

ವಾಷಿಂಗ್ಟನ್: ಪರಮಾಣು ಪೂರೈಕೆದಾರರ ಒಕ್ಕೂಟಕ್ಕೆ ಭಾರತವನ್ನು ಸೇರ್ಪಡೆಗೊಳಿಸುವ ಅಮೆರಿಕದ ಸತತ ಪ್ರಯತ್ನದ ಹೊರತಾಗಿಯೂ ಚೀನಾ ವಿರೋಧದ ಬೆನ್ನಲ್ಲೇ ವಿವಿಧ ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿವೆ.
ಸಿಯೋಲ್ ಅಧಿವೇಶನದಲ್ಲಿ ಭಾರತ ಎನ್ಎಸ್ಜಿ ಸೇರ್ಪಡೆ ವಿಚಾರ ಪ್ರಮುಖವಾಗಿರುವುದಿಲ್ಲ ಎಂದು ಹೇಳುವ ಮೂಲಕ ಭಾರತದ ಎನ್ ಎಸ್ ಜಿ ಸೇರ್ಪಡೆ ತಾನು ವಿರೋಧಿಸುತ್ತೇನೆ ಎಂದು ಚೀನಾ ನೇರವಾಗಿ ಹೇಳಿದೆ. ಆದರೆ ಭಾರತವನ್ನು ಎನ್ ಎಸ್ ಜಿ ಒಕ್ಕೂಟಕ್ಕೆ ಸೇರಿಸಲು ಸತತ ಪ್ರಯತ್ನ ಮಾಡುತ್ತಿರುವ ಅಮೆರಿಕ ತನ್ನ ಪ್ರಯತ್ನವನ್ನು ಮುಂದುವರೆಸಿದ್ದು, ಬ್ರಿಟನ್, ಇಟಲಿ, ಮೆಕ್ಸಿಕೋ, ಸ್ವಿಟ್ಜರ್ಲೆಂಡ್, ರಷ್ಯಾ ದೇಶಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದೆ. ಇದರ ಪರಿಣಾಮವೋ ಏನೋ ಎಂಬಂತೆ ಈ ದೇಶಗಳು ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದು, ಸಿಯೋಲ್ ಅಧಿವೇಶನದ ವೇಳೆ ಭಾರತ ಪರವಾಗಿ ನಿಲ್ಲುವ ಭರವಸೆ ನೀಡಿವೆ ಎಂದು ಅಮೆರಿಕ ವಿದೇಶಾಂಗ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಾನ್ ಕಿರ್ಬಿ ಅವರು, ಭಾರತ ಎನ್ಎಸ್ಜಿ ಸೇರ್ಪಡೆಗೆ ಈ ವಾರದಲ್ಲಿ ನಡೆಯಲಿರುವ ಸಿಯೋಲ್ ಅಧಿವೇಶನಕ್ಕೆ ಅಮೆರಿಕ ಸೇರಿದಂತೆ ಬ್ರಿಟನ್, ಇಟಲಿ, ಮೆಕ್ಸಿಕೋ, ಸ್ವಿಟ್ಜರ್ಲೆಂಡ್, ರಷ್ಯಾ ದೇಶಗಳು ಸಹಮತ ಸೂಚಿಸುವ ಮುನ್ಸೂಚನೆ ನೀಡಿದ್ದರೆ, ಚೀನಾ ವಿರೋಧ ವ್ಯಕ್ತಪಡಿಸುತ್ತಿದೆಯಾದರೂ ಅದೂ ಕೂಡ ಸಹಮತ ವ್ಯಕ್ತಪಡಿಸುತ್ತದೆಸ ಎನ್ನುವ ವಿಶ್ವಾಸವಿದೆ ಎಂದು ಕಿರ್ಬಿ ಹೇಳಿದ್ದಾರೆ. "ಅಮೆರಿಕ ಈವರೆಗೂ ಭಾರತದ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾದೊಂದಿಗೆ ಮಾತುಕತೆ ನಡೆಸಿಲ್ಲ, ಆದರೆ ಇನ್ನುಳಿದ ಸದಸ್ಯ ರಾಷ್ಟ್ರಗಳೊಡನೆ ಸಂಪರ್ಕ ಹೊಂದಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿರುವ ಬೇರೆ ರಾಷ್ಟ್ರಗಳಂತೆ ಚೀನಾ ಕೂಡ ಭಾರತದ ಸೇರ್ಪಡೆಗೆ ಸಹಿ ಹಾಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಪರಮಾಣು ಪೂರೈಕೆದಾರರ ಒಕ್ಕೂಟ (ಎನ್ ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ದಶಕಗಳ ಕನಸಿದೆ ಚೀನಾ ದೇಶ ಅಡ್ಡಗಾಲು ಹಾಕಿದ್ದು, ಸಿಯೋಲ್ ಅಧಿವೇಶನಕ್ಕೂ ಮೊದಲು ಭಾರತದ ಅಣು ಶಕ್ತಿ ಬೇಡಿಕೆಗಳ ಅನ್ವಯ ಗುಂಪಿಗೆ ಸೇರಿಸುವಂತೆ ಸಲ್ಲಿಸಿದ್ದ ಅರ್ಜಿಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಬದಲಿಗೆ ಪಾಕಿಸ್ತಾನವನ್ನು ಎನ್ಎಸ್ಜಿ ಸೇರ್ಪಡೆಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಈ ವಾರ ಬೀಜಿಂಗ್ನಲ್ಲಿ ನಡೆಯಲಿರುವ ಸಿಯೋಲ್ ಅಧಿವೇಶನದಲ್ಲಿ ಭಾಗವಹಿಸಲಿರುವ ಎನ್ಎಸ್ಜಿ ಸದಸ್ಯ ರಾಷ್ಟ್ರಗಳು ಈ ಬಗ್ಗೆ ಚರ್ಚೆ ನಡೆಸಲಿದ್ದು, ಈ ವೇಳೆ ಭಾರತದ ಎನ್ ಎಸ್ ಜಿ ಸೇರ್ಪಡೆ ಕುರಿತಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಮೊನ್ನೆಯಷ್ಟೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚೀನಾ ಭಾರತದ ವಿರೋಧಿಯಲ್ಲ ಎಂಬ ಹೇಳಿಕೆ ನೀಡಿದ್ದರು. ಆದರೆ ಇತ್ತೀಚೆಗೆ ಚೀನಾ ನೀಡಿದ್ದ "ಸಿಯೋಲ್ ಅಧಿವೇಶನ ಭಾರತ ಎನ್ಎಸ್ಜಿ ಸೇರ್ಪಡೆ ಕುರಿತು ನಡೆಯುತ್ತಿರುವ ಭೇಟಿ ಅಥವಾ ಸಭೆಯಲ್ಲ" ಎಂಬ ಹೇಳಿಕೆ ಭಾರತದ ಕನಸಿಗೆ ತಣ್ಣೀರೆರಚುವ ಪ್ರಯತ್ನವೇನೋ ಎಂಬ ಆತಂಕ ಕೂಡ ಕಾಡತೊಡಗಿದೆ.