ಶೆಡ್ ಶೇಡ್

ಶೆಡ್ ಶೇಡ್
Updated on: 

'ಊರಿಗೊಂದು ಕಾಡು, ಹಕ್ಕಿಗೊಂದು ಗೂಡು' ಗಾದೆಯನ್ನು ಇನ್ನೊಂದು ಸ್ವಲ್ಪ ಎಳೆದು 'ಕಾರಿಗೊಂದು ಶೆಡ್ಡು' ಅಂತ ಸೇರಿಸಿಕೊಂಡರೆ ಇಂದಿನ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತದೆ.
ಏಕೆಂದರೆ ಇಂದು ಪ್ರತಿಯೊಬ್ಬನ ಆಸೆಯೂ ಸ್ವಂತ ವಾಹನ ಖರೀದಿ ಮಾಡಬೇಕು ಎಂಬುದು. ಹಾಗೆ ಇಷ್ಟಪಟ್ಟ ಗಾಡಿಗಾಗಿ ಕಷ್ಟಪಟ್ಟು, ಸ್ವಲ್ಪ ಸ್ವಲ್ಪವೇ ಕೂಡಿಟ್ಟು ಕೊನೆಗೂ ತಗೊಂಡು ನಾಲ್ಕು ಜನಕ್ಕೆ ಸಿಹಿ ಹಂಚಿರುತ್ತೀರಿ. ಅಂದರೆ ಅಷ್ಟರಲ್ಲಾಗಲೇ ನಿಮ್ಮ ಕನಸಿನ ವಾಹನ ಮನಸಿನ ಒಂದು ಭಾಗವೇ ಆಗಿಬಿಟ್ಟಿರುತ್ತದೆ. ಇಂಥ ನಿಮ್ಮ ಪ್ರೀತಿಯ ವಾಹನ ಬಿಸಿಲಲ್ಲಿ ಬಳಲಿ, ಮಳೇಲಿ ಹೊರಳಿ, ಚಳಿಗೆ ನರಳ್ತಾ ಇದ್ರೆ ಹೊಟ್ಟೆಗೆ ಬೆಂಕಿ ಇಟ್ಟಂಗಾಗ್ದೇ ಇರುತ್ತಾ?
ಅದಕ್ಕಾಗಿಯೇ ಗಾಡಿಗೊಂದು ಶೆಡ್ಡು ಬೇಕು ಅಂದಿದ್ದು. ಮನೆ ಅಂಗಳದಲ್ಲಿ ತುಂಬಾ ಜಾಗವಿದ್ದರೇನೋ ಸರಿ. ಇಲ್ಲವಾದಲ್ಲಿ ಮನೆಯ ಭಾಗವಾಗಿಯೇ ಶೆಡ್ ನಿರ್ಮಿಸಬೇಕಾಗುತ್ತದೆ. ಇದು ಹೆಚ್ಚಿನ ಸುರಕ್ಷತಾ ಭಾವವನ್ನು ನೀಡುತ್ತದೆ ಕೂಡಾ. ನಿಮ್ಮ ವಾಹನದ ಮನೆ ನಿರ್ಮಿಸುವಾಗ ಈ ಅಂಶಗಳು ಮನದಲ್ಲಿರಲಿ.
*    ಹೇಗೂ ಶೆಡ್ ಅಲ್ಲವೇ ಎಂಬ ನೆಗ್ಲೆಕ್ಟ್ ಖಂಡಿತಾ ಬೇಡ. ಅಡಿಪಾಯ ಗಟ್ಟಿಯಾಗಿರಲಿ. ಮರದ ಅಥವಾ ಸಿಮೆಂಟ್‌ನ ತಳಪಾಯ ಗಟ್ಟಿಗಿರಲಿ.
