ಸುಖ ನಿದ್ದೆಗೆ ಸುಂದರ ಕೋಣೆ

ಸುಖ ನಿದ್ದೆಗೆ ಸುಂದರ ಕೋಣೆ
Updated on: 

ನಾವಿರುವ ಮನೆಯೊಂದು ಸುಂದರವಾಗಿದ್ದರೆ ಮನಕ್ಕೆ ಅದುವೇ ಮಂದಾರ. ಪ್ರತಿ ಕ್ಷಣವೂ ಸೂಸುವುದು ನಮಗೆ ಮಧುರ ಭಾವ. ಆಗ ಆಗುವುದು ನಮ್ಮ ಬಾಳು ಬಂಗಾರ.
ಹೌದು. ಮನುಷ್ಯನಿಗೆ ಗಾಳಿ, ನೀರು, ಆಹಾರ ಬಿಟ್ಟರೆ ಮನೆಯೇ ಪ್ರಮುಖ. ಅದು ಮನಕ್ಕೆ ಮುದ ನೀಡುವಂತಿದ್ದರೆ ಸಾಕು, ದಿನದಿನವೂ ಹೊಸತೇ. ಅದಕ್ಕೇ ಕೋಟ್ಯಂತರ ರುಪಾಯಿ ವ್ಯಯಿಸಿಯಾದರೂ ಸರಿ, ಮನಸ್ಸಿಗೆ ನೆಮ್ಮದಿ ತಂದುಕೊಳ್ಳಲು ಎಲ್ಲರೂ ಬಯಸೋದು.
ದಿನದ ಅರ್ಧ ಭಾಗವನ್ನು ನಾವು ಮನೆಯಿಂದಾಚೆಗೆ ಕಳೆದದರೆ, ಇನ್ನುಳಿದ ಅರ್ಧ ಭಾಗವನ್ನು ಮನೆಯಲ್ಲಿ ಅದರಲ್ಲೂ 'ಬೆಡ್ ರೂಂ'ನಲ್ಲಿ ಕಳೆಯುತ್ತೇವೆ. ಹಾಗಾದರೆ ಈ ಮಲಗುವ ಕೋಣೆ ಹೇಗಿರಬೇಕು ಎಂದು ನೀವೇ ಯೋಚಿಸಿ.

ಅದಕ್ಕಾಗಿ ಕೆಲ ಪೂರ್ವ ಸಿದ್ಧತೆ, ತಯಾರಿಯನ್ನೂ ಮಾಡಿಕೊಳ್ಳಬೇಕಲ್ಲವೇ? ಈ ಬೆಡ್ ರೂಂ ಒಳಗೆ ಸೇರಿದರೆ ನಮ್ಮ ಮನದಲ್ಲಿ ಎಂತಹ ಭಾವ ಮೂಡಬೇಕು, ಎಷ್ಟು ಮುದವನ್ನು ನೀಡಬೇಕು, ಅದನ್ನು ಹೇಗೆ ಅಲಂಕರಿಸಬೇಕು, ಅದರೊಂದಿಗೆ ನಮ್ಮ ಸಂಬಂಧ ಹೇಗಿರಬೇಕು?

