ಅಂದರ್ ಬಾರು!

ಅಂದರ್ ಬಾರು!
Updated on: 

ವೈಭವೀಕರಣದ ನಗರಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಈಗಾಗಲೆ ಹೋಂ ಬಾರ್‌ಗಳು ಬಿಂದಾಸಾಗಿ ತಲೆಯೆತ್ತುತ್ತಿವೆ. ಭಗವಂತನಿಗೊಂದು ಚಿಕ್ಕ ಕೋಣೆ ಪ್ರತಿ ಮನೆಗಳಲ್ಲೂ ಮೀಸಲಾಗಿರುತ್ತಿತ್ತು. ಇನ್ನು ಮುಂದೆ ಪರಮಾತ್ಮನಿಗೂ ಒಂದು ಕೋಣೆ ಮುಡಿಪಾಗುವ ದಿನ ದೂರವಿಲ್ಲ.

ಹೋಂ ಲೈಬ್ರರಿ ಬುದ್ಧಿವಂತರ ಮನೆಗಳಲ್ಲಿ ಕಾಣಸಿಗುವ ಜ್ಞಾನ ದೇಗುಲ. ಆಸಕ್ತಿಯುತ ವಿಷಯಗಳಿಗೆ ಹೊಂದಿಕೊಂಡಂತೆ ಪುಸ್ತಕ ಸಂಗ್ರಹಿಸಿಡುವ ಖಯಾಲಿ ಇಂದು ನಿನ್ನೆಯದೇನಲ್ಲ. ಕಾಲ ಬದಲಾದಂತೆ ಇಂಥದ್ದೇ ವೇಷದಲ್ಲಿ ಉದ್ಭವಿಸಿದ್ದು ಹೋಂ ಥಿಯೇಟರ್. ಸ್ನೇಹಿತರು, ನೆಂಟರು ಮನೆಗೆ ಬಂದಾಗ, ಎಲ್ಲರೂ ಒಟ್ಟಾಗಿ ಮನರಂಜನೆ ಪಡೆಯುವ ದೂರದೃಷ್ಟಿ. ಹಲವಾರು ಸಿನಿಮಾಗಳನ್ನು ಡೌನ್‌ಲೋಡ್ ಮಾಡಿಯೋ, ಸಿಡಿ ಮೂಲಕವೋ ಸಂಗ್ರಹಿಸಿಡುವುದು ವೇಗವಾಗಿ ಬೆಳೆದು ಬಂದ ಟ್ರೆಂಡ್.

ಇಂಥ ಪ್ರಯೋಗಗಳಿಗೆ ಪರ್ಯಾಯವಾಗಿ ಇತ್ತೀಚಿನ ದಿನಗಳಲ್ಲಿ ಮೋಡಿ ಮಾಡುತ್ತಿರುವುದು ಹೋಂ ಬಾರ್. ಕಲ್ಪನೆಗೂ ನಿಲುಕದ ಬೆಳವಣಿಗೆಯೆಂದು ನೇರವಾಗಿ ಹೇಳಬಹುದು. ಊರಲ್ಲಿರೋ ಬಾರ್ ಬಂದ್ ಮಾಡಬೇಕೆಂದು ಗ್ರಾಮದ ಮಹಿಳೆಯರೆಲ್ಲ ಬೀದಿಗಿಳಿದಿರೋವಾಗ ಇದು ಸಾಧ್ಯವಾ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಏಳದಿರದು. ಆದರೆ, ಈ ಪ್ರಶ್ನೆಗೆ ಉತ್ತರ ಇಲ್ಲದಿಲ್ಲ. ಕಾರಣ, ಹೋಂ ಬಾರ್ ಒಳಗೆ ಬಂದಾಗಿದೆ. ಆದರೆ, ಸಾಮಾನ್ಯರು ಅಥವಾ ಮಧ್ಯಮ ಮನೆಯವರಲ್ಲಿ ಅಲ್ಲ. ಬದಲಾಗಿ ಶ್ರೀಮಂತರ ದೊಡ್ಡ ನಿವಾಸಗಳಲ್ಲಿ.
ಅಡುಗೆ ಮನೆಯಲ್ಲಿ ಸ್ಥಾನ ಪಡೆದಿರುವ ಫ್ರಿಡ್ಜ್‌ಗಳಂತೆ ಹೋಂ ಬಾರ್‌ಗಳೂ ಒಳಗೆ ಬರಲು ಕಾತರಿಸುತ್ತಿವೆ. ಮಿನಿ ಬಾರ್ ಮನೇಲಿದ್ರೆ ಮಾನ ಮರ್ಯಾದೆ ಉಳಿಯುತ್ತೆ ಅಂತಿದ್ದಾರಂತೆ ಬಾರ್ ಪ್ರಿಯರ ಅರ್ಧಾಂಗಿಯರು. ಬೆಂಗಳೂರಿನಂಥ ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಈ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುವುದು ಇನ್ನೊಂದು ಪ್ರಮುಖ ಅಂಶ.

