ಮೊದಲ ಸಲ...

ಮೊದಲ ಸಲ...
Updated on

First impression is best impression

ಹೌದು. ಮೊದಲ ನೋಟದ ಆಕರ್ಷಣೆ, ಸೆಳೆತವೇ ಅಂಥದ್ದು. ಎಂಥವರನ್ನೂ ಸೆಳೆದು ಬಿಡುತ್ತದೆ. ಅಚ್ಚಳಿಯದ ನೆನಪು ಉಳಿಯುವಂತೆ ಮಾಡುತ್ತದೆ. ಇದಕ್ಕೆ ಮನೆ ಕೂಡ ಹೊರತಲ್ಲ!

ಹೌದು. ಮನೆಯ ಒಳಾಂಗಣ ಎಷ್ಟೇ ಸುಂದರವಾಗಿದ್ದರೂ ಹೊರಾಂಗಣ ಅಥವಾ ಮನೆಯ ಆರಂಭದ ಭಾಗ ಆಕರ್ಷಕವಾಗಿಲ್ಲದಿದ್ದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಮನೆ ಕಳೆಗುಂದಿ ಎಲ್ಲವೂ ಸಪ್ಪೆಯಾಗುತ್ತದೆ. ದುಬಾರಿ ಕಟ್ಟಿದರೂ ಎಂಟ್ರೆನ್ಸ್ ಮಾತ್ರ ಅದ್ಭುತವಾಗಿರಬೇಕು. ಅದಕ್ಕೇನೂ ಹೆಚ್ಚುವರಿ ವೆಚ್ಚ ಮಾಡಬೇಕಿಲ್ಲ. ಕಡಿಮೆ ದುಡ್ಡಿನಲ್ಲಿ ಆಕರ್ಷಕ ಹಾಗೂ ಮನಮೋಹಕವಾಗಿ ಥಳಥಳಿಸುವಂತೆ ಮಾಡಬಹುದು.

