ಆರ್ಟ್ ಆಫ್ ಲಿವಿಂಗ್

ಆರ್ಟ್ ಆಫ್ ಲಿವಿಂಗ್
Updated on: 

ಅವಳು ಆ ಮನೆಯ ಭಾಗ್ಯಲಕ್ಷ್ಮೀ. ಇವಳು ಹುಟ್ಟಿದ ಮೇಲೇ ಆ ಮನೆಯ ಆರ್ಥಿಕ ಮಟ್ಟ ಸುಧಾರಿಸಿದ್ದು. ಅದಕ್ಕಾಗಿಯೇ ಇವಳೆಂದರೆ ಹೆತ್ತವರಿಗೆ ಮೊದಲಿನ ಇಬ್ಬರು ಮಕ್ಕಳಿಗಿಂತ ಒಂದು ಕೈ ಪ್ರೀತಿ ಜಾಸ್ತಿ.
ಜೀವನದ ಯಾವ ಕಷ್ಟವೂ ಬರಬಾರದೆಂದು ತಂದೆ ಕಣ್ಣಲ್ಲಿ ಕಣ್ಣಿಟ್ಟು ತಮ್ಮೆಲ್ಲ ಪ್ರೀತಿಯನ್ನು ಆಕೆಗೆ ಧಾರೆಯೆರೆದು ಬೆಳೆಸಿದರು. ಅವಳು ಏನು ಕೇಳಿದರೂ ಇಲ್ಲ ಎಂಬ ಮಾತೇ ಅವರ ಬಾಯಿಂದ ಬರುತ್ತಿರಲಿಲ್ಲ.
ಹೀಗೆ ಮುದ್ದಾಗಿ ಸಾಕಿದ ಮಗಳನ್ನು ಉನ್ನತ ಉದ್ಯೋಗದಲ್ಲಿರುವ, ಮನೆಯ ಕಡೆಯೂ ತುಂಬಾ ಶ್ರೀಮಂತರಾಗಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದರು.
ಆದರೆ ವಧುವಿನ ಅರಿಶಿನದ ಮೈ ಆರುವ ಮುನ್ನವೇ ಗಂಡ- ಹೆಂಡತಿ ನಡುವೆ ಸಣ್ಣ ಬಿರುಕು ಮೂಡಲಾರಂಭಿಸಿತು. ಇಬ್ಬರಲ್ಲಿ ಯಾರೊಬ್ಬರೂ ಕಾಂಪ್ರಮೈಸ್ ಆಗದಿದ್ದಾಗ ಮೊದಲ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳುವ ಭಾಗ್ಯವೂ ಅವರಿಗೆ ಬರಲಿಲ್ಲ. ಅವಳು ಉತ್ತರ ಆದರೆ ಈತ ದಕ್ಷಿಣ. ಈಕೆ ತವರು ಮನೆ ಸೇರಿದಳು. ಆತ ಇನ್ನೊಬ್ಬಳ ಕುತ್ತಿಗೆಗೆ ಮೂರು ಗಂಟು ಹಾಕಿದ್ದ.
ಇಂಥ ಹಲವಾರು ಘಟನೆಗಳು ನಿತ್ಯ ನಮ್ಮ ಸುತ್ತ ನಡೆಯುತ್ತಲೇ ಇರುತ್ತವೆ. ಮದುವೆಯಾಗಿ ವರ್ಷ ಕಳೆಯುವ ಮುನ್ನವೇ ಮಗಳು ತವರು ಮನೆ ಸೇರಿದರೆ ಯಾವ ತಂದೆ- ತಾಯಿಗೂ ಸಹಿಸಲಾರದಷ್ಟು ಹಿಂಸೆ ಆಗುತ್ತದೆ. ಆದರೆ ಮಗಳ ಇಂಥ ಸ್ಥಿತಿಗೆ ನಾವು ಬೆಳೆಸಿದ ರೀತಿಯೇ ಕಾರಣ ಎಂಬ ಕಹಿ ಸತ್ಯ ಮಾತ್ರ ಅವರ ಅರಿವಿಗೆ ಬರುವುದೇ ಇಲ್ಲ.
ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ನಿಜ. ಆದರೆ ಅವರಿಗೆ ಜೀವನದ ಪ್ರತಿ ಪಾಠವನ್ನೂ ಹೇಳಿಕೊಡಬೇಕು. ಹೆಣ್ಣು ಮಕ್ಕಳಿಗೆ ಮದುವೆಯಾದ ಮೇಲೆ ಅತ್ತೆ ಮನೆಯಲ್ಲಿ ನಡೆದುಕೊಳ್ಳಬೇಕಾದ ರೀತಿಯನ್ನೂ ತಿಳಿಸಿಕೊಡಬೇಕು. ಹೆತ್ತವರಿಗೆ ಎದುರು ಮಾತನಾಡುವಂತೆ ಅತ್ತೆ ಮನೆಯಲ್ಲಿ ಮಾತಾಡಿದರೆ ಏಕಾಗಿ ಅವರು ಅದನ್ನೆಲ್ಲ ಸಹಿಸಿಕೊಳ್ಳಬೇಕು?
ಇತ್ತ ಅತ್ತೆ ಮನೆಯವರೂ ಅಷ್ಟೇ, ಆಗ ತಾನೆ ಮದುವೆಯಾಗಿ ತನ್ನವರನ್ನೆಲ್ಲ ಬಿಟ್ಟು ಬಂದಿದ್ದಾಳೆ. ಆಕೆಗೆ ಇಲ್ಲಿಯ ಜೀವನ ಇನ್ನೂ ಹೊಸದು. ಆಕೆಗೆ ಜೀವನದ ಅನುಭವ ಏನೇನೂ ಇಲ್ಲ ಎಂಬುದನ್ನು ತಿಳಿದು ಅದನ್ನೆಲ್ಲ ತಾಳ್ಮೆಯಿಂದ ಆಕೆಗೆ ತಿಳಿಸಿ ಹೇಳಬೇಕು. ಅದು ಬಿಟ್ಟು ಮದುವೆಯಾಗಿ ಬಂದ ದಿನದಿಂದಲೇ ಆಕೆಯ ಮೇಲೆ ದಬ್ಬಾಳಿಕೆಗೆ ಮುಂದಾದಾಗ ಪ್ರತಿ ಹೆಣ್ಣೂ ಕಂಗಾಲಾಗುತ್ತಾಳೆ. ಅದರಲ್ಲೂ ಹೆತ್ತವರ ಕಣ್ಮಣಿಯಾಗಿ, ಯಾವುದಕ್ಕೂ ಕೊರತೆಯಿಲ್ಲದಂತೆ, ತಾನು ಮಾಡಿದ್ದೇ ಸರಿ ಎಂಬಂತೆ ಬೆಳೆದು ಬಂದ ಹೆಣ್ಣು ಮಕ್ಕಳಿಗೆ ತನ್ನ ಅತ್ತೆ ಮನೆಯಲ್ಲಿ ತನಗಾಗುವ ಸೋಲನ್ನು ಸಹಿಸಿಕೊಳ್ಳಲಾಗುವುದಿಲ್ಲ.
ಹಾಗಾಗಿ ಗಂಡ, ಅತ್ತೆ, ಮಾವ ಹೀಗೆ ಗಂಡನ ಮನೆಯವರು ಮೊದಲು ಆಕೆಗೆ ಪ್ರೀತಿಯಿಂದಲೇ ತಮ್ಮ ಮನೆಯ ನೀತಿನಿಯಮಗಳನ್ನು ತಿಳಿಸಿಕೊಡಬೇಕು. ತಮ್ಮ ಮನೆ ಬೆಳಗಲು ತನ್ನವರನ್ನು, ತಾನು ಬೆಳೆದ ವಾತಾವರಣವನ್ನೂ ಬಿಟ್ಟು ಬಂದಿದ್ದಾಳೆ ಎಂಬುದು ಸಣ್ಣ ಸಂಗತಿಯಲ್ಲ. ಹೆತ್ತವರು ಕೊಡುತ್ತಿದ್ದ ಪ್ರೀತಿಗೆ ಕೊರತೆಯಾಗದಂತೆ ಅವಳಿಗೂ ತಮ್ಮ ಪ್ರೀತಿಯ ಧಾರೆ ಎರೆಯಬೇಕು.
