

'ಹುಡುಗ ಐ ಲವ್ ಯು ಅಂದ್ರೆ ಲೋಫರ್, ಅದೇ ಹುಡುಗಿ ಐ ಲವ್ ಯು ಅಂದ್ರೆ ಆಫರ್!'
ಇದು ಹುಡುಗಿಯರ ಬಗ್ಗೆ ಪಡ್ಡೆ ಹುಡುಗರು ಹುಟ್ಟುಹಾಕಿರುವ ಸ್ಲೋಗನ್. ಪೋಲಿ, ವಿಚಿತ್ರ ಏನಿಸಿದರೂ 'ಹುಡುಗರ ಗ್ಯಾಂಗ್'ನಲ್ಲಿ ಇಂಥದೊಂದು ಮಾತು ಚಾಲ್ತಿಯಲ್ಲಿರುವುದು ಮಾತ್ರ ದಿಟ. ಕ್ಲಾಸ್‌ಗೆ ಚಕ್ಕರ್ ಹಾಕಿ ಹುಡುಗಿ ಹಿಂದೆಯೇ ಚಪ್ಪಲಿ ಸವೆದು ಹೋಗುವ ಹಾಗೆ ಅಲೆದರೂ ಕೊನೆಗೊಂದು ದಿನ 'ಏನ್ ಲೋಫರ್ ಥರಾ ಹಿಂದೆ ಅಲೀತಿಯಾ?' ಅಂತ ಕೇಳಿ ದೇವದಾಸನಾಗಲು ಒಂದು ಚಾನ್ಸ್ ಕೊಡುತ್ತಾಳೆ. ಅದೇ ಯಾವೊಬ್ಬಳು ಹುಡುಗಿಯಾದರೂ ಹೀಗೆ ಹಿಂದೆ ಅಲೆಯುವುದು ನೋಡಿದ್ದೀರಾ ಅಥವಾ ಕೇಳಿದ್ದೀರಾ? ಅಂಥದರಲ್ಲಿ ಹುಡುಗಿ ಅಂದ್ರೆ ಬಾಯಿಬಾಯಿ ಬಿಡೋ ಸಮಯದಲ್ಲಿ ಅವಳಾಗೇ ಬಂದು ಕೇಳಿದ್ರೆ ಅದು ಆಫರ್ ಅಲ್ದೇ ಇನ್ನೇನು?
ಹುಡುಗಿಯರೇ ಹಿಂಗಾ?
ಅದೇ ತಾನೇ ಎಸ್ಸೆಸ್ಸೆಲ್ಸಿ ಮುಗಿಸಿದ ಹುಡುಗ ಕೆಜಿಗಟ್ಟಲೆ ಪುಸ್ತಕವಿರುವ ಬ್ಯಾಗ್ ಮನೆಯಲ್ಲಿಟ್ಟು ಕೈಯಲ್ಲೊಂದೇ ಒಂದು ಪುಸ್ತಕ ಹಿಡಿದು ಬೆರಳ ತುದಿ ಮೇಲೆ ತಿರುಗಿಸುತ್ತಾ ಕಾಲೇಜು ಮೆಟ್ಟಿಲು ಹತ್ತಿದಾಗ ಹುಡುಗಿಯರತ್ತ ಸೆಳೆತ ಉಂಟಾಗುವುದು ಸಹಜ. ಅದೇ ಸೆಳೆತ ವ್ಯಾಮೋಹದ ರೂಪದಲ್ಲಿ ಹುಡುಗಿಯ ಹಿಂದೆ ಸುತ್ತಾಡುವಂತೆ ಮಾಡುತ್ತದೆ. ಕ್ಲಾಸ್‌ಗೆ ಬಂಕ್ ಮಾಡುವ ಹಂತಕ್ಕೂ ಹೋಗುತ್ತದೆ. ಹಿಂದಿಂದೆ ಅಲೆದಾಡುತ್ತ ಸಾಗುವ ಹುಡುಗ ಧೈರ್ಯ ಮಾಡಿ ಒಂದು ದಿನ ಹುಡುಗಿ ಎದುರು ಗುಲಾಬಿ ಹೂವಿನೊಂದಿಗೆ ನಿಂತು 'ಐ ಲವ್ ಯು' ಅಂದೇ ಬಿಡುತ್ತಾನೆ. ಆಗ 'ಏ.. ನೀನಂದ್ರೆ ನಂಗಿಷ್ಟ ಇಲ್ಲ' ಅಂದರೆ ಅಷ್ಟು ದಿನ 'ಗುಡ್ಡಕ್ಕೆ ಕಲ್ಲು ಹೊತ್ತ' ಹುಡುಗನಿಗೆ ಹೇಗಾಗಬೇಡ? ಈ ಹುಡುಗಿಯರೇ ಹೀಗೇನಾ? ಇವರಿಗೆ ಹುಡುಗರ ಮನಸ್ಸು ಅರ್ಥವೇ ಆಗಲ್ವಾ ಎಂದು ಗೊಣಗುತ್ತಾ ಕಣ್ಣು ಒದ್ದೆ ಮಾಡಿಕೊಳ್ಳುತ್ತಾನೆ. ಮಳೆಯಲ್ಲಿ ನಡೆಯುವುದಂದ್ರೆ ನನಗಿಷ್ಟ ಎನ್ನುತ್ತಲೇ ಕಣ್ಣೀರು ಅಡಗಿಸಿಡುತ್ತಾನೆ.
