

ಟ್ರೈ ಮಾಡ್ತಿರಾ...? ಬರೀ ರು. 30 ಲಕ್ಷಕ್ಕೆ ಫ್ಲ್ಯಾಟ್! ಒಳ್ಳೆ ಅಪಾರ್ಟ್‌ಮೆಂಟ್. ಸಿಟಿಯಿಂದ ಬರೀ 10 ಕಿ.ಮೀ.ದೂರವಂತೆ!
ಹೀಗೆ ಹೇಳುವವರ ಮಾತಿಗೆ ಮರುಳಾಗುತ್ತಿರುವ ಅನೇಕ ಮಂದಿ ಹೇಗೋ ಸಾಲಸೋಲ ಮಾಡಿ, ಜಮೀನು ಒತ್ತೆಯಿಟ್ಟು ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಖರೀದಿಸುತ್ತಿದ್ದಾರೆ. ಪ್ರತ್ಯೇಕ ಮನೆ ನಿರ್ಮಿಸಿದರೆ, ನಿವೇಶನಕ್ಕೇ ರು. 40 ಲಕ್ಷ ನೀಡಬೇಕು. ಅದೇ ರು. 50 ಲಕ್ಷಕ್ಕೆ 2 ಬೆಡ್‌ರೂಮ್ ಮತ್ತು ಹಾಲ್ ಇರುವ ಫ್ಲ್ಯಾಟ್ ಸಿಗುವುದಾದರೆ, ಏಕೆ ಬಿಡಬೇಕೆನ್ನುವವರು ಹೆಚ್ಚುತ್ತಲೇ ಇದ್ದಾರೆ. ಆದರೆ, ಇದೇ ಜನ ಫ್ಲ್ಯಾಟ್ ಖರೀದಿಸಿದ ಒಂದೇ ವರ್ಷದಲ್ಲಿ ಮನೆಯೂ ಇಲ್ಲ. ಮಠವೂ ಇಲ್ಲದೆ ದಿಕ್ಕಾಪಾಲಾಗುತ್ತಿದ್ದಾರೆ!
ಹೇಗೆಂದರೆ, ಇಡೀ ಅಪಾರ್ಟ್‌ಮೆಂಟ್ ಅಕ್ರಮಗಳಲ್ಲಿ ಮುಳುಗಿರುತ್ತದೆ. ವಿವಾದಗಳಿಗೆ ಗುರಿಯಾಗಿರುತ್ತದೆ. ಇದ್ಯಾವುದೂ ಫ್ಲ್ಯಾಟ್ ಮಾಲೀಕರಿಗೆ ಗೊತ್ತೇ ಇರುವುದಿಲ್ಲ. ಏಕೆಂದರೆ, ಅವರಿಗೆ ಬೇಕಿರುವುದು ಕಡಿಮೆ ಮೊತ್ತದ ಫ್ಲ್ಯಾಟ್ ಮಾತ್ರವೇ ಹೊರತು, ಅಪಾರ್ಟ್‌ಮೆಂಟ್ ಅಕ್ರಮ. ನಿರ್ಮಿಸಿದವರ ಹಿನ್ನೆಲೆಯಲ್ಲ.
ಹೀಗಾಗಿ ಅಪಾರ್ಟ್‌ಮೆಂಟ್‌ಗೆ ಮರುಳಾಗಿ ಹಳ್ಳಕ್ಕೆ ಬೀಳುತ್ತಿರುವವರು ಹೆಚ್ಚುತ್ತಿದ್ದಾರೆ. ಫ್ಲ್ಯಾಟ್ ಆಸೆಗೆ ಬಲಿಯಾಗಿ ಬದುಕಿನ ಲೆಕ್ಕಾಚಾರದಲ್ಲೇ ಫೇಲ್ ಆಗುತ್ತಿದ್ದಾರೆ. ಇಂಥವರಿಂದಲೇ ಪ್ರಮುಖ ನಗರಗಳಲ್ಲಿ ಎಲ್ಲೆಂದರಲ್ಲಿ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿದ್ದು, ನಿವೇಶನ ದರ ಗಗನಮುಖಿಯಾಗುತ್ತಿದೆ. ಇದನ್ನೇ ನಮ್ಮ ರಿಯಲ್ ಎಸ್ಟೇಟ್ ಮಂದಿಯೂ ಬಯಸುತ್ತಿದ್ದಾರೆ. ಹಾಗೆಯೇ ಬೆಳೆಸುತ್ತಲೂ ಇದ್ದಾರೆ. ಇದಕ್ಕೆ ಬ್ಯಾಂಕ್‌ಗಳು ಕೂಡ ಸಾಕಷ್ಟು ಪೂರಕವಾಗಿವೆ. ಸುಲಭ ದರದಲ್ಲಿ ಸಾಲ, ಸೌಲಭ್ಯ ನೀಡಲು ತಾಮುಂದು ಎಂದು ಮುನ್ನುಗ್ಗುತ್ತಿರುವ ಬ್ಯಾಂಕ್‌ಗಳು ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಸದಾ ಬೆನ್ನುತಟ್ಟುತ್ತಿವೆ.
