ಬಿಸಿ ಪರದೆ!

ಬಿಸಿ ಪರದೆ!
Updated on: 

ಈಗಾಗಲೇ ಚಳಿ ಕಾಲಿಟ್ಟಿದೆ. ಜನರಿಗಿಂತ ಮನೆಯ ಚಾವಣಿ, ಗೋಡೆಗಳಿಗೂ ಚಳಿ ಹೆಚ್ಚು ಕಾಡುತ್ತದೆ. ಹೀಗಾಗಿ ಮನೆಯ ಒಳಗೂ ತಂಪು ಹೆಚ್ಚಾಗಿ ನಮ್ಮ ಕಾಡುತ್ತದೆ.
ಸೂರ್ಯ ಹುಟ್ಟಿದಾಗಿನಿಂದ ಮುಳುಗುವವರೆಗೆ ಉಷ್ಣಾಂಶದಲ್ಲಿ ಸ್ವಲ್ಪ ಏರುಪೇರಾಗುತ್ತಲೇ ಇರುತ್ತದೆ. ರಾತ್ರಿ ಹೊತ್ತಂತೂ ಹೊರಗೆ ಬರಲೇಬಾರದು ಎನ್ನುವಂತಹ ವಾತಾವರಣ ಸೃಷ್ಟಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಹವನ್ನು ಹೇಗೆ ಬೆಚ್ಚಗೆ ಇಡುತ್ತೇವೆಯೋ ಮನೆಯನ್ನು ಸಹ ಗಾಳಿ, ಚಳಿಯಿಂದ ಬೆಚ್ಚಗೆ ಇಡುವುದು ಅಷ್ಟೇ ಮುಖ್ಯ.
ಹೀಗಾಗಿ ಚಳಿಗಾಲಕ್ಕೆ ಮನೆಯ ರಕ್ಷಣೆಗೆ ಇರುವುದು ಪರದೆಗಳು ಮಾತ್ರ. ಇವು ಮನೆಯನ್ನೂ, ನಮ್ಮನ್ನೂ ಪರೋಕ್ಷವಾಗಿ ಬೆಚ್ಚಗಿಡುತ್ತವೆ. ಈ ಪರದೆಗಳು ಧೂಳು ಕೂಡ ಒಳಗೆ ಬಾರದಂತೆ ತಡೆಹಿಡಿಯುತ್ತವೆ. ಹಾಗಾದರೆ, ಚಳಿಗಾಲಕ್ಕೆ ಎಂತಹ ಪರದೆಗಳಿದ್ದರೆ ಚೆನ್ನ?

ಉಲ್ಲನ್ ಪರದೆ
ಚಳಿಗಾಲದಲ್ಲಿ ಸಾಮಾನ್ಯವಾಗಿ ಗಾಳಿಯೂ ಹೆಚ್ಚಿರುತ್ತದೆ. ಈ ಗಾಳಿಯಿಂದಲೇ ಹೆಚ್ಚು ತಂಪಾದ ಅನುಭವ ನೀಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ಗಾಳಿ ಮನೆಯೊಳಗೆ ಸೋಕದಿರಲು ದಪ್ಪ ಬಟ್ಟೆಯ ಪರದೆ ಅಥವಾ ಉಲ್ಲನ್ ಪರದೆಗಳ ಬಳಕೆ ಅತ್ಯುಪಯುಕ್ತ. ಇವು ಗಾಳಿ, ಅದರೊಟ್ಟಿಗೆ ಬರುವ ಧೂಳಿನ ಕಣವನ್ನು ತಡೆ ಹಿಡಿಯುತ್ತದೆ. ಇದನ್ನು ಮನೆಯ ಮುಂಭಾಗ, ಬೆಡ್‌ರೂಮ್, ಮನೆಯ ಹಿಂಭಾಗಕ್ಕೂ ಕಟ್ಟಬಹುದು.

ಥರ್ಮಲ್ ಪರದೆಗಳು
ಚಳಿಗಾಲದಲ್ಲಿ ಮಾತ್ರವಲ್ಲದೆ ಬೇಸಿಗೆ ಕಾಲದಲ್ಲಿಯೂ ಥರ್ಮಲ್ ಪರದೆಗಳನ್ನು ಉಪಯೋಗಿಸಬಹುದು. ಆದರೆ, ಇದು ತಂಪನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ ಚಳಿಗಾಲಕ್ಕೆ ಹೆಚ್ಚು ಸೂಕ್ತ. ಥರ್ಮಲ್ ಪರದೆಯಲ್ಲಿ ಎರಡು ಪದರ ಇರುವುದು ಕೂಡ ಹೆಚ್ಚು ತಂಪು ತಡೆಯುವ ಸಾಮರ್ಥ್ಯ ಹೊಂದಿದೆ.

