

ಬೆಂಗಳೂರು: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧನೆಯ ಹಿನ್ನಲೆಯಲ್ಲಿ ಎಎಪಿ ಪಕ್ಷದ ಬೆಂಗಳೂರು ಘಟಕ ಸದ್ಯದಲ್ಲೇ ಬರಲಿರುವ ಬಿಬಿಎಂಪಿ ಚುನಾವಣೆಯನ್ನು ಸ್ಪರ್ಧಿಸಲು ಚಿಂತಿಸುತ್ತಿದೆ.
ಅರವಿಂದ್ ಕೇಜ್ರಿವಾಲ್ ರೀತಿ ಹೆಚ್ಚೆಚ್ಚು ಜನರನ್ನು ಸೆಳೆಯಬಲ್ಲ ಯಾವುದೇ ನಾಯಕರು ಕರ್ನಾಟಕದಲ್ಲಿ ಇಲ್ಲದೆ ಹೋದರು "ಬೊಂಬಾಟ್ ಬೆಂಗಳೂರು" ಘೋಷಣೆಯ ಮೂಲಕ ಬೆಂಗಳೂರು ನಿವಾಸಿಗಳನ್ನು ಸೆಳೆಯಲು ಆಪ್ ಪಕ್ಷ ಪ್ರಯತ್ನಿಸುತ್ತಿದೆ.
ಸದ್ಯದ ಬಿಬಿಎಂಪಿ ಮಂಡಳಿಯ ಸಮಯ ಏಪ್ರಿಲ್ ನಲ್ಲಿ ಕೊನೆಗೊಳ್ಳಲಿದ್ದು ಚುನಾವಣೆಯ ದಿನಾಂಕಗಳು ಯಾವುದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
"ದೆಹಲಿಯಲ್ಲಿ ಜನ ಸಾಂಪ್ರದಾಯಿಕ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಬೆಂಗಳೂರಿನಲ್ಲಿ ನಾವು ದೆಹಲಿಯ ತಂತ್ರಗಾರಿಕೆಯನ್ನೇ ಅನುಸರಿಸಲು ಸಾಧ್ಯವಿಲ್ಲ. ಇಲ್ಲಿನ ಜನರ ತೊಂದರೆಗಳನ್ನು ನಿವಾರಿಸಲು ನಾವು ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಅವಶ್ಯಕತೆ ಇದೆ" ಎನ್ನುತ್ತಾರೆ ಎಎಪಿ ರಾಜ್ಯ ವಕ್ತಾರ ಪೃಥ್ವಿ ರೆಡ್ಡಿ.
ಬಿಬಿಎಂಪಿ ಚುನಾವಣೆಗಳು ಸದ್ಯದಲ್ಲೇ ನಡೆದರೆ ಎಎಪಿ ಪಕ್ಷ ಕೂಡ ಸ್ಪರ್ಧಿಸಬಹುದು, ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಸೂಚನೆಯಿದ್ದು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಚುನಾವಣೆಗಳನ್ನು ಇನ್ನು ಕೆಲವು ತಿಂಗಳು ಮುಂದೂಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.