

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿರುವ ಬೆನ್ನಲ್ಲೇ, ಚಾಮ್ಲಿಯಾಲ್ ಕಣಿವೆಯಲ್ಲಿ ಅಡಗಿ ಕುಳಿತಿದ್ದ ಉಗ್ರರ ಮೇಲೆ ಮುಗಿಬಿದ್ದಿರುವ ಭಾರತೀಯ ಸೇನೆ ನಾಲ್ಕು ಮಂದಿ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದೆ.
ಸಾಂಬಾ ಜಿಲ್ಲೆಯ ಚಾಮ್ಲಿಯಾಲ್ ನಲ್ಲಿರುವ ಟ್ಯೂಬ್ ವೆಲ್ ಪಂಪ್ ಹೌಸ್ ನಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತು ಖಚಿತ ಮಾಹಿತಿ ಪಡೆದ ಬಿಎಸ್ ಎಫ್ ಯೋಧರು ದಿಢೀರ್ ದಾಳಿ ಮಾಡಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದರು. ಬಳಿಕ ನಡೆದ ಪ್ರತಿದಾಳಿಯಲ್ಲಿ ಯೋಧರು ನಾಲ್ಕು ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ಮುಂದುವರೆದಿದ್ದು, ಅಡಗಿ ಕುಳಿತು ದಾಳಿ ಮಾಡುತ್ತಿರುವ ಉಗ್ರರನ್ನು ಸುತ್ತುವರೆದಿರುವ ಸೇನೆ ನಿರಂತರ ಗುಂಡಿನ ದಾಳಿ ನಡೆಸುತ್ತಿದೆ.
ನಗ್ರೋಟಾ ಆತ್ಮಹತ್ಯಾ ದಾಳಿ; 3ಕ್ಕೇರಿದ ಹುತಾತ್ಮ ಯೋಧರ ಸಂಖ್ಯೆ
ಇದೇ ವೇಳೆ ನಗ್ರೋಟಾ ಸೇನಾ ಕ್ಯಾಂಪ್ ಮೇಲೆ ನಡೆದ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ಸಾವಿಗೀಡಾದ ಸೈನಿಕರ ಸಂಖ್ಯೆ 3ಕ್ಕೇರಿದೆ ಎಂದು ಸೇನಾಮೂಲಗಳ ತಿಳಿಸಿವೆ. ನಗ್ರೋಟಾ ಸೇನಾ ಕ್ಯಾಂಪ್ ಬಳಿ 4 ಮಂದಿ ಶಸ್ತ್ರಸಜ್ಜಿತ ಉಗ್ರರು, ಅಡಗಿ ಕುಳಿತಿದ್ದು, ಸೈನಿಕರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.