ಏಕಾಂತವ್ಯಾತಕೆ? ಆತ ಮೊದಲಿನಂತಿಲ್ಲವಾ?

ಏಕಾಂತವ್ಯಾತಕೆ? ಆತ ಮೊದಲಿನಂತಿಲ್ಲವಾ?
Updated on: 

ಮದುವೆಯ ಹೊಸತರಲ್ಲಿ ನನ್ನ ಗಂಡ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಯಾಕೋ ಕೆಲಸ ಆಫೀಸು ಅಂತ ಸದಾ ಬ್ಯುಸಿ ಆಗಿಯೇ ಇರುತ್ತಾರೆ. ವೀಕೆಂಡ್‌ನಲ್ಲೂ ಹೆಚ್ಚಾಗಿ ನನ್ನ ಜೊತೆ ಕಾಲ ಕಳೆಯುವುದಿಲ್ಲ. ಇದು ಇಂದಿನ ಸಿಟಿ ಮಹಿಳೆಯರ ಪ್ರತಿದಿನದ ಆರೋಪ. ಗಂಡ ಹೆಂಡತಿ ಇಬ್ಬರೂ ದುಡಿಯುವವರಾದರೆ ಈ ತೊಂದರೆ ಹೆಚ್ಚಾಗಿ ಬರದಿರಬಹುದು. ಆದರೆ ಮನೆಯಲ್ಲಿ ಇರುವ, ಸಿಟಿಯಲ್ಲಿ ಬದುಕುತ್ತಿರುವ ಮಹಿಳೆಯರಿಗೆ ಇಂಥ ಹತ್ತು ಹಲವು ಸಮಸ್ಯೆಗಳು. ಇದರಲ್ಲಿ ಯಾರದು ತಪ್ಪು, ಯಾರದು ಸರಿ ಎಂದು ಹೇಳಲಾಗುವುದಿಲ್ಲ. ಆದರೂ ಹೆಂಡತಿಯಾಗಿ ಕೆಲವು ಸಲಹೆಗಳನ್ನು ಪಾಲಿಸಿ ನೋಡಿ. ನಂತರ ಗಂಡನನ್ನು ದೂರಬಹುದು.
=      'ಅನ್ಯೋನ್ಯ ಸಂಸಾರ ಬಾಳೆ ಬಂಗಾರ' ಎಂಬ ರೀತಿಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಚಕ್ರ ಉರುಳಿಸಬೇಕು. ಪ್ರತಿ ಕೆಲಸವನ್ನೂ ನಗುನಗುತ್ತಾ ಉಲ್ಲಾಸದಿಂದ ಮಾಡಿ. ಇದು ಆತನಲ್ಲಿ ಉತ್ಸಾಹ ಮೂಡಿಸುತ್ತದೆ.
=      ಮನೆಯನ್ನು ಸುಂದರವಾಗಿ ಅಲಂಕರಿಸಿ. ಹಾಲ್ ಮತ್ತು ಮಲಗುವ ಕೋಣೆಯನ್ನು ಆದಷ್ಟು ಆಕರ್ಷಕವಾಗಿರುವಂತೆ ನೋಡಿಕೊಳ್ಳಿ.
=      ನಿಮ್ಮ ಮಾತು ಆತನ ಮನಸ್ಸಿಗೆ ತಂಪು ನೀಡುವಂತಿರಲಿ. ಮನೆಗೆ ಸಾಮಾನು ಕೊಳ್ಳಲು ಆತನ ಬಿಡುವಿನ ವೇಳೆಯಲ್ಲಿ ಶಾಪಿಂಗ್ ಹೋಗಿ ಬನ್ನಿ. ಮೊದಲನೆ ಬಾರಿ ಕರೆದಾಗ ಬರಲಿಲ್ಲ ಎಂದು ಕೊಪಿಸಿಕೊಳ್ಳಬೇಡಿ. ಮತ್ತೊಂದು, ಮಗದೊಂದು ಅವಕಾಶ ನೀಡಿ. ಆತನಿಗೆ ನಿಮ್ಮ ಮೇಲೆ ಗೌರವ, ಪ್ರೀತಿ ಹೆಚ್ಚಾಗಿ ನಿಮ್ಮೊಂದಿಗೆ ಬಂದೇ ಬರುತ್ತಾನೆ.
