

ಭಾರತದ ನೃತ್ಯ ಪ್ರಕಾರಗಳಲ್ಲಿ ಭರತನಾಟ್ಯಕ್ಕೆ ಉನ್ನತ ಸ್ಥಾನ. 'ನೃತ್ಯ ಸೇವಾ ಅವಧಾರಯ' ಎಂದು ಹೇಳಿರುವುದು ದೇವರಿಗೆ ನಾಟ್ಯ ಸೇವೆಯ ಮೇಲೆ ಪ್ರೀತಿ ಎಂಬ ಕಾರಣಕ್ಕೇ. ಮಲೆನಾಡ ಮಡಿಲು ಶಿರಸಿಯ ಹೆಮ್ಮೆಯ ಕಲಾವಿದೆ ಮಂಜುಶ್ರೀ ವಿ. ಹೀಗೆ ದೇವರ ಪ್ರೀತಿಗೆ ಪಾತ್ರಳಾದವಳು.
ವೆಂಕಟ್ರಮಣ ಹಾಗೂ ರೇಣುಕಾ ಅವರ ಪುತ್ರಿ ಮಂಜುಶ್ರೀ ಆರನೇ ವಯಸ್ಸಿಗೇ ನೃತ್ಯ ಶುರುಹಚ್ಚಿಕೊಂಡಳು. ಇಂದು ಭರತನಾಟ್ಯ, ಕೂಚುಪುಡಿ, ಮೋಹಿನಿ ಅಟ್ಟಂ ಕಲಾಪ್ರಾಕಾರಗಳಲ್ಲಿ ಪ್ರಾವೀಣ್ಯತೆ ಪಡೆದು ಕಲಾಪ್ರಸಾರದಲ್ಲಿ ನಿರತರಾಗಿದ್ದಾರೆ.
ವಿದುಷಿ ಸೀಮಾ ಭಾಗವತ, ಸಹನಾ ಭಟ್, ಸತ್ಯಭಾಮಾ ಕುಟ್ಟಿ ಮತ್ತು ವಿದ್ವಾನ್ ಜನಾರ್ಧನ ಅಯ್ಯರ್ ಗರಡಿಯಲ್ಲಿ ಪಳಗಿದ ಇವರು, 2006ರಲ್ಲಿ ರಂಗಪ್ರವೇಶ ಮಾಡಿದಾಗಿಂದಲೂ ಸಾಧನೆಯ ಹೊಸ ಹೊಸ ಮುಖಗಳನ್ನು ನೋಡುತ್ತಲೇ ಹೋಗುತ್ತಿದ್ದಾರೆ.
ಪ್ರಖ್ಯಾತ ಮೈಸೂರು ದಸರಾ, ಬನವಾಸಿಯ ಕದಂಬೋತ್ಸವ, ಕರಾವಳಿ ಉತ್ಸವ, ಚಾಲುಕ್ಯೋತ್ಸವ, ಶರನ್ನವರಾತ್ರಿ ಉತ್ಸವ, ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ, ಗುಜರಾತಿನ ಸಾಂಸ್ಕೃತಿಕ ಸಮ್ಮೇಳನ, ಕೇರಳದ ಕಿಂಕಿಣಿ ಉತ್ಸವ, ಮುಂಬೈನ ಮಲ್ಹಾರ ಉತ್ಸವ, ಜೈಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಉತ್ಸವ, ಭುವನೇಶ್ವರದ ಉತ್ಕರ್ಷ ಉತ್ಸವಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ಈಕೆ ಹೈದರಾಬಾದಿನಲ್ಲಿ ನಡೆದ ರಾಷ್ಟ್ರೀಯ ನೃತ್ಯೋತ್ಸವದಲ್ಲಿ ಬಂಗಾರದ ಪದಕವನ್ನೂ ಪಡೆದಿದ್ದಾರೆ. ಬಹರೈನ್ ಮತ್ತು ಕುವೈತ್ನಲ್ಲಿ ನಡೆದ ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನಗಳಲ್ಲಿ ಪಾಲ್ಗೊಂಡು ವಿದೇಶಿ ನೆಲದಲ್ಲೂ ಅಪ್ಪಟ ಭಾರತೀಯ ಕಲೆಯನ್ನು ಪ್ರಚುರಪಡಿಸಿದ್ದಾರೆ.
ಮಂಜುಶ್ರೀಯ ಕಲಾಸಾಧನೆಗೆ ಆರ್ಯಭಟ ಪ್ರಶಸ್ತಿ, ಡಾ. ಪಂಡಿತ ಪುಟ್ಟರಾಜ ಯುವ ಪ್ರತಿಭಾ ಪುರಸ್ಕಾರ ರಾಜ್ಯ ಪ್ರಶಸ್ತಿ, ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಅಮೋಘವರ್ಷ ನೃಪತುಂಗ ಪ್ರಶಸ್ತಿ, ಸಾಧನಾ ರತ್ನ, ನಾಟ್ಯ ಮಯೂರಿ, ಕರುನಾಡ ಸಿರಿ, ಕರುನಾಡಿನ ಹೆಮ್ಮೆಯ ರತ್ನ ಮತ್ತು ಜಗಜ್ಯೋತಿ ಶ್ರೀ ಬಸವೇಶ್ವರ ಸದ್ಭಾವನಾ ಪ್ರಶಸ್ತಿಗಳು ಮುಡಿಗೇರಿವೆ.
ಸದ್ಯ ಮಂಜುಶ್ರೀ ನೂಪುರ ನೃತ್ಯ ಕುಟೀರ ಸಂಸ್ಥೆಯ ಸ್ಥಾಪಕ ನಿರ್ದೇಶಕಿಯಾಗಿ ಇನ್ನೂರಕ್ಕೂ ಹೆಚ್ಚು ನೃತ್ಯಾಸಕ್ತ ವಿದ್ಯಾರ್ಥಿಗಳ ಕಾಲ್ಗೆಜ್ಜೆ ನಾದದ ಸದ್ದನ್ನು ಶೃತಿಗೊಳಿಸುವ ಹೊಣೆ ಹೊತ್ತಿದ್ದಾರೆ. ಬಡ, ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೂ ನೃತ್ಯಾಭ್ಯಾಸ ಮಾಡಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬುದು ಮಂಜುಶ್ರೀಯವರ ಈಗಿನ ಕನಸು. ಸಾಕಾರವಾಗಲೆಂದು ಹಾರೈಸೋಣ ಅಲ್ಲವೇ?
- ಗುರುಪ್ರಸಾದ ಹೆಗಡೆ