

ಬೆಳ್ತಂಗಡಿಯಿಂದ ಮೂರೇ ಕಿಲೋಮೀಟರ್ ದೂರ. ಕಾಡುಮೇಡು ಹೊಲದ ಬದುಗಳಲ್ಲಿ ಹರಿದ ರೇಖೆಯಂಥ ಹಾದಿಯಲ್ಲಿ ನಿಸರ್ಗದ ಸೊಬಗು ಸವಿಯುತ್ತ ಸಾಗಿದರೆ ಸಿಗುವ ಊರು ಪಂಜಿಪರು.
ಕಾಡುಹಂದಿಗಳು ಮೇಯುತ್ತಿದ್ದ ಈ ಪ್ರದೇಶಕ್ಕೆ ತುಳುಭಾಷೆಯಲ್ಲಿ ಹಂದಿ ಇರುವ ಜಾಗವೆಂದೇ ಕರೆದರು. ಇಲ್ಲಿದೆ 1868ರಲ್ಲಿ ಕಟ್ಟಿದ ಅತ್ಯಂತ ಹಳೆಯ ಪುಟ್ಟ ಮನೆ. ಅಂಗಳಕ್ಕೆ ಕಾಲಿಡುವಾಗ ಮಳೆನೀರಿಗೆ ಜಾರದಂತೆ ಹಾಕಿದ್ದು ಸಿಮೆಂಟ್ ಇಟ್ಟಿಗೆಗಳಲ್ಲ. ಬದಲಾಗಿ ತೆಂಗಿನ ಗರಿಗಳ ಮೃದು ಹಾಸು. ಪೂರ್ವಾಭಿಮುಖವಾಗಿರುವ ಮನೆಯ ಹೆಬ್ಬಾಗಿಲಿನ ಎತ್ತರ ಕೇವಲ ನಾಲ್ಕು ಅಡಿ. ಯಾರಿಗೂ ತಲೆಭಾಗದವರು ಇಲ್ಲಿ ಒಳಗಡಿಯಿಡಲು ತಲೆಭಾಗದೆ ವಿಧಿಯಿಲ್ಲ. ಮನೆಯೊಳಗಿರುವ ಆರು ಬಾಗಿಲುಗಳು ಕೂಡ ಇದೇ ರೀತಿ.
150 ವರ್ಷಗಳ ಹಿಂದೆ ನಿರ್ಮಿಸಿದ ಈ ಮನೆಯ ಮಹಡಿಯಲ್ಲಿ 1868ರ ಮಂಗಳೂರು ಹೆಂಚುಗಳಿವೆ. ಪುರೋಹಿತರಾಗಿ ಬಂಟ್ವಾಳದ ಸರಪಾಡಿಯಿಂದ ಇಲ್ಲಿಗೆ ಬಂದ ಶಿವ ಐತಾಳರು ಕಟ್ಟಿಸಿದ ಮನೆಯಿದು. ಅಲ್ಲೀಗ ನಾಲ್ಕನೆಯ ತಲೆಮಾರಿನ ಗಣಪತಿ ಐತಾಳರು ತಮ್ಮ ಪುತ್ರ 5ನೇ ತಲೆಮಾರಿನ ಕುಡಿ ಶಿವಪ್ರಸಾದ ಮತ್ತು ಮಡದಿ ಸರೋಜ ಅವರೊಂದಿಗೆ ಸಂಸಾರ ಹೂಡಿದ್ದಾರೆ.
ಮಣ್ಣನ್ನು ಕಲೆಸಿ ಹುಳಿ ಬರಿಸಿ ಹದಮಾಡಿಟ್ಟ ಗೋಡೆಗಳ ದಪ್ಪ ಎರಡೂವರೆ ಅಡಿ. ಮಣ್ಣಿನ ಗೋಡೆ ಇಷ್ಟು ದಪ್ಪವಿದ್ದರೆ ಏನು ಲಾಭ ಎಂದರೆ, ಬೇಸಗೆಯಲ್ಲಿ ಫ್ಯಾನೂ ಬೇಡ ಮತ್ತು ಹೆಚ್ಚು ತಂಪು. ಮಳೆಗಾಲದಲ್ಲಿ ಕಂಬಳಿ ಕೂಡ ಅನಗತ್ಯ.
