

ಮನೆ ಆಧುನಿಕವಾಗಿರಬಹುದು. ಹಾಗೆಂದು ಹಳೆಯಮನೆಯಲ್ಲಿ ಬದುಕಿ ಬಂದ ವಿಧಾನ ಮನಸ್ಸಿನಿಂದ ಮರೆಯಾಗಬಾರದಲ್ಲವೆ? ಬೆಳ್ತಂಗಡಿಯಿಂದ ಗಡಾಯಿಕಲ್ಲಿನ ದಾರಿಯಲ್ಲಿ ಸಾಗಿದಾಗ ಸಿಗುತ್ತದೆ 'ನಡ' ಎಂಬ ಊರು. ಅಲ್ಲಿದೆ ಶತಮಾನದ ಹಿಂದೆ ದೇವಪ್ಪ ಅಜ್ರಿಗಳಿಂದ ನಿರ್ಮಾಣವಾದ ಗುತ್ತು ಮನೆ. ಒಂದು ಕಾಲದಲ್ಲಿ ನೂರಾರು ಎಕರೆಗಳ ಒಡೆತನದಲ್ಲಿ ಮೆರೆದ ಈ ಮನೆ ಇಂದು ಕಾಲನ ಗತಿಯಿಂದ ಹಲವು ಎಕರೆಗಳನ್ನು ಕಳೆದುಕೊಂಡಿದೆ. ಹಳೆಯಮನೆಗೆ ಈಗ ಕಾಯಕಲ್ಪ ನೀಡಿ ಒಂದಿಷ್ಟು ಹೊಸತನ ನೀಡಲಾಗಿದೆ. ಆದರೆ, ನಿಜವಾಗಿ ನೋಡಬೇಕಾದದ್ದು ಈ ಮನೆಯ ಅಟ್ಟವನ್ನು!
ಗುತ್ತಿನ ಮನೆಯ ಅಟ್ಟವೆಂದರೆ ಶತಮಾನದ ಹಿಂದಿನ ಬದುಕಿಗೊಂದು ಕೈಗನ್ನಡಿ. ಆಗ ಬಳಸುತ್ತಿದ್ದ ಅನೇಕ ನಿತ್ಯ ಬಳಕೆಯ ವಸ್ತುಗಳ ಅಪೂರ್ವ ಸಂಗ್ರಹವೇ ಇಲ್ಲಿದೆ. ಕವಳ ತಿಂದು ಎಂಜಲು ಉಗುಳಲು ಉಪಯೋಗವಾಗುತ್ತಿದ್ದ ಪೀಕದಾನಿಯ ವೈವಿಧ್ಯಗಳನ್ನು ಅಲ್ಲಿ ಕಾಣಬೇಕು. ದೇವರಿಗೆ ನೈವೇದ್ಯ ನೀಡುತ್ತಿದ್ದ ಮರದ ಹರಿವಾಣಗಳಿವೆ. ಮಣ್ಣಿನ ಪಾತ್ರೆಯನ್ನು ನಾಚಿಸುವ ಮರದ ಪಾತ್ರೆಗಳಿವೆ. ಕಲಾತ್ಮಕ ಹೂಜಿಗಳಿವೆ. ಜಿನಯತಿಗಳಿಗೆ ಕಬ್ಬಿನ ಹಾಲು ಹಿಂಡಿಕೊಡಲು ವಿಶೇಷವಾಗಿ ಅಜ್ರಿಗಳು ಬಡಗಿಗಳಿಂದ ಮಾಡಿಸಿದ ಮರದ ಯಂತ್ರ ಇನ್ನೆಲ್ಲೂ ನೋಡಲು ಸಿಗದು.
ಮೂಲೆ ಸೇರಿದ ಚೆನ್ನೆಮಣೆಗೆ ಅಟ್ಟದಲ್ಲೊಂದು ಸ್ಥಾನ ಕೊಡಲಾಗಿದೆ. ಧಾನ್ಯ ಅಳತೆ ಮಾಡುತ್ತಿದ್ದ ಕಳಸೆ ಸೇರು ಪಾವುಗಳಿವೆ. ಭಾರಿ ಗಾತ್ರದ ಕಡೆಯುವ ಕಲ್ಲು ಇದೆ. ಅದರಲ್ಲಿ ಚೌಕಾಕೃತಿಯ ಕಲ್ಲು ನೋಡಬೇಕಿದ್ದರೆ ಇಲ್ಲಿಯೇ. ಜೈನರ ವ್ರತನೇಮಗಳಿಗೆ ಬಳಕೆಯಾಗುತ್ತಿದ್ದ ಪಾತ್ರೆಗಳ ಜತೆಗೆ ಮಗುವಿಗೆ ಮಣ್ಣಿ ತಿನ್ನಿಸಲು ಉಪಯೋಗವಾಗಿತ್ತಿದ್ದ ವಿಶಿಷ್ಟ ಸಲಕರಣೆಯೂ ಅಲ್ಲುಂಟು. ಪಿಂಗಾಣಿಯ ಉಪ್ಪಿನಕಾಯಿ ಭರಣಿಗಳ ಆಕಾರ ವೈವಿಧ್ಯವನ್ನು ಕಾಣಬೇಕು ಅಲ್ಲಿಯೇ.
ಬುಗುರಿಯಂಥ ದೀಪಗಳು ಅದರೊಳಗೆ ಮೊಂಬತ್ತಿ ಉರಿಸಿಟ್ಟರೆ ಇಡೀ ಮನೆ ಝಗಝಗ ಬೆಳಕು. ಹಿರಿಯರು ನಶ್ಯ ಅರೆಯಲು ಬಳಸುತ್ತಿದ್ದ ಪುಟ್ಟ ಒನಕೆ ಮತ್ತು ಅದರ ಒರಳು ಇದೆ. ಮಜ್ಜಿಗೆ ಕಡೆಯುವ ಮಂತು, ಮಗು ಮಲಗುವ ಕಲಾತ್ಮಕ ತೊಟ್ಟಿಲು... ಹೀಗೆ ಸಾಗಿ ಬಂದ ಬದುಕಿನ ಅನನ್ಯ ಪರಿಕರಗಳಿಗೆ ಸಾಕ್ಷಿಯಾಗಿದೆ ಗುತ್ತಿನ ಮನೆಯ ಹಳೆಯ ಅಟ್ಟ. ಈಗ ಗುತ್ತಿನ ಮನೆಯಲ್ಲಿರುವ ಯುವರಾಜ ಅಜ್ರಿಗಳು ಹಳೆಯ ವಸ್ತುಗಳನ್ನು ಜೋಪಾನವಾಗಿ ಉಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ9845984417.
ಪ. ರಾಮಕೃಷ್ಣ ಶಾಸ್ತ್ರಿ