

ಮನೆಗೆ ಎಷ್ಟು ಅಲಂಕಾರ ಮಾಡಿದರೂ ಕಡಿಮೆಯೇ. ತರಹೇವಾರಿ ಅಲಂಕಾರಿಕ ವಸ್ತುಗಳು ಪ್ರತಿಯೊಂದು ಮನೆಲ್ಲೂ ವೈವಿಧ್ಯಮವಾಗಿ ಸೇರಿಕೊಂಡಿರುತ್ತವೆ. ಇದರಲ್ಲಿ ಕೃತಕ ವಸ್ತುಗಳೇ ಹೆಚ್ಚಾಗಿರುತ್ತವೆ. ಆದರೆ, ಗೃಹಾಲಂಕಾರಕ್ಕೆ ಕೃತಕಕ್ಕಿಂತ ಕಸೂತಿ ಕಲೆಯೇ ಚೆನ್ನ ಎನ್ನುವುದು ಮಾತ್ರ ಸುಳ್ಳಲ್ಲ.
ನ್ಯೂಯಾರ್ಕ್ನ ಜೂಡಿ ರೂಸ್ ಅವರದ್ದು ಕಸೂತಿ ಕಲೆಯಲ್ಲಿ ಎತ್ತಿದ ಕೈ. ಸಾಂಪ್ರದಾಯಿಕ ಕಸೂತಿ ಕಲೆಯ ಮೂಲಕ ಗೃಹಾಲಂಕಾರಕ್ಕೆ ಮೆರುಗು ನೀಡಿದ ಮಹಿಳೆ. ಕಸೂತಿ ಕಲೆಗೆ ಆಧುನಿಕ ರೂಪ ನೀಡಿ ಒಂದು ಅಲೆ ಸೃಷ್ಟಿಸಿದವರು. ಅಷ್ಟೇ ಅಲ್ಲ, ಇತ್ತೀಚೆಗೆ ಈ ಕಲೆ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ವಿಸ್ತಾರಗೊಳ್ಳುತ್ತಿರುವುದು ಇದರ ಖ್ಯಾತಿಗೆ ಹಿಡಿದ ಕೈಗನ್ನಡಿಯೂ ಆಗಿದೆ. ಈ ಕಸೂತಿ ಕಲೆ ರೂಸ್ರನ್ನು ಅಂಟಿಕೊಂಡಿದ್ದೇ ಒಂದು ವಿಶೇಷ ಸಂದರ್ಭದಲ್ಲಿ.
ಒಂದು ದಿನ ರೂಸ್, ಬಟ್ಟೆ ಚೂರೊಂದನ್ನು ಹಿಡಿದುಕೊಂಡು ನ್ಯೂಯಾರ್ಕ್ನ ಯೂನಿಯನ್ ಪಾರ್ಕ್ನಲ್ಲಿ 56 ವರ್ಷದ ಹಿಂದಿನ ಬಟ್ಟೆಯಲ್ಲಿ ಕಸೂತಿ ಮಾಡಲು ಆರಂಭಿಸಿದರು. ಬಟ್ಟೆಯಲ್ಲಿ ಕಲೆ ಅರಳಿತು. ಆದರೆ, ಆಕೆಗೆ ತೃಪ್ತಿ ಸಿಗಲಿಲ್ಲ. ರೂಸಿ ಪ್ರಯತ್ನ ಬಿಡಲಿಲ್ಲ. ನಂತರ ಕಸೂತಿಯಲ್ಲಿಯೇ ಹೆಚ್ಚು ತಲ್ಲೀನರಾಗಿ ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ನಾರುಬಟ್ಟೆ, ಉಣ್ಣೆಬಟ್ಟೆ ಬಳಸಿಕೊಂಡು ಮನೆಗೆ ಅಗತ್ಯ ಅಲಂಕಾರಿಕ ವಸ್ತುಗಳನ್ನು ಉತ್ಪಾದಿಸಿ ಕಂಬಳಿ, ದಿಂಬು, ಹಾಸುಗಂಬಳಿ ಹಾಗೂ ಪೀಠೋಪಕರಣಗಳ ಮೇಲಿನ ಕರ್ಟೈನ್ಗಳ ಮೇಲೆ ಕರಕುಶಲತೆ ತೋರಿಸಿದರು. ಅಲ್ಲಿಂದ ಅವರ ಕಸೂತಿಗೆ ಒಂದು ದಿಕ್ಕು ಸಿಗುತ್ತದೆ.
ಇನ್ನೊಂದು ವಿಚಿತ್ರ ಸಂಗತಿಯೆಂದರೆ, ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ರೂಸ್ ಪ್ರವಾಸ ಬಂದಿದ್ದರು. ಆಗ ವಿಭಿನ್ನ ಶೈಲಿಯ ಕಸೂತಿ ವಿನ್ಯಾಸ ಗಳನ್ನು ಗಮನಿಸಿದರು. ಕಾಶ್ಮೀರದ ಕಲೆಯನ್ನೂ ಕಲಿತುಕೊಂಡ ರೂಸ್, ಅದರಿಂದಲೇ ಶಾಲುಗಳಲ್ಲಿ ವಿವಿಧ ಬಣ್ಣ ಬಣ್ಣ ಚಿತ್ತಾರಗಳನ್ನು ಬಿಡಿಸಿದರು. ವಿವಿಧ ಬಗೆಯ ಹೂಗಳ ಅಲಂಕಾರವನ್ನು ಚೆಲ್ಲಿದಳು. ಅಲ್ಲದೆ ತಾನು ಕಲಿತ ಕಸೂತಿಯನ್ನು ಕಾಶ್ಮೀರಿಯರಿಗೂ ಪರಿಚಯಿಸಿದಳು.
ನ್ಯೂಯಾರ್ಕ್ನಲ್ಲಿ ರೂಸ್ ಅವರ ಕಸೂತಿ ಕಲೆಗೆ ಅಗಾಧ ಬೇಡಿಗೆ ಸೃಷ್ಟಿಯಾಗಿದೆ. ಗೃಹಾಲಂಕಾರಕ್ಕೆ ಕಸೂತಿಯಿಂದ ಮಾಡಿದ ಕವರ್ಗಳು ಗೃಹಿಣಿಯರ ಮನಗೆದ್ದಿವೆ. ಅಷ್ಟೇ ಅಲ್ಲ... ಅಮೆರಿಕ, ಕೆನಡಗಳಲ್ಲಿ ನಡೆದ ವಸ್ತು ಪ್ರದರ್ಶನಗಳಲ್ಲೂ ಇವರ ಕಲೆಗೆ ಖ್ಯಾತಿ ಸಿಕ್ಕಿದೆ. ಜನರು ಕಾಲಕ್ಕೆ ತಕ್ಕಂತೆ ತಮ್ಮ ಅಭಿರುಚಿಗೆ ಅನುಗುಣವಾಗಿ ವಿವಿಧ ವಿನ್ಯಾಸದ ಅಲಂಕಾರಿಕ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಬಯಸುತ್ತಾರೆ ಎನ್ನುವುದು ರೂಸ್ ಮಾತು.
- ಪಾವನ ಎಚ್.ಎಸ್.
pavanahsgowda@gmail.com