೋಷಗಳಿಗೆ ಕಾರಣ ಇತ್ತು. ಇವತ್ತು ನರೇಂದ್ರ ಮೋದಿ ನನಗೆ ವಂದಿಸಿದಾಗಲೂ ನನ್ನ ಕಣ್ಣಾಲಿಗಳು ತುಂಬಿ ಬಂದವು. ಇದು ಅತ್ಯಂತ ಸಂತೋಷದಾಯಕ ಮತ್ತು ಐತಿಹಾಸಿಕ ಕ್ಷಣ. ಭಾವುಕನಾಗಿದ್ದೇನೆ  ಎಂದರು.
ಈ ಹಂತದಲ್ಲಿ ಭಾವುಕರಾಗಿ, ನರೇಂದ್ರಮೋದಿ ಅವರ ಕೃಪೆಯಿಂದಾಗಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ನಾವೆಲ್ಲರೂ ಇಲ್ಲಿ ಸೇರಲು ನರೇಂದ್ರ ಮೋದಿ ಅವರೇ ಕಾರಣ ಎಂದರು. ಮೋದಿ ಅವರು ಮಾತನಾಡುವಾಗ ಅಡ್ವಾಣಿ ಅವರ ಈ ಮಾತುಗಳನ್ನು ಪ್ರಸ್ತಾಪಿಸಿ ಭಾವುಕರಾದರು.
ಅಡ್ವಾಣಿ ಅವರು ಮೋದಿ ಕೃಪೆ ಎನ್ನುತ್ತಿದ್ದಾರೆ ಎಂದು ಗದ್ಗದಿತರಾದರು. ಕೆಲ ಕ್ಷಣ ಸುಧಾರಿಸಿಕೊಂಡು, ತಾಯಿಯ ಸೇವೆ ಮಾಡುವುದು ಕೃಪೆ ಆಗುತ್ತದೆಯೇ ಸಾಧ್ಯವೇ ಇಲ್ಲ. ಭಾರತ ದೇಶ ಹೇಗೆ ನನ್ನ ತಾಯಿಯೋ ಹಾಗೆಯೇ ಭಾಜಪವೂ ನನ್ನ ತಾಯಿಯೇ. ಮಗನ ಕೃಪೆ ತಾಯಿಯ ಮೇಲಿರುವುದಿಲ್ಲ, ತಾಯಿ ಕೃಪೆ ಮಗನ ಮೇಲಿರುತ್ತದೆ ಎಂದರು. ಗದ್ಗದಿತ ಭಾವದಲ್ಲಿ ಅವರ ಮಾತುಗಳು ಮುಂದುವರೆದಿದ್ದವು.

ರಾಷ್ಟ್ರಪತಿ ಭೇಟಿ ಮಾಡಿ ಹೊರ

ಬಂದಿದ್ದೇನೆ. ಸರ್ಕಾರ ರಚಿಸಲು ರಾಷ್ಟ್ರಪತಿಗಳು ನನಗೆ ಔಪಚಾರಿಕವಾಗಿ ಆಹ್ವಾನ ನೀಡಿದ್ದಾರೆ.  ಮೇ 26 ರಂದು ಸಂಜೆ 6ಕ್ಕೆ ಪ್ರಮಾಣ ವಚನ ಸ್ವೀಕರಿಸುತ್ತೇನೆ.
-ನರೇಂದ್ರ ಮೋದಿ, ನಿಯೋಜಿತ ಪ್ರಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.