ಬೆಡ್ ರೂಂ ಹೀಗಿದ್ದರೆ ಚೆನ್ನ

  • ಸುಖನಿದ್ರೆಗೆ ಜಾರಲು ಕೋಣೆಯು ಶುಭ್ರವಾಗಿರಲಿ, ಎಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಕಬೋರ್ಡ್, ಅಲ್ಮೇರಾ ಮತ್ತಿತರ ವಸ್ತು ಸಂಗ್ರಾಹಕಗಳಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಿ. ಬಟ್ಟೆ ಮತ್ತಿತರ ವಸ್ತುಗಳು ಮನಕ್ಕೆ ಗೋಜಲು ಎನ್ನಿಸದಂತಿರಲಿ.
  • ಮಲಗುವ ಕೋಣೆಯಿಂದ ಟಿ.ವಿ ದೂರವಿದ್ದರೆ ಒಳಿತು. ಇಲ್ಲಿ ಗಾಢನಿದ್ರೆಗೆ ಅದು ಅಡ್ಡಿಯುಂಟು ಮಾಡುವ ಸಂಭವ ಹೆಚ್ಚು. ಒಂದು ವೇಳೆ ಮನಕ್ಕೆ ಮುದ ನೀಡುವ ಸಂಗೀತ ಬೇಕು ಎಂದಾದರೆ ಎಂ.ಪಿ.3 ಪ್ಲೇಯರ್ ಅಥವಾ ಯಾವುದಾದರೂ ಆಡಿಯೋ ಸಿಸ್ಟಂ ಮಾತ್ರ ಅಳವಡಿಸಿಕೊಳ್ಳಿ.
  • ವಿಶಾಲವಾದ ಕಾಟ್, ಬೆಡ್ ಇರಲಿ. ಮೆತ್ತನೆಯ ಹೊದಿಕೆ, ದಿಂಬು, ಹಾಸಿಗೆಯಿದ್ದರೆ ಬೇಗ ನಿದ್ರೆಗೆ ಜಾರಬಹುದು. ಇದು ಮನಸ್ಸಿಗೆ ಹಿತವನ್ನುಂಟು ಮಾಡುತ್ತದೆ ಕೂಡ. ಇವೆಲ್ಲ ಹಾಸಿಗೆಗಳನ್ನು ಆಗಿಂದಾಗ್ಗೆ ಸ್ವಚ್ಛಗೊಳಿಸುತ್ತಿರಿ. ಇವುಗಳು ಶಿಷ್ಟ ಮತ್ತು ಸಭ್ಯ ಬಣ್ಣವಾಗಿದ್ದರೆ ಒಳಿತು.
  • ಇನ್ನು ಕಾಟ್ ಪಕ್ಕದಲ್ಲೇ ಅಂದರೆ ನಿಮ್ಮ ಕೈಗೆಟುವಂತೆ ಫೋನ್, ಲೈಟ್, ಫ್ಯಾನ್ ಸ್ವಿಚ್‌ಗಳನ್ನು ಅಳವಡಿಸಿಕೊಳ್ಳಿ. ಕೆಲವರಿಗೆ ಅತಿಯಾದ ಬೆಳಕು ಇದ್ದರೆ ನಿದ್ರೆ ಬಾರದು, ಅಂಥವರು ಬಣ್ಣಬಣ್ಣದ ಫೂಟ್ ಲೈಟ್‌ನ್ನು ಹಾಕಿಕೊಳ್ಳುವುದು ಉತ್ತಮ.
  • ಬೆಡ್ ರೂಂಗೆ ಹೊಂದಿಕೊಂಡೇ ಬಾತ್ ರೂಂ ಇರಲಿ. ಅದರ ನೀರು ಮಲಗುವ ಕೋಣೆಯೊಳಗೆ ಬಾರದಂತೆ, ಬಾಗಿಲನ್ನು ಬಿಗಿಯಾಗಿರುವಂತೆ ಇಟ್ಟುಕೊಳ್ಳಿ. ಕೊಠಡಿಯಲ್ಲಿ ಏರ್ ಫ್ರೆಷನರ್ ಬಳಸಿ ಮತ್ತು ವಾತಾಯನ ವ್ಯವಸ್ಥೆಯಿರಲಿ.