ಮನೆ ಕಟ್ಟುವಾಗ ಧಾರಾಳ ಮರಮಟ್ಟು ಇದ್ದುದರಿಂದ ದಪ್ಪ ಮರದ ಸೀಳುಗಳನ್ನೇ ತೊಲೆಗಳಾಗಿ ಬಳಸಿದ್ದಾರೆ. (ಈಗ ಮೂರು ಮನೆಗೆ ಕಟ್ಟಿಗೆ ಆಗುತ್ತಿದ್ದವು). ಗೆದ್ದಲು ಬಾಧಿಸಿಲ್ಲ. ಇನ್ನೊಂದು ಶತಮಾನಕ್ಕೂ ಜಗ್ಗದಂತಿದೆ. ಆಗ 25 ಮಂದಿ ನಿತ್ಯ ಊಟ ಮಾಡುತ್ತಿದ್ದ ಮನೆ. ಅಷ್ಟೊಂದು ದೊಡ್ಡ ಪ್ರಮಾಣದ ಅಡುಗೆಗೆ ಅಕ್ಕಿ ಮತ್ತು ತೆಂಗಿನಕಾಯಿ ಅರೆಯಲು ಬಳಸುತ್ತಿದ್ದ ಬೃಹತ್ ಕಡೆಯುವ ಕಲ್ಲು ಬಳಕೆಯಲ್ಲಿಲ್ಲ.
870 ಚದರಡಿಗಳ ಮನೆ ಎದುರು ಭಾಗಕ್ಕೆ ಚಾವಡಿ. ಆಮೇಲೆ ದೇವರಕೋಣೆ, ಊಟದ ಕೋಣೆ, ಅಡುಗೆ ಕೋಣೆ. ಇವುಗಳನ್ನು ಬಿಟ್ಟರೆ ಬೇರೆ ಕೋಣೆಗಳಿಲ್ಲ. ಸಾಕಷ್ಟು ಹಳೇಕಾಲದ ಪಂಚಲೋಹದ ಸಾಮಗ್ರಿಗಳು ಇವರಲ್ಲಿವೆ. ಉಪ್ಪರಿಗೆ ಏರಲು ಮರದಿಂದ ನಿರ್ಮಿಸಿದ ಆ ಕಾಲದ ಏಣಿ ಇನ್ನೂ ಹೊಸದರಂತಿದೆ.
ಶಿವ ಐತಾಳರು ಹೋಮಹವನ ಮಾಡಿಸಿದರೆ ದಕ್ಷಿಣೆ ಸ್ವೀಕರಿಸುತ್ತಿರಲಿಲ್ಲ. ಕೆಲಸದಾಳುಗಳ ಮನೆಯ ಸಮಾರಂಭಕ್ಕೆ ಚಿನ್ನದ ಡಾಲರುಗಳ ಕೊಡುಗೆ ನೀಡುತ್ತಿದ್ದರೆಂಬ ಪ್ರತೀತಿಯಿದೆ.
ಹಳೇ ಮನೆಯಲ್ಲಿದ್ದೇವೆ. ತಾರಸಿ ಮನೆ ಬೇಕು ಎಂಬ ಆಕಾಂಕ್ಷೆ ಒಂದಿಷ್ಟೂ ಮನೆಮಂದಿಗಿಲ್ಲ. ಹಿರಿಯರು ಕಟ್ಟಿದ ಮನೆಯಲ್ಲೇ ಬಾಳುತ್ತಿರುವ ಸಂತೋಷ, ಮುಖದ ತುಂಬ ಅರಳುತ್ತಿದೆ. ಸಂಸ್ಕಾರ ಸಂಸ್ಕೃತಿಗಳ ನಡವಳಿಕೆ. ಅತಿಥಿ ಸತ್ಕಾರ ದಾನಧರ್ಮ ಪರಂಪರಾಗತವಾಗಿ ಬಂದದ್ದು ಐದನೇ ತಲೆಮಾರಿನಲ್ಲೂ ಶಾಸನಬದ್ಧವಾಗಿ ಸಾಗಿದೆ. ಮನೆಯೆದುರಲ್ಲಿ ಸ್ಫಟಿಕದಂತೆ ಶುದ್ಧವಾಗಿರುವ, ಎಳನೀರಿನಂತೆ ಸಿಹಿಯಿರುವ ತಣ್ಣಗೆ ಕೊರೆಯುವ ಬಾವಿಯಿದೆ. ಇದು ದೇವರ ದೃಷ್ಟಿ ಕೆರೆ ಎನ್ನುತ್ತಾರೆ ಐತಾಳರು.
ಹಳೇಮನೆಯ ಮಣ್ಣಿನ ಗೋಡೆಗಳಿಗೆ ಮಧುರ ಕಂಠದಿಂದ ಹಾಡಿ ಹೊಸ ಕಳೆ ತುಂಬುತ್ತಾರೆ. ಇದರೊಂದಿಗೆ ರೇಖಿ ಚಿಕಿತ್ಸೆಯಲ್ಲೂ ನಿಪುಣರು. (ಮೊ. 9481021161).
- ಪ. ರಾಮಕೃಷ್ಣ ಶಾಸ್ತ್ರಿ