ರಾಷ್ಟ್ರಪತಿ ಚುನಾವಣೆ ಬಳಿಕವಷ್ಟೇ ಸಂಸದರ ಸ್ಥಾನಕ್ಕೆ ಪರಿಕ್ಕರ್, ಯೋಗಿ ರಾಜಿನಾಮೆ!

ಸಂಸದರಾಗಿದ್ದುಕೊಂಡೇ ಸಿಎಂ ಗಾದಿಗೇರಿರುವ ಯೋಗಿ ಆದಿತ್ಯಾನಾಥ್ ಹಾಗೂ ಮನೋಹರ್ ಪರಿಕ್ಕರ್ ಅವರು ರಾಷ್ಟ್ರಪತಿ ಚುನಾವಣೆ ಬಳಿಕವಷ್ಟೇ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಸಂಸದರಾಗಿದ್ದುಕೊಂಡೇ ಸಿಎಂ ಗಾದಿಗೇರಿರುವ ಯೋಗಿ ಆದಿತ್ಯಾನಾಥ್ ಹಾಗೂ ಮನೋಹರ್ ಪರಿಕ್ಕರ್ ಅವರು ರಾಷ್ಟ್ರಪತಿ ಚುನಾವಣೆ ಬಳಿಕವಷ್ಟೇ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಶತಾಯಗತಾಯ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನೇ ರಾಷ್ಟ್ರಪತಿಯಾಗಿ ಆಯ್ಕೆ  ಮಾಡಬೇಕು ಎಂದು ಈಗಾಗಲೇ ಕಸರತ್ತು ಆರಂಭಿಸಿರುವ ಬಿಜೆಪಿ ಇದೇ ಕಾರಣಕ್ಕೆ ತನ್ನ ಸಂಸದರಿಗೆ ರಾಜಿನಾಮೆ ನೀಡದಂತೆ ಸೂಚನೆ  ನೀಡಿದೆ ಎಂದು ಹೇಳಲಾಗುತ್ತಿದೆ. ಮಾಜಿ ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರು ಗೋವಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರಿನ್ನೂ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಅಂತೆಯೇ ಉತ್ತರ  ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರೂ ಕೂಡ ಸಂಸದರಾಗಿದ್ದು, ಸಿಎಂ ಆದ ಬಳಿಕ ಅವರೂ ರಾಜಿನಾಮೆ ನೀಡಿಲ್ಲ. ಕೇವಲ ಇವರಿಬ್ಬರು ಮಾತ್ರವಲ್ಲದೇ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ  ಅವರೂ ಕೂಡ ಸಂಸದರಾಗಿದ್ದು, ಅವರಿನ್ನೂ ತಮ್ಮ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ.

ಮನೋಹರ್ ಪರಿಕ್ಕರ್ ಹಾಗೂ ಯೋಗಿ ಆದಿತ್ಯಾನಾಥ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳ ಅವಧಿಯೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿದೆ.

ಈ ಮೂವರು ನಾಯಕರ ನಡೆ ಹಿಂದೆ ಬಿಜೆಪಿ ಹೈಕಮಾಂಡ್ ನಿಂತಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತೀಯೊಂದು ಮತಕೂಡ ಮುಖ್ಯಎಂದು ಬಿಜೆಪಿ ಮನಗಂಡಿದೆ. ಇದೇ ಕಾರಣಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ  ಬಿಜೆಪಿ ಮತ್ತು ಎನ್ ಡಿಎ ಸದಸ್ಯರಿದ್ದರೂ ಕೂಡ ರಾಷ್ಟ್ರಪತಿ ಚುನಾವಣೆ ಬಳಿಕ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು 787 ಸದಸ್ಯಬಲವನ್ನು ಹೊಂದಿರುವ ಬಿಜೆಪಿಯಿಂದಲೇ ರಾಷ್ಟ್ರಪತಿ ಆಯ್ಕೆ ಎಂದು ಹೇಳಲಾಗುತ್ತಿದೆಯಾದರೂ, ಕಾಂಗ್ರೆಸ್ ಕೂಡ ಅಷ್ಟು ಸುಲಭಕ್ಕೆ ತನ್ನ ಅಭ್ಯರ್ಥಿಯನ್ನು ಸೋಲಲು  ಬಿಡುವುದಿಲ್ಲ. ಹೀಗಾಗಿ ಉಭಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಬಹುದಾಗಿದೆ. ಇನ್ನು ಬಿಜೆಪಿಗೆ ಆಂಧ್ರ ಪ್ರದೇಶದ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಸಿಪಿ ಪಕ್ಷ ಹಾಗೂ ತೆಲಂಗಾಣದ ಟಿಎಸ್ ಆರ್  ಈಗಾಗಲೇ ಬೆಂಬಲ ಘೋಷಣೆ ಮಾಡಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಆಡಳಿತಾ ರೂಢ ಎಐಎಡಿಎಂಕೆ ಬೆಂಬಲ ಪಡೆಯುವ ಸಾಧ್ಯತೆ ಇದೆ.

ಇದೇ ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಗಸ್ಟ್ ನಲ್ಲಿ ಉಪ ರಾಷ್ಟ್ರಪತಿ ಆಯ್ಕೆ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com