ಸಮಿತಿ ಬರ್ಕಾಸ್ತು

ಯುಪಿಎನ ಸಚಿವರ ಸಮಿತಿಗಳ ರದ್ದು ಮೋದಿ ಸರ್ಕಾರದ ಮಹತ್ವದ ನಿರ್ಧಾರ
ಯುಪಿಎ ಸರ್ಕಾರದ ಅವಧಿಯಲ್ಲಿದ್ದ 30 ಸಮಿತಿಗಳು
ನವದೆಹಲಿ: ಆಡಳಿತಕ್ಕೆ ಕಾಯಕಲ್ಪ ನೀಡುವ ಪ್ರಯತ್ನಗಳನ್ನು ಶನಿವಾರವೂ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಸರ್ಕಾರದ 'ಜೀವನಾಡಿ'ಯಾಗಿದ್ದ ಸಚಿವರ ಸಮಿತಿ ಮತ್ತು ಉನ್ನತಾಧಿಕಾರ ಸಚಿವರ ಸಮಿತಿಗಳನ್ನು ರದ್ದುಪಡಿಸಿದ್ದಾರೆ. ಅಲ್ಲಿಗೆ ಹಿಂದಿನ ಸರ್ಕಾರದ ಪಳೆಯುಳಿಕೆಬಹುತೇಕ ಮರೆಯಾದಂತಾಗಿದೆ.
ಯುಪಿಎ ಸರ್ಕಾರದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿ 21 ಸಚಿವರ ಸಮಿತಿ ಮತ್ತು 9 ಉನ್ನತಾಧಿಕಾರ ಸಚಿವರ ಸಮಿತಿಗಳಿದ್ದವು. ಸಚಿವ ಸಂಪುಟಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಿತಿಗಳು, ತಮ್ಮ ಶಿಫಾರಸುಗಳಿಗೆ ಸಂಪುಟದಿಂದ ಅಂತಿಮ ಅನುಮೋದನೆ ಪಡೆದುಕೊಳ್ಳುತ್ತಿದ್ದವು. ಬಹುತೇಕ ಸಮಿತಿಗಳಿಗೆ ರಕ್ಷಣಾ ಖಾತೆ ಮಾಜಿ ಸಚಿವ ಎ.ಕೆ.ಆ್ಯಂಟನಿ ಅಧ್ಯಕ್ಷರಾಗಿದ್ದರು. '
ಸ್ವತಂತ್ರ ನಿರ್ಧಾರ: 'ಆಡಳಿತಕ್ಕೆ ಚುರುಕು ನೀಡಿ ವ್ಯವಸ್ಥೆಯಲ್ಲಿ ಇನ್ನಷ್ಟು ಹೊಣೆಗಾರಿಕೆ ತರುವ ಉದ್ದೇಶದಿಂದ ಈ ಸಮಿತಿಗಳನ್ನು ರದ್ದುಗೊಳಿಸಲಾಗಿದೆ. ಸಮಿತಿಗಳ ಮುಂದಿದ್ದ ವಿಚಾರಗಳಿಗೆ ಸಂಬಂಧಿಸಿ ಆಯಾ ಸಚಿವಾಲಯ ಅಥವಾ ಇಲಾಖೆಗಳು ಮುಂದುವರಿಯಬಹುದು ಮತ್ತು ಇನ್ನು ಮುಂದೆ ತಮ್ಮ ಮಟ್ಟದಲ್ಲಿಯೇ ತೀರ್ಮಾನಗಳನ್ನು ಕೈಗೊಳ್ಳಬಹುದು' ಎಂದು ಪಿಎಂಒ ತಿಳಿಸಿದೆ.
ಯಾವುದಾದರೂ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಕಷ್ಟ ಅನ್ನಿಸಿದರೆ ಸಂಪುಟ ಕಾರ್ಯದರ್ಶಿ ಅಥವಾ ಪಿಎಂಒ ನೆರವು ಪಡೆದುಕೊಳ್ಳಬಹುದು. ತ್ವರಿತ ನಿರ್ಧಾರಗಳ ಮೂಲಕ ಆಡಳಿತಕ್ಕೆ ಚುರುಕು ನೀಡುವುದು ಮತ್ತು ಸಚಿವಾಲಯ, ಇಲಾಖೆಗಳ ಸಬಲೀಕರಣದ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಆಡಳಿತ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಸಲಹೆ ನೀಡಲು ಮೋದಿಗೆ ಸಮಿತಿ
ಪ್ರಮುಖ ವಿಚಾರಗಳಲ್ಲಿ ಸಲಹೆ ನೀಡಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ವಿದೇಶಾಂಗ ವ್ಯವಹಾರ, ಆಂತರಿಕ ಭದ್ರತೆ, ಹಣಕಾಸು, ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ, ಐಟಿ, ಕೃಷಿ, ಮೂಲಸೌಕರ್ಯ, ಇಂಧನ, ನೀರು, ಆರೋಗ್ಯ ಇವು ಮೋದಿ ಆದ್ಯತಾ ವಿಷಯಗಳಾಗಿವೆ. ಮೂಲಗಳ ಪ್ರಕಾರ, ಸಮಿತಿ 10 ಸದಸ್ಯರನ್ನು ಒಳಗೊಳ್ಳಲಿದೆ. ಅವರಲ್ಲಿ ತಂತ್ರಜ್ಞರು, ಅಧಿಕಾರಿಗಳು, ವೃತ್ತಿಪರರು ಮತ್ತು ಮಾಜಿ ರಾಜಕಾರಣಿಗಳೂ ಸೇರಿದ್ದಾರೆ. ಮಾಜಿ ಸಚಿವ ಅರುಣ್ ಶೌರಿ, ದೆಹಲಿ ಮೆಟ್ರೊ ಮಾಜಿ ಮುಖ್ಯಸ್ಥ ಇ.ಶ್ರೀಧರನ್ ಹೆಸರುಗಳು ಕೇಳಿಬರುತ್ತಿವೆ.
ವಿಧಾನಸಭೆ ಚುನಾವಣೆಗೆ ಗಮನ ಕೊಡಿ
ಆಡಳಿತ ಸುಧಾರಣೆಯ ಜತೆಯಲ್ಲೇ ಪಕ್ಷದ ಬಲವರ್ಧನೆಯತ್ತಲೂ ಗಮನ ಹರಿಸಿದ್ದಾರೆ ಮೋದಿ. ಶನಿವಾರ ಬೆಳಗ್ಗೆ ಬಿಜೆಪಿ ಅಧ್ಯಕ್ಷರು ಮತ್ತು ಹತ್ತು ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಉಪಾಹಾರ ಸೇವಿಸಿದ ಮೋದಿ, 'ಲೋಕಸಭೆಯ ಗೆಲವಿನಿಂದ ಮೈಮರೆಯದೇ ಈಗಿನಿಂದಲೇ ವಿಧಾನಸಭೆ ಚುನಾವಣೆಗಳತ್ತ ಗಮನ ಕೊಡಿ' ಎಂದು ಕಿವಿಮಾತು ಹೇಳಿದರು. ಪ್ರಮುಖ ಪದಾಧಿಕಾರಿಗಳು ಸರ್ಕಾರ ಸೇರಿರುವ ಹಿನ್ನೆಲೆಯಲ್ಲಿ ಶೀಘ್ರ ಪಕ್ಷದ ಪುನಾರಚನೆ ಸುಳಿವನ್ನೂ ಮೋದಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