*    ನೆಲ ಮಟ್ಟಸವಾಗಿರಲಿ. ಮಳೆಗಾಲದಲ್ಲೋ ಅಥವಾ ವಾಹನ ತೊಳೆದರೆ ನೀರು ನಿಂತು ಪ್ರದೇಶವೆಲ್ಲ ತೇವಮಯವಾಗದಿರಲಿ. ತಳಪಾಯ ಮರದ್ದಾಗಿದ್ದರೆ ತೇವಾಂಶದಿಂದ ಮರ ಮುಕ್ಕಾಗಬಹುದು. ನೀರು ಹರಿದು ಹೋಗೋಕೆ ಸಿಂಕ್ ಇರಲಿ.
*    ಶೆಡ್ ನಿರ್ಮಾಣ ಮಾಡುವಾಗ ಎಷ್ಟು ವಾಹನಗಳಿವೆ ಎಂಬುದನ್ನು, ಇನ್ನು ಮುಂದೆ ಇನ್ನಾವುದಾದರೂ ವಾಹನ ಖರೀದಿಸುವ ಯೋಚನೆ ಇದ್ದರೆ ಅದನ್ನೂ ಮನಸ್ಸಿನಲ್ಲಿಟ್ಟುಕೊಂಡು ಶೆಡ್ ಸುತ್ತಳತೆಯನ್ನು ನಿರ್ಧರಿಸಿ.
*    ಮನೆಯ ಯಾವ ಭಾಗದಲ್ಲಿ ಶೆಡ್ ಇದ್ದರೆ ವಾಹನ ತೆಗೆಯಲು, ಇಡಲು ಸುಲಭ ಎಂಬುದನ್ನು ಯೋಚಿಸಿ.
*    ನೆಲ ಮಟ್ಟಕ್ಕಿಂತ 5-6 ಇಂಚು ಎತ್ತರದಲ್ಲಿದ್ದರೆ ಉತ್ತಮ. ಇದರಿಂದ ಶೆಡ್‌ನೊಳಗೆ ಒಳ್ಳೆಯ ಗಾಳಿ ಬೆಳಕು ಆಡುತ್ತದೆ. ಇದು ತೇವವನ್ನು ತಡೆಯುತ್ತದೆ.
*    ಶೆಡ್‌ನ ಬಾಗಿಲು ಅಗಲವಾಗಿ, ಒಂದು ಭಾಗದ ಗೋಡೆಯಷ್ಟಿರಲಿ. ಎರಡು ಕಡೆಗಳಿಂದ ಬಾಗಿಲುಗಳಿದ್ದರೆ ವಾಹನ ಹೊರ ತೆಗೆಯಲು, ಇಡಲು ಇನ್ನೂ ಸುಲಭ. ಆದರೆ ಸ್ಥಳ ಲಭ್ಯತೆ ಹಾಗೂ ಇತರೆ ಅವಕಾಶವನ್ನು ನೋಡಿಕೊಳ್ಳಿ.
*    ಶೆಡ್ ಒಳಗೆ ಎಲ್ಲ ದಿಕ್ಕಿನಿಂದಲೂ ಒಂದೊಂದು ಬಲ್ಬ್ ಇರಲಿ.
*    ಶೆಡ್‌ಗೂ ಕಿಟಕಿಗಳಿರಲಿ. ಇದು ಬೆಳಗ್ಗೆಯೂ ಲೈಟ್ ಹಾಕಿಕೊಂಡು ಕತ್ತಲಗೂಡನ್ನು ಪ್ರವೇಶಿಸುವ ಅಸಹಾಯಕತೆಯನ್ನು ತಪ್ಪಿಸುತ್ತದೆ.
*   ಸ್ಥಳ ಹೆಚ್ಚಿದ್ದರೆ ವಾಹನ ಸಂಬಂಧಿ ಇತರೆ ವಸ್ತುಗಳನ್ನಿಡಲು ಅಗತ್ಯ ವಾರ್ಡ್‌ರೋಬ್ ನಿರ್ಮಿಸಿಕೊಳ್ಳಬಹುದು.

-ರೇಷ್ಮಾ ರಾವ್ ಸೋನ್ಲೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com