ಅಪಾರ್ಟ್‌ಮೆಂಟ್ ಎಂಬ ಹಳ್ಳ
ಈಗಿನ ಕಬ್ಬಿಣ ಮತ್ತು ಮರಳು, ಸಿಮೆಂಟ್ ಬೆಲೆಯಲ್ಲಿ ಮನೆ ನಿರ್ಮಿಸುವುದು ಸುಲಭವಲ್ಲ. ಏಕೆಂದರೆ, ನಗರದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಅಪಾರ್ಟ್‌ಮೆಂಟ್ ನಿರ್ಮಿಸಬೇಕಾದರೆ, ಚದರ ಅಡಿಗೆ 2500 ವೆಚ್ಚವಾಗುತ್ತದೆ.
ಇದು ಮುಗಿದ ನಂತರ ಆ ಅಪಾರ್ಟ್‌ಮೆಂಟ್ ಅನ್ನು ವಾಸಕ್ಕೆ ಯೋಗವಾಗುವಂತೆ ಒಳಭಾಗದ ಸಿದ್ಧಪಡಿಸಲು ಚ.ಅಡಿಗೆ ರು. 1500 ವರೆಗೂ ವೆಚ್ಚವಾಗುತ್ತದೆ. ಅಂದರೆ, ಯಾವುದೇ ನಿಯಮ ಉಲ್ಲಂಘನೆ ಇಲ್ಲದೆ. ನಗರ ಯೋಜನೆ ಇಲಾಖೆ ಅನುಮೋದಿಸಿದ ನಕ್ಷೆ ಪ್ರಕಾರ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್ ಬೆಲೆ ಚ.ಅಡಿಗೆ 60ರಿಂದ 70ಲಕ್ಷ ವರೆಗೂ ತಗಲುತ್ತದೆ. ಹೀಗಿರುವಾಗ ಕಡಿಮೆ ಲಾಭ ಇಟ್ಟುಕೊಂಡು ಮಾರಾಟ ಮಾಡಿದರೂ ಬಿಲ್ಡರ್‌ಗಳು ಫ್ಲ್ಯಾಟ್‌ಗೆ ರು. 60 ಲಕ್ಷದ ವರೆಗೂ ಮಾರಾಟ ಮಾಡಬಹುದು. ಆದರೆ, ನಗರದಲ್ಲಿ ನಡೆಯುತ್ತಿರುವುದೇ ಬೇರೆ.
ಮನೆಯೂ ಇಲ್ಲ. ಹಣವೂ ಇಲ್ಲ
ಅನೇಕ ಕಡೆ ಚ. ಅಡಿಗೆ ಬರೀ ರು. 1800ಕ್ಕೆ ಫ್ಲ್ಯಾಟ್‌ಗಳ ಮಾರಾಟ ನಡೆಯುತ್ತಿದೆ ಎಂದರೆ, ಅವುಗಳನ್ನು ಹೇಗೆ ತಾನೇ ನಂಬಲು ಸಾಧ್ಯ? ಎಂಬ ಪ್ರಶ್ನೆಯೂ ಇದೆ. ಇವರು ಅಪಾರ್ಟ್‌ಮೆಂಟ್‌ಗಳನ್ನು ಹೇಗೆಲ್ಲಾ ನಿರ್ಮಿಸುತ್ತಾರೆ? ಇವರಿಂದ ಖರೀದಿಸಿದವರ ಗತಿ ಏನು? ಇಂಥವರು ಖರೀದಿಸಿದ ಜಾಗವೇ ವಿವಾದದಲ್ಲಿರುತ್ತದೆ. ಇನ್ನು ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು ಅಪೂರ್ಣ ಮತ್ತು ಅಸ್ಪಷ್ಟವಾಗುತ್ತದೆ. ಇಂಥ ಕಡೆ ಕಟ್ಟಡ ನಕ್ಷೆ ಉಲ್ಲಂಘನೆಯಂತೂ ಇನ್ನೂ ಅಧ್ವಾನ. ಹೀಗಿರುವುದನ್ನು ತಿಳಿಯದೇ ಫ್ಲ್ಯಾಟ್ ಖರೀದಿಸಿದವರು ಇನ್ನೇನು ಗೃಹಪ್ರವೇಶ ಮಾಡಬೇಕೆನ್ನುವ ವೇಳೆಗೆ ಸ್ಥಳೀಯ ಸಂಸ್ಥೆಗಳಿಂದ ಅಥವಾ ಕೋರ್ಟ್‌ನಿಂದ ತಡೆಯಾಜ್ಞೆಯಂಥ ತೊಡಕುಗಳು ಎದುರಾಗುತ್ತವೆ. ಆಗ ಇತ್ತಮನೆಯೂ ಇಲ್ಲ. ಹಣವೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ಚಂದ್ರರೆಡ್ಡಿ.
ಫ್ಲ್ಯಾಟ್ ಖರೀದಿಗೂ ಮುನ್ನ...