=      ಮದುವೆಯಾದ ಹೊಸತರಲ್ಲಿ ಮಾತ್ರ ಹೋಗುತ್ತಿದ್ದವರು, ಈಗ ಸುಮ್ಮನಾಗಿಬಿಟ್ಟಿದ್ದರೆ ಮತ್ತೊಮ್ಮೆ ಸಿನಿಮಾಗೆ ಹೋಗೋಣ ಎಂದು ಕೇಳಿ. ಆತನ ಮನಸ್ಸು ಒತ್ತಡಗಳಿಂದ ಮುಕ್ತಗೊಳ್ಳುತ್ತದೆ. ನಿಮ್ಮ ಪ್ರೀತಿಯ ಮಾತಿಗೆ ಮಗುವಂತೆ ನಿಮ್ಮ ತೋಳಲ್ಲಿ ವಾಲುತ್ತಾರೆ.
=      ಮಹಿಳೆಯರ ಶಕ್ತಿ ಎಂದರೆ ಅಡುಗೆ. ನಿಮಗೆ ಗೊತ್ತಿಲ್ಲದೆಯೇ ಕೋಪ ಬಂದಾಗ ಅಡುಗೆ ಖಾರವಾಗಿ, ಸಂತೋಷದಿಂದಿದ್ದಾಗ ರುಚಿಕರವಾಗಿ ಅಡುಗೆ ತಯಾರಾಗುತ್ತದೆ. ನಿಮ್ಮ ಅಡುಗೆ ನಿಮ್ಮ ಗಂಡನನ್ನು ಖುಷಿಯಾಗಿರಿಸಬಲ್ಲುದೆಂದರೆ ಹತ್ತು ನಿಮಿಷ ಸಂತೋಷದಿಂದ ಅಡುಗೆ ಮಾಡಲಾರಿರ?
=      ಗಂಡನನ್ನು ಸ್ವಲ್ಪ ಅಣಕಿಸಿ, ಸ್ವಲ್ಪ ಕೋಪಿಸಿಕೊಳ್ಳಿ, ಸ್ವಲ್ಪ ರೇಗಿಸಿ. ಜಗಳವೇ ಇಲ್ಲದ ಸಂಸಾರ ನಿಜಕ್ಕೂ ಬೋರು. ಹಾಗಂತ ಜಗಳವೇ ಸಂಸಾರವಾಗದಿರಲಿ.  
=   ಗಂಡನೊಂದಿಗೆ ಕುಳಿತು ಕ್ರಿಕೆಟ್ ಅಥವ ಫುಟ್‌ಬಾಲ್ ನೋಡಿ. ಒಂದಿನವಾದರೂ ನಿಮ್ಮ ಗಂಡನಿಗೆ ಸೀರಿಯಲ್ ಅಳುವಿನಿಂದ ಮುಕ್ತಿ ನೀಡಿ.
=   ಗಂಡನ ಮುಂದೆ ಅಪೇಕ್ಷೆಗಳ ಲಿಸ್ಟ್ ನೀಡಬೇಡಿ. ಆತನಿಗೆ ನೀವು ಹೆಚ್ಚೆಚ್ಚು ಖರ್ಚು ಮಾಡುತ್ತಿದ್ದೀರಿ ಅಥವಾ ಮಾಡಿಸುತ್ತಿದ್ದೀರಿ ಎಂಬ ಯೋಚನೆ ಬಾರದಿರಲಿ.
=      ಯೋಜನೆ, ಯೋಚನೆಯಲ್ಲಿ ಸಮಾನತೆ ಇರಲಿ. ಆತ ಹೇಳುವುದನ್ನು ಗಮನವಿಟ್ಟು ಕೇಳಿ. ತಪ್ಪಿದ್ದರೆ ಮೊದಲು ಆತನ ಮಾತಿಗೆ ಒಪ್ಪಿಗೆ ನೀಡಿ ನಂತರ ತಿದ್ದಿ.
=  ಆತನ ಮೇಲೆ ಒಂದು ಕಣ್ಣಿರಿಸಿ. ಆದರೆ ಆತನನ್ನು ಅನುಮಾನಿಸುತ್ತಿದ್ದೀರಿ ಎಂಬ ಭಾವನೆ ಮೂಡದಿರಲಿ.      

-ಶಾಯಿಸ್ತಾ ಮೆಹರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com