ಮಿತ್ರನ ಲವ್ ಸಕ್ಸಸ್ ಆದ್ರೆ ಮುಗೀತು...
ತನ್ನ ಸಹಪಾಠಿ ಅಥವಾ ಮಿತ್ರ ಇನ್ನಾವುದೋ ಹುಡುಗಿಗೆ 'ಐ ಲವ್ ಯು' ಎಂದಾಗ ಹುಡುಗಿ ಸಮ್ಮತಿಸಿ 'ಪ್ರೇಮ ಪಯಣ' ಶುರುವಾದರೆ ಭಗ್ನಪ್ರೇಮಿಗೆ ಇನ್ನಿಲ್ಲದ ಸಂಕಟ ಉಂಟಾಗುತ್ತದೆ. ನನ್ನವಳು ನನ್ನನ್ನು ರಿಜೆಕ್ಟ್ ಮಾಡೋಕೆ ಕಾರಣ ಏನು ಎಂದು ಹುಡುಕಾಟ ಶುರುಮಾಡುತ್ತಾನೆ. ಉತ್ತರಕ್ಕಾಗಿ ಬಾರ್‌ನತ್ತ ಮುಖ ಮಾಡುತ್ತಾನೆ.
ಹುಡುಗೀನೇ ಇಷ್ಟಪಟ್ಟರೆ?
ಕಣ್ಣಲ್ಲೇ ಮಾತಾಡಿ, ಹೆಜ್ಜೆಯ ಗೆಜ್ಜೆನಾದದಲ್ಲೇ ಮನಸ್ಸು ಅರಿತ ಹುಡುಗಿ ತನಗೆ ಇಷ್ಟವಾದ ಹುಡುಗನಿಗೆ 'ನೀನಂದ್ರೆ ನಂಗ್ ಇಷ್ಟ ಕಣೋ' ಎಂದರೆ ಹುಡುಗನ ಪಾಲಿಗೆ ಸ್ವರ್ಗ. ಆಗಸಕ್ಕೆ ಮೂರೇ ಗೇಣು, ಬಯಸದೇ ಬಂದ ಭಾಗ್ಯ!
ಇಂಥದೊಂದು ಅನುಭವದ ಮೂಸೆಯಲ್ಲೇ ಭಗ್ನಪ್ರೇಮಿಯೊಬ್ಬ 'ಹುಡುಗ ಐ ಲವ್ ಯು ಅಂದ್ರೆ ಲೋಫರ್, ಅದೇ ಹುಡುಗಿ ಐ ಲವ್ ಯು ಅಂದ್ರೆ ಆಫರ್!' ಎಂಬ ಮಾತನ್ನು ಹುಟ್ಟುಹಾಕಿದನೇನೋ!
ಹುಡುಗರೇ ಇಲ್‌ಕೇಳಿ
ಹುಡುಗಿ ಪ್ರೀತಿ ನಿರಾಕರಿಸಿದಳು ಎಂದ ಮಾತ್ರಕ್ಕೆ ಜೀವನವೇ ಮುಗಿದು ಹೋಯ್ತು ಎಂದಲ್ಲ. 'ಪ್ರೀತಿಯ ಜೀವನ' ರೂಪಿಸಿಕೊಳ್ಳಲು ಅದೊಂದು ಪಾಠ ಎಂದು ಭಾವಿಸಬೇಕು. ಮಾಡಿದ ತಪ್ಪನ್ನೇ ಪದೇ ಪದೆ ಮಾಡಬಾರದು. ಅವಳಿಗಿಂತಲೂ ಚೆಂದದ ಹುಡುಗಿಯ ಬೆನ್ನತ್ತುತ್ತೇನೆ ಎಂಬುದು ಮೂರ್ಖತನದ ಪರಮಾವಧಿ. ಲವ್ ಮಾಡುವ ವಯಸ್ಸು ಹೌದಾದರೂ ಮುಂದಿನ ಜೀವನದ ಬಗ್ಗೆ ಕನಸು ಕಟ್ಟಿಕೊಂಡು ನೆಟ್ಟಗೆ ಓದಬೇಕು. ಗಡ್ಡ ಬಿಟ್ಟು, ಬಾರ್‌ನಲ್ಲೇ ಹೆಚ್ಚು ಕಾಲ ಕಳೆದರೆ ಎಲ್ಲ ಸಮಸ್ಯೆಗೂ ಪರಿಹಾರ ಸಿಗುವುದಿಲ್ಲ. ಪ್ಯಾಕ್‌ಗಟ್ಟಲೇ ಸಿಗರೇಟ್ ಸೇದಿದರೆ ಸುಡುವುದು ನಮ್ಮ ದೇಹವೇ. ಪರಿಶುದ್ಧ ಮನಸ್ಸಿನೊಂದಿಗೆ ಓದಿ ಬದುಕು ರೂಪಿಸಿಕೊಳ್ಳಿ. ಆಗ ಹುಡುಗಿಯೇ ಆಫರ್‌ನೊಂದಿಗೆ ನಿಮ್ಮತ್ತ ಬರುತ್ತಾಳೆ. ಏನಂತೀರಿ?
-ಚನ್ನು ಮೂಲಿಮನಿ
kp.channu @gmail.com