

ಮನೆಯಲ್ಲಿ ಅತಿ ಇಷ್ಟವಾಗುವ ಭಾಗ ಅಡುಗೆಮನೆ. ಮನೆಯಷ್ಟೇ ಪ್ರಾಮುಖ್ಯತೆಯನ್ನು ಅಡುಗೆ ಮನೆಗೆ ನೀಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಕಿಚನ್ ಎಲ್ಲರ ಮನೆಗಳಲ್ಲೂ ಒಳಗಡೆಯೇ ಇರುತ್ತದೆ ತಾನೆ? ಅಡುಗೆ ಮನೆಯನ್ನು ನೀವು ಒಳಗಡೆ ಮಾತ್ರವಲ್ಲ. ಹೊರಗಡೆಯೂ ನಿರ್ಮಿಸಬಹುದು!
ಮನೆ ಹೊರಗೆ ಅಡುಗೆ ಮನೆನಾ ಎಂದು ಹುಬ್ಬೇರಿಸಬೇಡಿ. ಇದು ಚಿಕ್ಕ ಮನೆಗಳಲ್ಲಿ ಸಾಧ್ಯವಿಲ್ಲದ ಮಾತು. ದೊಡ್ಡ ಜಾಗ ಇದ್ದವರು ಪ್ರಯತ್ನ ಮಾಡಬಹುದು. ಮನೆ ಹೊರಗೆ ಕಿಚನ್ ಇದ್ದರೆ ಕೆಲವು ತೊಂದರೆಗಳು ಬರಬಹುದು ನಿಜ. ಆದರೆ ಅನುಕೂಲಗಳ ಪಟ್ಟಿ ದೊಡ್ಡದು.
ಹೊರಗೆ ಸಣ್ಣ ಪ್ರಮಾಣದ್ದಾದರೂ ಅಡುಗೆ ಮನೆ ನಿರ್ಮಿಸುವುದರಿಂದ ಬೇಸಿಗೆ ಕಾಲದಲ್ಲಿ ಅಡುಗೆ ಮಾಡುವಾಗ ಸೆಖೆಯಾಗುವುದಿಲ್ಲ. ಇನ್ನು ಮಳೆಗಾಲದಲ್ಲಿ ಪ್ರಕೃತಿ ಮಡಿಲಲ್ಲಿಯೇ ಊಟ ಮಾಡಿದಂತೆ ಭಾಸವಾಗುತ್ತದೆ. ಅಡುಗೆ ಮನೆ ನಿರ್ಮಿಸಿದ ಮೇಲೆ ಅದರ ಮೇಲೆ ಚಪ್ಪರದಂತೆ ತಗಡು ಅಥವಾ ಅದರ ರಕ್ಷಣೆಗೆ ಹಲಗೆಯಿಂದ ಮಾಡಿದ ಹಾಲ್ ನಿರ್ಮಿಸಿದರೆ ಒಳ್ಳೆಯದು. ಆಗ ಮಳೆ ನೀರು ಒಳಗಡೆ ಬರಲು ಅವಕಾಶ ಸಿಗುವುದಿಲ್ಲ. ಅಲ್ಲಿಯೇ ಬಿಸಿ ಬಿಸಿ ಅಡುಗೆ ಮಾಡಿಕೊಂಡು ರುಚಿಯಾದ ಊಟವನ್ನು ಊಟದೊಂದಿಗೆ ಸವಿಯಬಹುದು. ಅಷ್ಟೇ ಅಲ್ಲ ಸದಾ ಬೆಳಕು ಇರುವುದರಿಂದ ವಿದ್ಯುತ್ ಉಳಿತಾಯವನ್ನೂ ಮಾಡಬಹುದು.
ಮನೆಮಂದಿಯನ್ನೆಲ್ಲ ಒಗ್ಗೂಡಿಸುವ ಜಾಗವೂ ಅದಾಗಲಿದೆ. ನೋಡಿ, ಹೊರಗಡೆ ಪರಿಸರದಲ್ಲಿ ಊಟ ಮಾಡುವ ಸೌಭಾಗ್ಯ ನಿಮದು! ಕುಟುಂಬದ ಸದಸ್ಯರೊಂದಿಗೆ ಬೆಳಗ್ಗೆ, ಮುಸ್ಸಂಜೆ ವೇಳೆ ತಿಂಡಿಗಳನ್ನು ತಿನ್ನುತ್ತಾ ಹರಟೆ ಹೊಡೆಯಲು ಇದಕ್ಕಿಂತ ಒಳ್ಳೆಯ ಜಾಗ ಬೇಕಾ?
