ಸಾರಿಗೆ ಮುಷ್ಕರ: ರಸ್ತೆಗಿಳಿಯದ ಸರ್ಕಾರಿ ಬಸ್, ಪ್ರಯಾಣಿಕರ ಪರದಾಟ

ಕೇಂದ್ರ ಸರ್ಕಾರದ ನೂತನ ರಸ್ತೆ ಸಾರಿಗೆ ಮತ್ತು ಸುರಕ್ಷ ಮಸೂದೆ 2015 ವಿರೋಧಿಸಿ ದೇಶಾದ್ಯಂತ ಸಾರಿಗೆ ನಿಗಮಗಳು ಮುಷ್ಕರ ನಡೆಸುತ್ತಿದ್ದು... ಕೆಎಸ್ಆರ್‌ಟಿಸಿ
ಮೆಜೆಸ್ಟಿಕ್ ಬಸ್ ನಿಲ್ದಾಣ
ಮೆಜೆಸ್ಟಿಕ್ ಬಸ್ ನಿಲ್ದಾಣ
Updated on: 

ಬೆಂಗಳೂರು: ಕೇಂದ್ರ ಸರ್ಕಾರದ ನೂತನ ರಸ್ತೆ ಸಾರಿಗೆ ಮತ್ತು ಸುರಕ್ಷ ಮಸೂದೆ 2015 ವಿರೋಧಿಸಿ ದೇಶಾದ್ಯಂತ ಸಾರಿಗೆ ನಿಗಮಗಳು ಮುಷ್ಕರ ನಡೆಸುತ್ತಿದ್ದು, ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬಂದ್ ಇದ್ದರೂ ಕೆಲವೊಂದು ಸರ್ಕಾರಿ ಬಸ್ ಗಳು ಸಂಚರಿಸುತ್ತಿದ್ದು, ಬಂದ್ ಗೆ ಮಿಶ್ರ ಪ್ರಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ನಗರ ಸಾರಿಗೆ ಬಸ್ ಸಂಚಾರ ವಿರಳವಾಗಿದೆ. ಕೆಲವೊಂದು ಮಾರ್ಗಗಳನ್ನು ಹೊರತು ಪಡಿಸಿದರೆ. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸುಗಮ ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಮುಖ ಬಸ್ ನಿಲ್ದಾಣಗಳಾದ ಮೆಜೆಸ್ಟಿಕ್, ಮಾರುಕಟ್ಟೆ, ಶಿವಾಜಿನಗರ, ಶಾಂತಿನಗರ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಕೆಲವೊಂದು ಬಸ್ ಗಳು ಮಾತ್ರ ಸಂಚರಿಸುತ್ತಿವೆ. ಕೆಎಸ್ಆರ್‌ಟಿಸಿ ಡಿಪೋ ಆದ ಶಾಂತಿನಗರದಲ್ಲಿ ಹೊರ ರಾಜ್ಯಗಳಿಗೆ ತೆರಬೇಕಿದ್ದ ಬಸ್ ಗಳು ಡಿಪೋನಲ್ಲೇ ನಿಂತಿವೆ. ಪ್ರಮುಖವಾಗಿ ಹೊಲ್ವಾ ಬಸ್ ಗಳ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.

ಕೇಂದ್ರದ ಉದ್ದೇಶಿತ ನಿಯಮದಿಂದ ಸರ್ಕಾರಿ ಸಾರಿಗೆ ಇಲಾಖೆಗಳಿಗೆ ಹಾಗೂ ಕಾರ್ಮಿಕ ವರ್ಗಕ್ಕೆ ಕುಣಿಕೆ ಬೀಳಲಿದೆ ಎಂಬ ಕಾರಣಕ್ಕೆ ನೂತನ ಮಸೂದೆಗೆ ದೇಶವ್ಯಾಪ್ತಿ ವಿರೋಧ ವ್ಯಕ್ತವಾಗಿದೆ.

ದೇಶಾದ್ಯಂತ ಸುಮಾರು 54 ಸಾರಿಗೆ ನಿಗಮಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ರಾಜ್ಯ ಸಾರಿಗೆ ನಿಗಮಗಳಾದ ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯವ್ಯ ವಿಭಾಗ ಸೇರಿದಂತೆ ರಾಜ್ಯದ 4 ನಿಗಮಗಳ ಬಸ್‍ಗಳ ಸಂಚಾರ ಇರುವುದಿಲ್ಲ.

ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್, ಎಐಟಿಯುಸಿ ಬಂದ್‍ಗೆ ಕರೆ ನೀಡಿದ್ದು, ಆಟೋ ಸಂಘಟನೆಗಳು ಸಹ ಮುಷ್ಕರಕ್ಕೆ ಸಹಕಾರ ನೀಡಲಿವೆ. ಆದರೆ, ಕ್ಯಾಬ್‍ಗಳು ಎಂದಿನಂತೆ ಸಂಚರಿಸಲಿವೆ. ತಾವು ನೈತಿಕ ಬೆಂಬಲ ಸೂಚಿಸುವುದಾಗಿ ಪ್ರವಾಸಿ ವಾಹನ ಮಾಲೀಕರ ಸಂಘ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com