  • ಮನೆ ಬಾಗಿಲು ದಾಟಿ ಒಳಾಂಗಣ ಪ್ರವೇಶಿಸುವ ಮುನ್ನ ಎದುರಾಗುವ ಹಾಲ್ ಸ್ವಚ್ಛವಾಗಿರಲಿ. ಧೂಳು ಮೆತ್ತಿದ ಸ್ವಾಗತ ಮೂಗು ಮುರಿಯುವಂತೆ ಮಾಡುತ್ತದೆ. ಅಲ್ಲಿಗೆ ನಿಮ್ಮ ಶ್ರಮ ಸಂಪೂರ್ಣ ವ್ಯರ್ಥ.
  • ಕೇವಲ ಉತ್ತಮ ಟೈಲ್ಸ್ ಬಳಸುವುದಕ್ಕಿಂತ ಆಕರ್ಷಕವಾದ ಡಿಸೈನ್ ಉಳ್ಳ ಮ್ಯಾಟ್ ಅಥವಾ ಇನ್ನಿತರೆ ವಸ್ತುಗಳನ್ನು ಬಳಸಿ. ಇದರಿಂದ ಮತ್ತಷ್ಟು ಪಳಪಳಿಸುತ್ತದೆ. ಕಣ್ಣಿಗೆ ರಾಚುವಂಥ ಬಣ್ಣ ಬಳಸುವುದಕ್ಕಿಂತ ಸಾಧ್ಯವಾದಷ್ಟು ತಿಳಿ ಬಣ್ಣದ ಮ್ಯಾಟ್‌ಗಳನ್ನು ಆಯ್ಕೆಮಾಡಿಕೊಳ್ಳಿ.    
  • ಹಾಲ್‌ನ ಜಾಗ ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅತಿಯಾಗುವಷ್ಟು ಡಿಸೈನ್ ಮಾಡುವ ಅಗತ್ಯವಿಲ್ಲ. ಸಿಂಪಲ್ಲಾಗಿದ್ದರೆ ಆಕರ್ಷಣೆ ಹೆಚ್ಚು ಎಂಬುದನ್ನು ಮರೆಯಬೇಡಿ. ದೊಡ್ಡ ದೊಡ್ಡ ಟೇಬಲ್, ಚೇರ್ ಹಾಗೂ ಇನ್ನಿತರೆ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಿ.
  • ಟೇಬಲ್ ಮೇಲೆ ಸಾಧ್ಯವಾದರೆ ಕೃತಕ ಹೂವುಗಳನ್ನು ಬಳಸಿ. ಮಾಮೂಲಿ ಹೂವುಗಳನ್ನು ಬಳಸಿದರೆ ಪ್ರತಿದಿನ ಬದಲಾಯಿಸುವ ರಗಳೆ ಇರುತ್ತದೆ.
  • ಹಾಲ್‌ನಲ್ಲಿ ತೀರಾ ದೊಡ್ಡದಲ್ಲದ ಹಾಗೂ ತೀರಾ ಚಿಕ್ಕದೂ ಅಲ್ಲದ ಗಡಿಯಾರ ಇರಲಿ. ಆಕರ್ಷಕವಾದ ಲೈಟ್‌ಗಳನ್ನು ಬಳಸಿ. ಬೆಳಕಿನ ಪ್ರತಿಫಲನ ಗಡಿಯಾರದಲ್ಲಾಗುವುದರಿಂದ ಹೊಳಪು ಹೆಚ್ಚುತ್ತದೆ. ಡಾರ್ಕ್ ಲೈಟ್‌ಗಳ ಬಳಕೆ ಬೇಡ. ಇದು ಅಂದಗೆಡಿಸುತ್ತದೆ.
  • ಹಸಿರು ನಳನಳಿಸುವಂತೆ ಪಾಟ್‌ಗಳನ್ನು ಹಾಲ್ ಒಳಗಡೆ ಗೋಡೆ ಬದಿಯಲ್ಲಿಡಿ. ಇದರಿಂದ ವಾತಾವರಣ ಕೂಡ ಚೆನ್ನಾಗಿರುತ್ತದೆ, ಆಕರ್ಷಕವಾಗಿಯೂ ಇರುತ್ತದೆ.
  • ಸಂಜೆ ವೇಳೆ ಮಬ್ಬುಗತ್ತಲಿನ ನಡುವೆ ಮೊಂಬತ್ತಿ ಬಳಸಿ. ಇದರಿಂದ ಸ್ವಲ್ಪ ಭಿನ್ನವಾಗಿ ಹಾಗೂ ಮನಮೋಹಕವಾಗಿರುತ್ತದೆ.
  • ಏರ್‌ಫ್ರೆಷನರ್ಸ್‌ಗಳನ್ನು ಬಳಸಿ. ಇದರಿಂದಮನೆಯ ವಾತಾವರಣ ಪರಿಮಳ ಭರಿತವಾಗಿರುತ್ತದೆ.
  • ಅನವಶ್ಯ ವಸ್ತುಗಳನ್ನು ತೆಗೆದಿಡಿ. ಚೆಲ್ಲಾಪಿಲ್ಲಿಯಾಗಿ ವಸ್ತುಗಳು ಬಿದ್ದದ್ದರೆ ನಿಮ್ಮ ವ್ಯಕ್ತಿತ್ವವನ್ನೇ ಹಾಳು ಮಾಡುತ್ತವೆ. ಬಂದವರೆದುರು ನೀವು ಸಣ್ಣವರಾಗಿ ಬಿಡುತ್ತೀರಿ.
  • ನಿಮ್ಮ ಕುಟುಂಬ ಸದಸ್ಯರನ್ನೊಳಗೊಂಡ ಭಾವಚಿತ್ರವೊಂದಿದ್ದರೆ ಒಳಿತು. ಜತೆಗೆ ಸಂಗೀತ ಪರಿಕರಗಳು, ನಿಮ್ಮ ಸಾಧನೆಗೆ ಸಿಕ್ಕ ಮೆಡಲ್‌ಗಳು, ನಿಮ್ಮ ಅಪರೂಪದ ಕಲೆಕ್ಷನ್‌ಗಳನ್ನು ನೀಟಾಗಿ ಜೋಡಿಸಿಡಿ.
  • ಕಾಲಿಂಗ್ ಬೆಲ್ ಶಬ್ದ ಕರ್ಕಶವಾಗಿರುವುದು ಬೇಡ. ಬಟನ್ ಒತ್ತುವವರ ಮನದಲ್ಲಿ ನಿಮ್ಮ ಮನೆಯು ಅಚ್ಚಳಿಯದಂತೆ ನೆನಪಿನಲ್ಲುಳಿಯಬೇಕು. ಅಂಥ ಇಂಪು ಅದಕ್ಕಿರಬೇಕು.
  • ಸೋಪಾ ಅಥವಾ ಟೇಬಲ್ ಮೇಲಿನ ವಸ್ತುಗಳು ಯಾವಾಗಲೂ ನೀಟಾಗಿರಲಿ. ಸಾಧ್ಯವಾದರೆ ಅವುಗಳ ಮೇಲೆ ಟೇಬಲ್ ಕ್ಲಾಥ್ ಬಳಸಿ. ಕೊಳೆಯಾಗದಂತೆ ನೋಡಿಕೊಳ್ಳಿ.
- ಚನ್ನು ಮೂಲಿಮನಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com