

ಮೊದಲಿಗೆ ಮನೆಯನ್ನು ಆಹ್ವಾನಿಸುವುದು ಹೊರ ಆವರಣದ ಗೋಡೆ. ಈ ಗೋಡೆಯನ್ನು ಬೆಲ್ಲ ಸುಣ್ಣ, ಮಣ್ಣು ಬೆರೆಸಿ ಕಟ್ಟಲಾಗಿದೆ. ಈಗಲೂ ಒಂದು ಸಣ್ಣ ಬಿರುಕು ಕಾಣದಿರುವುದು ಇದರ ಗಟ್ಟಿತನಕ್ಕೆ ಸಾಕ್ಷಿ. ಇದುವೇ ಬೆಳ್ತಂಗಡಿ ಸಮೀಪವಿರುವ ಕೊಡೆಲ್‌ನ ಸುರೇಶ್ ಬಲ್ಲಾಳ್‌ರ ಬಲ್ಲಾಳ್ ಭಾಗ್ ಮನೆ.
ಇನ್ನು ಸ್ವಲ್ಪ ಮುನ್ನಡೆದಾಗ ವಿಶಾಲವಾದ ಹೊರ ಜಗುಲಿ ನಮ್ಮನ್ನು ಬರಮಾಡಿಕೊಳ್ಳುತ್ತದೆ. ಹೊರಜಗುಲಿ ದಾಟಿದರೆ, ಹೊರ ಚಾವಡಿ ಕಾಣಸಿಗುತ್ತದೆ. ಇಲ್ಲಿ ಹಲಸಿನ ಮರದಿಂದ ನಿರ್ಮಿಸಿದ ನಾಲ್ಕು ಬೃಹದಾಕಾರದ ಕಂಬಗಳು ಆಕರ್ಷಣೀಯ. ಒಂದೊಂದು ಕಂಬ ವೈವಿಧ್ಯಮಯ ಶಿಲ್ಪ ಹೊಂದಿದೆ. ಕಲಾ ಕುಸುರಿ ಒಂದೇ ತೆರನಾಗಿ ಕಂಡರೂ, ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ವಿನ್ಯಾಸವನ್ನು ತಳೆದಿದೆ. ಇವು ನೋಡುಗರನ್ನುಬೆರಗುಗೊಳಿಸದೆ ಇರದು.
ಜತೆಗೆ ಚಾವಡಿಗೆ ಕಾವಿ ಹಾಕಿ ತಿದ್ದಿ ತೀಡಲಾಗಿದ್ದು, ಈಗಲೂ ಕನ್ನಡಿಯ ಹಾಗೆ ಹೊಳೆಯುತ್ತದೆ. ಮಧ್ಯಭಾಗದಲ್ಲಿ ದೊಡ್ಡ ಪ್ರಮಾಣದ ಬಾಗಿಲು. ಒಂದೇ ಮರದಿಂದ ಮಾಡಲಾಗಿದೆ.
ಮನೆಯಲ್ಲಿರುವ ದೊಡ್ಡದಾದ ಮಂಚವನ್ನು ಹೊತ್ತು ನಿಂತ ಚಾವಡಿ, ದೇವರ ಕೋಣೆ ಎಲ್ಲವೂ ಮನೆಗೆ ಹೇಳಿ ಮಾಡಿಸಿದಂತಿದ್ದು, ನಮಗೆ ಈಗ ಇಂಥ ಮನೆಯನ್ನು ಕಟ್ಟಲು ಸಾಧ್ಯವೆ ಎಂಬ ಉದ್ಗಾರ ಬರುತ್ತದೆ.
ಆಗಿನ ಕಾಲದಲ್ಲಿ ಮಹಡಿ ಮನೆಯನ್ನೂ ಅದ್ಭುತವಾಗಿ ಕಟ್ಟುತ್ತಿದ್ದರು ಎಂಬುದಕ್ಕೆ ಈ ಬಲ್ಲಾಳ್ ಭಾಗ್ ಸಾಕ್ಷಿಯಾಗಿ ನಿಂತಿದೆ. ಮಹಡಿಯ ಹಾಲ್‌ನಲ್ಲಿ ಸುಮಾರು 400ರಿಂದ 500 ಜನ ಕೂರಬಹುದಾದಷ್ಟು ವಿಶಾಲ. ಈ ಹಾಲ್ ಪಕ್ಕದಲ್ಲಿಯೇ ವಸ್ತುಗಳನ್ನು ಇಟ್ಟಿದ್ದಾರೆ. ಅವು ಸುಮಾರು 400 ವರ್ಷಗಳಷ್ಟು ಹಳೆಯವು.
ಅಬ್ಬಾ ಅಡುಗೆಮನೆ!
ಎರಡನೆಯ ಮಹಡಿಯಿಂದ ಇಳಿಯಲು ಏಣಿಗಳು ಆಸರೆಯಾಗಿವೆ. ಅಲ್ಲಿ ಇಳಿದಾಗ ಎರಡು ಅಡುಗೆ ಮನೆಗಳಿವೆ. ಮೊದಲನೆಯದ್ದು 40 ಜನಕ್ಕೆ ಸಿದ್ಧಪಡಿಸುವ ಅಡುಗೆ ಮನೆ. ಅದರ ಪಕ್ಕದಲ್ಲಿ ಬೃಹತ್ತಾದ ಅಡುಗೆ ಮನೆಯಿದೆ. ಇಲ್ಲಿ 400ರಿಂದ 500 ಜನರಿಗೆ ಅಡುಗೆ ಸಿದ್ಧಪಡಿಸಬಹುದು. ಸ್ನಾನದ ಗೃಹವೂ ದೊಡ್ಡದಿದೆ. ಇದರ ಉದ್ದವೇ 24 ಅಡಿ.
ಅಂದಹಾಗೆ ಈ ಮನೆಯ ಗೋಡೆಯನ್ನು ತೆಳುವಾದ ಕೆಂಪು ಕಲ್ಲಿನಿಂದ, ಮಣ್ಣಿನ ಗಾರೆ ಬಳಸಿಕೊಂಡು ಕಟ್ಟಿದ್ದಾರೆ. ವಿಚಿತ್ರವೆಂದರೆ, ಈಗಿನ ಕಾಂಕ್ರೀಟ್‌ಗಿಂತಲೂ ಅದು ಇನ್ನೂ ಗಟ್ಟಿಯಾಗಿದೆ.
ಬಲ್ಲಾಳ್ ಹೈಲೈಟ್ಸ್