

ಕೊಲ್ಕತ್ತಾ: ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರಿಗೆ ಕೊಲ್ಕತ್ತಾದಲ್ಲಿ ರ್ಯಾಲಿ ನಡೆಸಲು ಕೊಲ್ಕತ್ತಾ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದ ಬೆನ್ನಲ್ಲೇ ಅಲ್ಲಿನ ನಗರ ಮುನ್ಸಿಪಲ್ ಕಾರ್ಪರೇಷನ್ ಮತ್ತು ಅಗ್ನಿಶಾಮಕ ದಳ ರ್ಯಾಲಿ ನಡೆಸುವಂತೆ ಹಸಿರು ನಿಶಾನೆ ತೋರಿಸಿವೆ.
ನಾಳೆ ನಡೆಸಲುದ್ದೇಶಿಸಿರುವ ಅಮಿತ್ ಶಾ ಅವರ ರ್ಯಾಲಿಗೆ ಕೊಲ್ಕತ್ತಾ ಮುನ್ಸಿಪಲ್ ಕಾರ್ಪರೇಷನ್ (ಕೆಎಂಸಿ) ಅನುಮತಿ ನೀಡಿದೆ ಎಂದು ಮೇಯರ್ ಇನ್ ಕೌನ್ಸಿಲ್ ದಬಶೀಶ್ ಕುಮಾರ್ ಹೇಳಿದ್ದಾರೆ.
ಅದೇ ವೇಳೆ ಕೊಲ್ಕತ್ತಾದ ಹೃದಯಭಾಗದಲ್ಲೇ ರ್ಯಾಲಿ ನಡೆಸಲು ಕೆಎಂಸಿ ಮತ್ತು ಅಗ್ನಿ ಶಾಮಕ ದಳ ನಿರಾಕ್ಷೇಪಣ ಪತ್ರವನ್ನು ನೀಡಿದೆ ಎಂದು ರಾಜ್ಯ ಬಿಜೆಪಿ (ಕಚೇರಿ) ಕಾರ್ಯದರ್ಶಿ ಅಲೋಕ್ ಗುಹಾ ರಾಯ್ ತಿಳಿಸಿದ್ದಾರೆ.
ಈ ಹಿಂದೆ ಅಮಿತ್ ಶಾ ರ್ಯಾಲಿ ನಡೆಸುವುದಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ತಕರಾರು ಒಡ್ಡಿತ್ತು. ಇದೀಗ ರ್ಯಾಲಿಗೆ ಅನುಮತಿ ಲಭಿಸಿರುವುದು ಬಿಜೆಪಿಗೆ ಸಂದ ನೈತಿಕ ವಿಜಯ ಎಂದು ರಾಜ್ಯ ಬಿಜೆಪಿ ವಕ್ತಾರ ರಿತೇಶ್ ತಿವಾರಿ ಹೇಳಿದ್ದಾರೆ.