ಆದರೆ, ಇದೆಲ್ಲ ಮಾಡರ್ನ್ ಮಡದಿಯರಿಗೆ ಸಮಸ್ಯೆಯಾಗಿಲ್ಲ. ಬದಲಾಗಿ ಸಮಸ್ಯೆಯಾಗಿದ್ದು ಬಾರ್ ಮಾಲೀಕರಿಗಂತೆ! ಮದ್ಯ ಮನೆಯಲ್ಲೇ ಸಿಗೋದ್ರಿಂದ ದಾರಿಯಲ್ಲಿ ತೂರಾಡೋ ಬವಣೆ ನಿಲ್ಲುತ್ತದೆ ಎಂಬ ಸಬೂಬೂ ಬೇರೆ ಮಡದಿಯರದು. ಅನಗತ್ಯ ಬೀದಿ ಜಗಳ ತಪ್ಪುತ್ತದೆ ಎಂಬ ಸಮಾಧಾನ ಬೇರೆ. ಮದಿರೆ ಸೇವನೆ ಹಾದಿ ಜಂಜಾಟದ ಕಾರಣವಾಗುವ ಸಂಭವ ಹೆಚ್ಚು. ಹಾಗಾಗಿ ಆಲ್ಕೋಹಾಲ್ ಮನೆಯಲ್ಲಿದ್ದರೆ ಅಮಲು ಬಂದು ಅವಘಡವಾಗುವ ಸಾಧ್ಯತೆ ಕಡಿಮೆಯೆಂಬುದು ಹೋಂ ಬಾರ್ ಮಾಲೀಕರ ಮನದಾಳದ ಮಾತು.

ತಿಳಿದಿರುವ ಹಾಗೆ ಅಮಲು ತರಿಸುವ ಪಾನಿಯಗಳ ಬಾಟಲ್‌ಗಳಿಂದ ಬಹು ವಿನ್ಯಾಸ ಮತ್ತು ವಿಶೇಷ ಮೆರುಗು ನೀಡಬಹುದು ಎಂಬುದು ಮತ್ತೊಂದು ವಿಚಾರ. ಅದು ಆಕರ್ಷಣೆ ಕೂಡ. ಹೀಗಾಗಿ ಕಾಲಿ ಮದ್ಯ ಭರಣಿಗಳನ್ನು ಸಂಗ್ರಹಿಸಿಡುವ ಹವ್ಯಾಸ ಹಲವರದ್ದು. ಮದಿರೆ ತುಂಬಿದ ಬಾಟಲ್‌ಗಳೂ ಸಾಕಷ್ಟು ಮೆರುಗು ನೀಡುವುದರಿಂದ ಶೋಕೇಸಾಗಿ ಶೋಭಿಸುವುದರಲ್ಲಿ ಎರಡು ಮಾತಿಲ್ಲ. ಗಾಜಿನ ಲೋಟಗಳು ಆಲ್ಕೋಹಾಲ್ ಹೀರಲೆಂದೇ ತಯಾರಾದವುಗಳು ಎಂದರೆ ಬಹುಶಃ ತಪ್ಪಿಲ್ಲ. ಹಾಗಾಗಿ ಹೋಂ ಬಾರ್‌ಗಳಲ್ಲಿ ವಿಧವಿಧ ವಿನ್ಯಾಸಿತ ಗಾಜಿನ ಲೋಟಗಳೂ ನೆಲೆಯೂರುತ್ತವೆ.

- ಮಂಜುನಾಥ್ ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com