ಮಗ- ಸೊಸೆ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳುವಂತೆ ಅವರಷ್ಟಕ್ಕೆ ಅವರನ್ನು ಬಿಡಬೇಕು. ಎಲ್ಲದಕ್ಕೂ ತಾವು ಮೂಗು ತೂರಿಸಲು ಹೋಗಬಾರದು. ಹೆಂಡತಿಯನ್ನು ಖುಷಿಯಾಗಿಡುವಂತೆ ಮಗನಿಗೆ ತಿಳಿ ಹೇಳಬೇಕು. ಮಗ ಹೆಂಡತಿಯೊಂದಿಗೆ ಜಗಳವಾಡುವಾಗ ಅದಕ್ಕೆ ತುಪ್ಪ ಸುರಿದು ಮತ್ತಷ್ಟು ಉರಿಯುವಂತೆ ಮಾಡದೆ ತಮ್ಮಷ್ಟಕ್ಕೆ ತಾವು ಸುಮ್ಮನಿರಬೇಕು. ಸೊಸೆ ಮಾಡಿದ್ದು ತಪ್ಪೇ ಆದರೂ ಆ ಸಂದರ್ಭದಲ್ಲಿ ಸೊಸೆಯ ಪರವಾಗೇ ನಿಲ್ಲಬೇಕು. ಆ ನಂತರ ಸೊಸೆಗೆ ಅವಳು ಮಾಡಿದ ತಪ್ಪನ್ನು ಜಾಣ್ಮೆಯಿಂದ ತಿಳಿಸಿ ಹೇಳಬೇಕು. ತಾನೂ ಈ ಮನೆಗೆ ಸೊಸೆಯಾಗಿಯೇ ಬಂದವಳು. ತಾನೂ ನಿನ್ನಂತೆ ತವರು ಮನೆಯಲ್ಲಿ ರಾಣಿಯಂತೆ ಬೆಳೆದವಳು. ನನಗೂ ನಿನ್ನಂಥೆ ಜೀವನದ ಯಾವ ಅನುಭವವೂ ಇರಲಿಲ್ಲ. ಆದರೆ ಈಗ ನೋಡು ನಾನು ಸೊಸೆಯಾಗಿ ಈ ಮನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದೆ. ಇನ್ನು ಮಂದೆ ಈ ಜವಾಬ್ದಾರಿ ನಿನ್ನದು. ನಿನಗೆ ಬೆನ್ನೆಲುಬಾಗಿ ನಾನು ನಿಲ್ಲುತ್ತೇನೆ ಎಂದು ತಮ್ಮ ಅನುಭವಗಳನ್ನು ಸೊಸೆಗೆ ಮನದಟ್ಟು ಮಾಡಿಸಬೇಕು.  ಆಗ ಎಂಥ ಕಲ್ಲು ಮನಸ್ಸಿನವಳೂ ಅತ್ತೆಯನ್ನು ತಾಯಿಯಂತೆ ನೋಡಲಾರಂಭಿಸುತ್ತಾಳೆ. ತವರು ಮನೆ ಬಿಟ್ಟು ಬಂದರೇನಂತೆ ಇದೂ ನನ್ನ ಮನೆ, ಇಲ್ಲಿ ಇರುವವರೆಲ್ಲ ತನ್ನವರೇ, ಅವರನ್ನೂ ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ಸತ್ಯ ಸೊಸೆಗೆ ಅರ್ಥವಾಗುತ್ತದೆ. ಹೀಗಾದಾಗಲೇ ಪ್ರತಿ ಹೆಣ್ಣಿನ ಬಾಳೂ ಹಸನಾಗುತ್ತದೆ.
ಪ್ರತಿ ಮನೆಯೂ ನಂದಗೋಕುಲವಾಗುತ್ತದೆ. ಇಲ್ಲದಿದ್ದರೆ ವಿವಾಹ ಜೀವನ ಹೂವಾಗಿ ಅರಳುವ ಮುನ್ನವೇ ಮುದುಡಿಹೋಗುತ್ತದೆ.

- ಚಿತ್ರಾ.ಸಿ.ಆರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com