ಅಗತ್ಯತೆ ಅರಿವಿರಲಿ
ಹೊರ ಅಡುಗೆಮನೆ ನಿರ್ಮಾಣ ಮಾಡುವುದು ದೊಡ್ಡ ಮಾತಲ್ಲ. ಅದರ ಬಳಕೆ ಎಷ್ಟು ಪ್ರಮಾಣದಲ್ಲಿ ಆಗುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ಹಾಗಾದರೆ, ಹೊರ ಅಡುಗೆಮನೆಯನ್ನು ನಮ್ಮ ಜಾಗದಲ್ಲಿ ನಿರ್ಮಾಣ ಸಾಧ್ಯವಾ? ಸಾಧ್ಯವಿದ್ದಲ್ಲಿ ನಮ್ಮ ಕುಟುಂಬಕ್ಕೆ ಎಷ್ಟು ಅದರ ಅಗತ್ಯವಿದೆ? ದಿನಕ್ಕೆ ಎಷ್ಟು ಬಾರಿ ಹೊರ ಅಡುಗೆಮನೆಯಲ್ಲಿ ಊಟ ತಯಾರಿಸಬಹುದು? ಇದು ಮಕ್ಕಳಿಂದ ಸುರಕ್ಷಿತವಾಗಿದೆಯಾ? ಇಲ್ಲಿ ಯಾವ ವಸ್ತುಗಳನ್ನು ಸುರಕ್ಷಿತವಾಗಿ ಇಡಬಹುದು? ಹೊರ ಅಡುಗೆಮನೆ ಇರುವ ಜಾಗ ಎಲ್ಲರಿಗೂ ಇಷ್ಟವಾಗುತ್ತದೆಯಾ ಎನ್ನುವ ಹಲವಾರು ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿದ್ದರೆ, ಇದರ ನಿರ್ಮಾಣ ಮಾಡಬಹುದು. ಹೊರಅಡುಗೆ ಮನೆ ಇದೆ ಎಂದು ಒಳಭಾಗದಲ್ಲಿ ಕಿಚನ್ ಇಟ್ಟುಕೊಳ್ಳದೇ ಇರಬೇಡಿ. ಅಲ್ಲಿಯೂ ಪುಟ್ಟ ಅಡುಗೆ ಮನೆ ಇದ್ದರೆ ಒಳಿತು.
ಯಾವ ಸ್ಥಳ ಸೂಕ್ತ?
ಹೊರ ಅಡುಗೆ ಮನೆಯನ್ನು ನಿರ್ಮಿಸಲು ವರಾಂಡದಲ್ಲಿ ಯಾವ ಜಾಗ ಸೂಕ್ತ ಎಂಬ ಪ್ರಶ್ನೆಯೇ ಎಲ್ಲರನ್ನು ಕಾಡುತ್ತದೆ. ಮನೆಯ ಹಿಂಬದಿಯಲ್ಲಿ ಜಾಗವಿದ್ದರೆ ತುಂಬಾ ಸೂಕ್ತ. ಮುಖ್ಯದ್ವಾರ ಹೊರತುಪಡಿಸಿ ಮನೆಯ ಬಲ ಅಥವಾ ಎಡಬದಿ ಇದ್ದರೂ ಒಳ್ಳೆಯದು. ಇದರಿಂದ ಮನೆಯ ಹೊರಾಂಗಣಕ್ಕೂ ಧಕ್ಕೆ ಬಾರದು. ಜೊತೆಗೆ ಬಂದ ಅತಿಥಿಗಳನ್ನು ಸೆಳೆಯಲು ಇದು ಕೂಡ ಉತ್ತಮ. ಕೆಲವರು ಮನೆಯ ಮೇಲೆಯೇ ಹೊರ ಅಡುಗೆ ಮನೆ ನಿರ್ಮಿಸುತ್ತಾರೆ. ಇದು ಕೂಡ ಒಳ್ಳೆಯದು. ಇದರಿಂದ ಮನೆಯ ಹಿಂಬದಿ ಇನ್ನಿತರೆ ಕಡೆ ಜಾಗ ಉಳಿತಾಯವೂ ಆಗುತ್ತದೆ.
ಎಷ್ಟು ಖರ್ಚಾಗುತ್ತೆ?
ಸಾಮಾನ್ಯವಾಗಿ ಹೊರ ಅಡುಗೆ ಮನೆಗೆ ವೆಚ್ಚ ತುಂಬಾ ಕಡಿಮೆ. ನೀವು ಆರಿಸಿಕೊಳ್ಳುವ ಸ್ಟೈಲ್ ಮೇಲೆ ಇದು ನಿರ್ಧಾರವಾಗುತ್ತದೆ. ಅಷ್ಟೇ ಅಲ್ಲ, ನೀವು ವಾಸಿಸುತ್ತಿರುವ ಭೌಗೋಳಿಕ ವಾತಾವರಣ ಕೂಡ ವೆಚ್ಚವನ್ನು ನಿರ್ಧರಿಸುತ್ತದೆ. ಅತೀ ಶೀತವಾದ ಪ್ರದೇಶದಲ್ಲಿ ವಾಸಿಸುವ ಜನರು ಹೊರ ಅಡುಗೆ ಮನೆಗೆ ತುಂಬಾ ವೆಚ್ಚ ಮಾಡಬೇಕಾಗುತ್ತದೆ. ಉಷ್ಣ ಪ್ರದೇಶವಾದರೆ, ಸಾದಾ ಅಡುಗೆ ಮನೆ ಇದ್ದರೆ ಸಾಕು. ಇದಕ್ಕೆ ಕನಿಷ್ಠ 5000 ರಿಂದ 1 ಲಕ್ಷದವರೆಗೂ ಬೇಕಾಗಬಹುದು.
- ಬ್ರಹ್ಮಾನಂದ ಎನ್. ಹಡಗಲಿ