

ವೈಟ್‌ಹೌಸ್ ಅನ್ನೋದು ಅಮೆರಿಕ ಅಧ್ಯಕ್ಷರ ನಿವಾಸ ಎಂದು ಗೊತ್ತು. ಗ್ರೀನ್‌ಹೌಸ್ ಬಗ್ಗೆಯೂ ಕೇಳಿಯೇ ಇರ್ತೀರಿ. ಮೈಸೂರಿನಲ್ಲಿರುವ ಈ 'ಹಸಿರು ಮನೆ' ಕೃಷಿಗೆ ಬಳಸುವಂಥದ್ದಲ್ಲ, ಇಡೀ ಮನೆಯೇ ಹಸಿರುಮಯ!
ವಾಣಿವಿಲಾಸ ಮೊಹಲ್ಲಾ 3ನೇ ಮುಖ್ಯ ರಸ್ತೆ, 8ನೇ ಕ್ರಾಸಿನಲ್ಲಿರುವ ಮನೆ ನಂ.2737. 'ಬಯಲು ಬಸವೇಶ್ವರ ನಿಲಯ' ಎಂದು ಆ ಮನೆಗೆ ಹೆಸರಿದೆ. ಆದರೆ ಅದು ಮುಚ್ಚಿ ಹೋಗುವಂತೆ ಇಡೀ ಮನೆಯ ಗೋಡೆಯನ್ನು ಹಸಿರು ಬಳ್ಳಿಗಳು ಆವರಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿವೆ. ಹೀಗಾಗಿ ಈ ಮನೆ 'ಗ್ರೀನ್‌ಹೌಸ್' ಎಂದೇ ಪ್ರಸಿದ್ಧವಾಗಿದೆ. ಇದು ಡಾ.ಸಿ. ಶರತ್‌ಕುಮಾರ್, ಡಾ.ರಾಜೇಶ್ವರಿ ಅವರ ನಿವಾಸ.
80x100 ಅಳತೆಯ ಈ ಮೂಲೆ ನಿವೇಶನದಲ್ಲಿ ಮನೆಯ ಕಟ್ಟಡ ಇರುವುದು 30್ಢ50 ರಲ್ಲಿ ಮಾತ್ರ. ತಾರಸಿ ಮನೆ. ನಾಲ್ಕು ರೂಂಗಳು, ಒಂದು ಹಾಲ್, ಒಂದು ಅಡುಗೆ ಕೋಣೆ ಇದೆ. ಮನೆಯ ಸುತ್ತ ಕೈತೋಟವಿದೆ. ಕಿಟಕಿ ಹೊರತುಪಡಿಸಿ ಇತರೆ ಗೋಡೆಯನ್ನು ಹಸಿರು ಗಿಡಬಳ್ಳಿಗಳು ಆವರಿಸಿಕೊಂಡಿವೆ. ಇದರಿಂದ ಮನೆಯಲ್ಲಿ ಸದಾ ತಂಪಾದ ವಾತಾವರಣ. ಬೇಸಿಗೆಯಲ್ಲಿ ತಣ್ಣನೆಯ ಅನುಭವ. ಈ ಮನೆಯಲ್ಲಿ ಫ್ಯಾನ್, ಕೂಲರ್ ಬಳಕೆ ಕಡಿಮೆ. ಗಾಳಿ- ಬೆಳಕು ಚೆನ್ನಾಗಿದೆ. ಅದಕ್ಕೆ ತಕ್ಕಂತೆ ಬಳ್ಳಿಗಳನ್ನು ಬೆಳೆಸಲಾಗುತ್ತಿದೆ. ಮನೆ ನಿರ್ಮಾಣವಾಗಿ 12 ವರ್ಷಗಳಾಗಿವೆ. 10 ವರ್ಷಗಳಿಂದ ಈ ಹಸಿರು ಬಳ್ಳಿಗಳಿವೆ. ಹೀಗಾಗಿ ಮನೆಯ ಹೊರಗೋಡೆಗೆ ಪೇಂಟಿಂಗ್ ಮಾಡಿಸಬೇಕಾದ ಅಗತ್ಯವಿಲ್ಲ.