ರಬ್ಬರ್ ಲೈನಿಂಗ್ ಪರದೆಗಳು
ಈ ಬಗೆಯ ಪರದೆಗಳು ಕೂಡ ಹೆಚ್ಚು ಉಷ್ಣವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಹೀಗಾಗಿ ಚಳಿಗಾಲಕ್ಕೆ ಇವು ಹೇಳಿ ಮಾಡಿಸಿದಂತೆ. ಬಾಗಿಲಿನ ಅಳತೆಗೆ ತಕ್ಕದಾದ ರಬ್ಬರ್ ಲೈನಿನ ಪರದೆಗಳನ್ನು ಹಾಕಿದರೆ, ತಂಪು ಗಾಳಿಯನ್ನು ತಡೆದು ಮನೆಯೊಳಗೆ ಬೆಚ್ಚಗಿನ ವಾತಾವರಣವನ್ನು ನೀಡುತ್ತದೆ.

ವೆಲ್ವೆಟ್ ಪರದೆಗಳು
ಇಂತಹ ಪರದೆಗಳು ನೋಡಲು ಬಹುಸುಂದರ. ಅನೇಕ ಬಣ್ಣಗಳಲ್ಲಿ ದೊರೆಯುವ ಈ ಬಗೆಯ ಪರದೆಗಳು ಬೆಡ್‌ರೂಮ್‌ಗೆ ಅತಿಸೂಕ್ತ. ಒಳಾಂಗಣ ವಿನ್ಯಾಸಕ್ಕೂ ಮೆರಗು ನೀಡಬಲ್ಲವು. ಮನೆಯ ಮುಂಭಾಗಕ್ಕಿಂತ ಬೆಡ್‌ರೂಮ್, ಮನೆ ಗ್ರಂಥಾಲಯ, ಸಣ್ಣ ಕಚೇರಿಗೆ ಇವು ಹೆಚ್ಚುಸೂಕ್ತ.

ಟಾಪೆಸ್ಟ್ರಿ ಪರದೆಗಳು
ಮನೆಯೊಳಗೆ ಬರುವ ಶೀತಗಾಳಿಯನ್ನು ತಡೆದು, ಬೆಚ್ಚಗೆ ಇರುವಂತೆ ಮಾಡುತ್ತದೆ ಟಾಪೆಸ್ಟ್ರಿ ಪರದೆಗಳು. ಹೆಚ್ಚು ಎಂಬ್ರಾಯ್ಡರಿ ಇರುವುದರಿಂದ ಮನೆಯ ಒಳಾಂಗಣ ವಿನ್ಯಾಸವೂ ಹೆಚ್ಚು ಆಕರ್ಷಕವಾಗಲಿದೆ. ಇವುಗಳನ್ನು ಬಾಗಿಲಿಗಿಂತ ಕಿಟಕಿಗಳಿಗೆ ಬಳಸಿದರೆ ಉತ್ತಮ.

ಲೆನಿನ್ ಪರದೆಗಳು
ಲೆನಿನ್ ಬಟ್ಟೆಯಿಂದ ಮಾಡಲಾಗಿರುವ ಈ ಪರದೆಗಳು ಚಳಿ ಮತ್ತು ಬೇಸಿಗೆ ಕಾಲ ಎರಡಕ್ಕೂ ಪ್ರಯೋಜವಾಗುತ್ತದೆ. ಬೇಸಿಗೆಯಲ್ಲಿ ಮನೆಯನ್ನು ತಣ್ಣಗೆ ಇರಿಸಿದರೆ, ಚಳಿಯಲ್ಲಿ ಬೆಚ್ಚನೆ ಅನುಭವ ನೀಡುತ್ತದೆ.

ಆದರೆ, ಇವೆಲ್ಲ ಪರದೆಗಳ ಜೊತೆಗೆ, ಚಳಿಗಾಲದಲ್ಲಿ ನಿಮಗೆ ಇವುಗಳಿಗಿಂತಲೂ ಹೆಚ್ಚು ಉಪಯುಕ್ತ ಎನಿಸಿದ ಪರದೆಗಳು ಇದ್ದರೆ, ಅವುಗಳನ್ನು ಬಳಸಬಹುದು. ಉತ್ತರ ಭಾರತದಲ್ಲಿ ಮನೆಯ ಮುಂಬಾಗಿಲಿಗೆ ಬಿದುರಿನಿಂದ ಮಾಡಿದ ಪರದೆಗಳನ್ನು ಜೋತು ಬಿಟ್ಟಿರುತ್ತಾರೆ. ಇವು ಕೂಡ ಚಳಿಯನ್ನು ತಡೆದು, ಹೆಚ್ಚು ಉಷ್ಣವನ್ನು ಒಳಗೆ ಸೂಸುತ್ತವೆ ಎನ್ನುವ ಕಾರಣಕ್ಕೆ.

- ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com