  • ಮಲಗುವಾಗ ಬೆಡ್ ರೂಂ ಒಳಗೆ ಬೆಳಕನ್ನು ನಿಯಂತ್ರಿಸಲು ಕಿಟಕಿಗಳಿಗೆ ಗಾಢ ಬಣ್ಣದ ಪರದೆಗಳನ್ನು ಅಳವಡಿಸಿ. ಇವು ಎಲ್ಲ ಬೆಳಕನ್ನು ನಿಯಂತ್ರಿಸುತ್ತವೆ. ಆಗ ಕೊಠಡಿ ಪೂರ್ಣ ಕತ್ತಲಾಗುತ್ತದೆ. ಕಿಟಕಿಗಳು ಮತ್ತು ಬಾಗಿಲಿನ ಕೊಂಡಿ(ಲಾಕ್)ಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ.
  • ಇನ್ನು ಆಯಾ ಕಾಲಮಾನಕ್ಕೆ ತಕ್ಕಂತೆ ಅಂದರೆ ಚಳಿಗಾಲದಲ್ಲಿ ಹೀಟರ್ ಮತ್ತು ಬೇಸಿಗೆ ಏರ್ ಕೂಲರ್ ಅಥವಾ ಏರ್ ಕಂಡಿಷನರ್ ಇಟ್ಟುಕೊಳ್ಳಿ. ಇದರಿಂದ ತಾಪಮಾನ ನಿಯಂತ್ರಿಸಬಹುದು. ಆಗ ಆರಾಮದಾಯಕ ನಿದ್ರೆ ಮಾಡಲು ಅನುಕೂಲವಾಗುತ್ತದೆ.
  • ಬೆಡ್ ರೂಂನ ಗೋಡೆಗಳಿಗೆ ಗಾಢವಾದ ಬಣ್ಣವನ್ನು ಬಳಸಬೇಡಿ. ಇದು ಸಭ್ಯವಾಗಿದ್ದರೆ ಮನಸ್ಸಿಗೆ ಮುದ ನೀಡುತ್ತದೆ. ಅಲ್ಲದೆ ತಮ್ಮ ನೆಚ್ಚಿನ ನಾಯಕರು, ಆದರ್ಶವಾಗಿಟ್ಟುಕೊಂಡ ವ್ಯಕ್ತಿಗಳು ಇಲ್ಲವೆ ಸುಂದರ ಕಲೆಯುಳ್ಳ ಚಿಕ್ಕ- ಚೊಕ್ಕವಾದ ಪೋಸ್ಟರ್, ಕಲಾಕೃತಿಯನ್ನು ಇಟ್ಟುಕೊಳ್ಳಿ.
  • ಮಲಗುವ ಕೋಣೆಯಲ್ಲೊಂದು ಟಿಪಾಯಿ, ಮೇಕಪ್ ಸ್ಟ್ಯಾಂಡ್ ಇರಲಿ. ಇದರಿಂದ ಕೋಣೆಯನ್ನು ಶುಭ್ರವಾಗಿಟ್ಟುಕೊಳ್ಳಲು ಮತ್ತು ಸೌಂದರ್ಯ ಹೆಚ್ಚಿಸಿಕೊಳ್ಳಲು ಸಾಧ್ಯ.
  • ಕೋಣೆಯಲ್ಲಿ ಒಂದು ಝೂಮರ್ ಹಾಕಿ, ಕುಳಿತುಕೊಳ್ಳಲು ಅಂದವಾದ ಸೋಫಾ, ಕುರ್ಚಿಗಳನ್ನು ಇಟ್ಟುಕೊಳ್ಳಿ. ಇವುಗಳಿಂದಲೂ ಕೋಣೆಯ ಸೌಂದರ್ಯ ಹೆಚ್ಚುತ್ತದೆ.
  • ಇವೆಲ್ಲ ಅಂಶಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆ 'ಸುಖ'ನಿದ್ರೆ ಆಗುವುದರಲ್ಲಿ ಸಂದೇಹವಿಲ್ಲ. ಇದರಿಂದ ಪ್ರತಿನಿತ್ಯ ನವಯೌವ್ವನ ನಿಮ್ಮದಾಗುತ್ತದೆ. ಎಷ್ಟೇ ದಣಿವಾಗಿ ಬಂದರೂ ಕೂಡ ನಿದ್ರೆಗೆ ಜಾರುತ್ತೀರಿ ಹದುಳವಾಗಿ. ಮತ್ತೆ ನವ ದಿನ ನಿಮ್ಮದಾಗಿರುತ್ತದೆ.
- ವೀರೇಶ ಜಿ. ಮಠ
mathvg@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com