ಮನೆಯ ಒಳಗೆ ಮತ್ತು ಕಾಂಪೌಂಡ್ ಸುತ್ತಮುತ್ತ 400ಕ್ಕೂ ಹೆಚ್ಚು ತಾಳೆಗಿಡಗಳನ್ನು ಬೆಳೆಸಲಾಗಿದೆ. ಸೀಗೆ, ಬಾಳೆ, ಬಾಜಿ, ಮಲ್ಲಿಗೆ ದಾಸವಾಳ, ಅಶೋಕ ಗಿಡಗಳು ಇವೆ. ಹಸಿರು ಹುಲ್ಲನ್ನು ಸಹ ಬೆಳೆಸಲಾಗಿದೆ. ಬೋಗನ್‌ವಿಲ್ಲಾ ಗಿಡಗಳೂ ಇವೆ. ಪುಟ್ಟಪುಟ್ಟದಾದ ಈ ಬಳ್ಳಿಗಳಿಗೂ ಮನೆಯ ಗೋಡೆಗೂ ಕರುಳುಬಳ್ಳಿಯ ಸಂಬಂಧ. ಏಕೆಂದರೆ ಈ ಬಳ್ಳಿಗಳು ಗೋಡೆಗೆ ಅಷ್ಟರಮಟ್ಟಿಗೆ ಅಂಟಿಕೊಂಡಿವೆ. ಯಾವುದೇ ಅಂಟು ಹಾಕಿದರೂ ಇಷ್ಟೊಂದು ನಂಟು ಬಾರದು. ಈ ರೀತಿಯ ಬಳ್ಳಿಗಳನ್ನು ಹಬ್ಬಿಸಬೇಕಾದರೆ ಗೋಡೆ ಮೃದುವಾಗಿರಬಾರದು, ಒರಟಾಗಿರಬೇಕು ಎನ್ನುತ್ತಾರೆ ವೈದ್ಯ ದಂಪತಿ. ಗೋಡೆಗಳಿಗೆ ಹಾಗೂ ಅರೆ ಛಾವಣಿಗೆ ಹಸಿರುಬಳ್ಳಿಗಳು ಹಬ್ಬಿರುವುದನ್ನು ನೋಡಲು ಎರಡು ಕಣ್ಣೂ ಸಾಲದು.
ಹಸಿರು ಬಳ್ಳಿಗಳಿಂದಾಗಿ ಗೋಡೆಗೆ ರಕ್ಷಣೆ ಸಿಗುತ್ತಿದೆ. ಶಬ್ದ ಮತ್ತು ವಾಯುಮಾಲಿನ್ಯ ನಿಯಂತ್ರಣವಾಗುತ್ತಿದೆ. ಮೂಲೆ ಮನೆ, ಜತೆಗೆ ಸಮೀಪದಲ್ಲಿಯೇ ವಾಣಿಜ್ಯ ಸಂಕೀರ್ಣಗಳಿವೆ. ಹೀಗಾಗಿ ವಾಹನಗಳ ಭರಾಟೆ ಹೆಚ್ಚು. ಇದರಿಂದ ಧೂಳು ಹೆಚ್ಚು. ಆದರೆ ಬಳ್ಳಿಗಳು ಈ ಧೂಳು ಮನೆ ಒಳಗೆ ಹೋಗದಂತೆ ತಡೆಯುತ್ತಿವೆ.
ಹಸಿರಿನ ಬಗ್ಗೆ ಕಳಕಳಿಯುಳ್ಳ ಈ ವೈದ್ಯ ದಂಪತಿ ಸಂಪರ್ಕ: 9980525100.
ಗಿಡಗಳಿಂದಲೇ ಗೊಬ್ಬರ
ಗಿಡಬಳ್ಳಿಗಳಿಂದ ಉದುರುವ ಎಲೆ ಮತ್ತಿತರ ತ್ಯಾಜ್ಯವನ್ನು ಗೊಬ್ಬರ ಮಾಡಿ, ಮತ್ತೆ ಗಿಡಗಳಿಗೆ ಹಾಕಲಾಗುತ್ತದೆ. ಮಳೆ ನೀರು ಕೊಯ್ಲ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ತ್ಯಾಜ್ಯ ನೀರನ್ನು ಮರು ಬಳಕೆ ಮಾಡಿಕೊಂಡು ಗಿಡಬಳ್ಳಿಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿದಿನ ಇವುಗಳ ನಿರ್ವಹಣೆಗೆ ಓರ್ವ ಮಾಲಿಯನ್ನು ನೇಮಿಸಿಕೊಳ್ಳಲಾಗಿದೆ. ಇತರೆ ಮನೆಗಳಿಗೂ ಈ ಮನೆಗೂ ಉಷ್ಣಾಂಶದಲ್ಲಿ 6 ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸ ಕಂಡು ಬರುತ್ತದೆ. ಪಕ್ಕದ ಮನೆಯಲ್ಲಿ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇದ್ದರೆ ಈ ಮನೆಯಲ್ಲಿ 24 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
- ಅಂಶಿ ಪ್ರಸನ್ನಕುಮಾರ್
ಚಿತ್ರ- ಎಸ್. ಉದಯಶಂಕರ್